ಕನ್ನಡಪ್ರಭ ವಾರ್ತೆ ಬೆಂಗಳೂರು
ಸ್ಪಾ ಹೆಸರಿನಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿ, ಆರು ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.
ಸ್ಪಾ ಮ್ಯಾನೇಜರ್ ನವೀನ್(26) ಮತ್ತು ಸಹಾಯಕ ಭರತ್ ಸಿಂಗ್(27) ಬಂಧಿತರು. ದಾಳಿ ವೇಳೆ ಮೂರು ಸಾವಿರ ರು. ನಗದು, ಎರಡು ವಾಕಿಟಾಕಿ, ಮೊಬೈಲ್, ಸ್ವಾಪಿಂಗ್ ಯಂತ್ರ, ಕಾಂಡೋಮ್ಸ್ ಸೇರಿದಂತೆ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ಸ್ಪಾದ ಮಾಲೀಕ ಭೀಮಾ ನಾಯಕ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರತ್ತಹಳ್ಳಿಯ ಹೊರವರ್ತುಲ ರಸ್ತೆಯ ಲಕ್ಷದೀಪ ಕಾಂಪ್ಲೆಕ್ಸ್‌ನ 1ನೇ ಮಹಡಿಯ ವಿಐಪಿ ಹೆಸರಿನ ಸ್ಪಾದಲ್ಲಿ ಹೊರರಾಜ್ಯದ ಹುಡುಗಿಯರನ್ನು ಇರಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು.
ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಸ್ಪಾ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ದೆಹಲಿ, ಪಶ್ಚಿಮ ಬಂಗಾಳ, ಅಸ್ಸಾಂ, ಥೈಲ್ಯಾಂಡ್ ಮೂಲದ ಆರು ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.
ಸ್ಪಾ ಮಾಲೀಕ ಭೀಮಾ ನಾಯಕ್, ನವೀನ್, ಭರತ್ ಸಿಂಗ್ ರಾಜ್ಯ ಹಾಗೂ ಹೊರರಾಜ್ಯದ ಅಮಾಯಕ ಮಹಿಳೆಯರಿಗೆ ಉದ್ಯೋಗ ಆಸೆ ತೋರಿಸಿ ಸ್ಪಾಗೆ ಕರೆತಂದು ಹಣದ ಆಮೀಷವೊಡ್ಡಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಮಾಲೀಕ ಭೀಮಾ ನಾಯಕ್ ಬಂಧನಕ್ಕೆ ಬಲೆ ಬೀಸಲಾಗಿದೆ. ಆತನ ಬಂಧನದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಈ ಸಂಬಂಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅನೈತಿಕ ಚಟುವಟಿಕೆ ಬಗ್ಗೆ ದೂರು ನೀಡಿ
ಅನೈತಿಕ ಚಟುವಟಿಕೆಗಳು ಕಂಡು ಬಂದಲ್ಲಿ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಮೊಬೈಲ್ ಸಂಖ್ಯೆ 94808 01084, ಮಾರತ್ತಹಳ್ಳಿ ಉಪ ವಿಭಾಗದ ಎಸಿಪಿ-94808 01607 ಅಥವಾ ಎಚ್‌ಎಎಲ್ ಠಾಣೆ ಇನ್‌ಪೆಕ್ಟರ್ ಮೊಬೈಲ್ ಸಂಖ್ಯೆ 94808 01616 ಗೆ ಸಂಪರ್ಕಿಸಿ ನಿರ್ಭೀತಿಯಿಂದ ದೂರು ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.