ಮಹಿಳೆ ಪತ್ತೆಯಾದ ಕೂಡಲೇ ಆಕೆಯನ್ನು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸದೆ ಸ್ವಾಧಾರ ಕೇಂದ್ರಕ್ಕೆ ಕಳುಹಿಸಲಾಗಿದೆ. ಸುಳ್ಳು ದೂರು, ಸುಳ್ಳು ಸಾಕ್ಷ್ಯ ಹೇಳಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸದೆ ಕಾಲಹರಣ ಮಾಡುತ್ತಿದ್ದಾರೆ. ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ.
-ಕೊಲೆಯಾದ ಮಹಿಳೆ ಮಾಯಿಗೋನಹಳ್ಳಿ ಗ್ರಾಮದಲ್ಲಿ ಪ್ರತ್ಯಕ್ಷ ಪ್ರಕರಣ
- ಮಹಿಳೆಯನ್ನು ನ್ಯಾಯಾಧೀಶರೆದುರು ಹಾಜರುಪಡಿಸಿ ಹೇಳಿಕೆ ಮಾಡಿಸದೆ ನಿರ್ಲಕ್ಷ್ಯ
- ಸುಳ್ಳು ದೂರು, ಸಾಕ್ಷ್ಯ ಹೇಳಿದವರ ವಿರುದ್ಧ ಕ್ರಮ ಜರುಗಿಸದೆ ಕಾಲಹರಣಕನ್ನಡಪ್ರಭ ವಾರ್ತೆ ಮಂಡ್ಯ
ಕೊಲೆಯಾದ ಮಹಿಳೆ ಮಾಯಿಗೋನಹಳ್ಳಿ ಗ್ರಾಮದಲ್ಲಿ ಪ್ರತ್ಯಕ್ಷಳಾಗಿರುವ ಪ್ರಕರಣದಲ್ಲಿ ಪೊಲೀಸರೇ ತಪ್ಪಿತಸ್ಥರನ್ನು ರಕ್ಷಣೆ ಮಾಡುತ್ತಿರುವ ಬಗ್ಗೆ ಅನುಮಾನಗಳು ಮೂಡುತ್ತಿವೆ ಎಂದು ವಕೀಲರಾದ ಬಿ.ಟಿ.ವಿಶ್ವನಾಥ್ ಮತ್ತು ನಟೇಶ್ ಆರೋಪಿಸಿದರು.
ಮಹಿಳೆ ಪತ್ತೆಯಾದ ಕೂಡಲೇ ಆಕೆಯನ್ನು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸದೆ ಸ್ವಾಧಾರ ಕೇಂದ್ರಕ್ಕೆ ಕಳುಹಿಸಲಾಗಿದೆ. ಸುಳ್ಳು ದೂರು, ಸುಳ್ಳು ಸಾಕ್ಷ್ಯ ಹೇಳಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸದೆ ಕಾಲಹರಣ ಮಾಡುತ್ತಿದ್ದಾರೆ. ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಳೆದ ಐದು ವರ್ಷಗಳಿಂದ ಕೊಲೆಯಾಗಿದ್ದಾಳೆಂದು ಹೇಳಲಾದ ಮಹಿಳೆ ಮಾಯಿಗೋನಹಳ್ಳಿಯಲ್ಲೇ ಇದ್ದರೂ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡದಿರುವುದೇಕೆ. ಮಹಿಳೆ ಕೊಲೆಯಾಗದಿದ್ದರೂ ಅನಂತದ್ಮನಾಭ ಮತ್ತು ಗುರುಕುಮಾರ್ ಎಂಬುವವರು ರಾಜೇಶನ ವಿರುದ್ಧ ಸುಳ್ಳು ಸಾಕ್ಷ್ಯ ಹೇಳಲು ಕಾರಣವೇನು ಎಂಬ ವಿಚಾರಗಳು ತನಿಖೆಯಿಂದ ಹೊರಬರಬೇಕು ಎಂದು ಆಗ್ರಹಪಡಿಸಿದರು.
ಈ ಪ್ರಕರಣದಲ್ಲಿ ತಾನು ಮಾಡದ ತಪ್ಪಿಗೆ ಎರಡೂವರೆ ವರ್ಷ ಜೈಲುವಾಸ ಅನುಭವಿಸಲು ಕಾರಣರಾಗಿರುವ ತನಿಖಾಧಿಕಾರಿ ಪ್ರಭಾಕರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸಂತ್ರಸ್ತ ರಾಜೇಶನಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಆರೋಪಿ ಸ್ಥಾನದಲ್ಲಿದ್ದ ರಾಜೇಶ ತಾನು ಕೊಲೆ ಮಾಡಿಲ್ಲವೆಂದು ಪದೇ ಪದೇ ನಮ್ಮ ಬಳಿ ಹೇಳುತ್ತಿದ್ದನಾದರೂ ನಾವು ಅದನ್ನು ನಂಬಿರಲಿಲ್ಲ. ರಾಜೇಶನ ತಂದೆಗೂ ಇದೇ ವಿಚಾರವನ್ನೇ ಹೇಳುತ್ತಿದ್ದನು. ಹಬ್ಬಕ್ಕೆಂದು ಪಾಂಡವಪುರ ಹಿರೋಡೆ ಗ್ರಾಮಕ್ಕೆ ಮಹಿಳೆ ಬಂದಿರುವ ವಿಚಾರ ರಾಜೇಶನ ತಂದೆಗೆ ತಿಳಿದು ಅವರು ವಕೀಲ ನಟೇಶ್‌ಗೆ ಸುದ್ದಿ ಮುಟ್ಟಿಸಿದ್ದರು. ಈ ವಿಚಾರ ಮಹಿಳೆಗೆ ತಿಳಿದು ಆಕೆ ಆಟೋ ಮೂಲಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಳು. ನಂತರ ಆಕೆ ಹೋದ ಆಟೋವನ್ನು ಹಿಂಬಾಲಿಸಿ ಚಾಲಕನ ಮೂಲಕ ಮಾಯಿಗೋನಹಳ್ಳಿಯಲ್ಲಿರುವ ವಿಷಯ ತಿಳಿದುಕೊಂಡು ಮಹಿಳೆಯನ್ನು ಪತ್ತೆಹಚ್ಚಲಾಯಿತು ಎಂದು ವಿವರಿಸಿದರು.
ಪತ್ತೆಯಾದ ಮಹಿಳೆಯನ್ನು ಪೊಲೀಸರು ಕೂಡಲೇ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿ ಹೇಳಿಕೆ ದಾಖಲಿಸಬೇಕಿತ್ತು. ಆದರೆ, ಪೊಲೀಸರು ನೇರ ಸ್ವಾಧಾರ ಕೇಂದ್ರಕ್ಕೆ ಕರೆದುಕೊಂಡು ಹೋಗಿಬಿಟ್ಟಿದ್ದಾರೆ. ಸುಳ್ಳು ದೂರು ನೀಡಿರುವ ಮಹಿಳೆಯ ತಂದೆ ಹಾಗೂ ಸುಳ್ಳು ಸಾಕ್ಷ್ಯ ಹೇಳಿರುವವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಎಫ್‌ಐಆರ್ ಕೂಡ ದಾಖಲಿಸುತ್ತಿಲ್ಲ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಪೊಲೀಸರು ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಈ ಪ್ರಕರಣ ಸಂಬಂಧ ತನಿಖಾಧಿಕಾರಿಯನ್ನು ರಕ್ಷಣೆ ಮಾಡಲು, ತನಿಖೆಯಲ್ಲಾಗಿರುವ ಲೋಪವನ್ನು ಮುಚ್ಚಿಕೊಳ್ಳುವುದಕ್ಕೆ ಪೊಲೀಸ್ ಇಲಾಖೆ ಯತ್ನಿಸುತ್ತಿದೆ. ತನಿಖಾಧಿಕಾರಿ ವಿರುದ್ಧ ಎಫ್‌ಆರ್ ದಾಖಲು ಮಾಡುವಂತೆ ಪಾಂಡವಪುರ, ಬಿಂಡಿಗನವಿಲೆ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದರೂ ಇದುವರೆಗೂ ಎಫ್‌ಐಆರ್ ದಾಖಲಿಸಿಲ್ಲವೆಂದು ದೂರಿದರು.
ಗೋಷ್ಠಿಯಲ್ಲಿ ತಿಮ್ಮೇಗೌಡ, ಅಶ್ವಿನಿ,ಮೇಶ್, ಸಿದ್ದರಾಜು, ರವಿ, ಪಲ್ಲವಿ, ಅರುಣ್ ಇದ್ದರು.
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.