ನಾಗಮಂಗಲ: ಅಭಿಲೇಖಾಲಯದ ಗ್ರೇಡ್‌-2 ತಹಸೀಲ್ದಾರ್‌ ಅಮಾನತು

KannadaprabhaNewsNetwork |  
Published : Nov 17, 2026, 01:30 AM IST
೧೬ಕೆಎಂಎನ್‌ಡಿ-4 ಅಮಾನತ್ತುಗೊಂಡಿರುವ ತಹಶೀಲ್ದಾರ್ ಗ್ರೇಡ್-೨ ಎಂ.ಮಂಜುನಾಥ್. | Kannada Prabha

ಸಾರಾಂಶ

ಕಂದಾಯ ಇಲಾಖೆಗೆ ಸೇರಿದ ಮೂಲ ಭೂದಾಖಲೆ ಕಡತಗಳನ್ನು ಪಟ್ಟಣದ ತಾಲೂಕು ಆಡಳಿತಸೌಧದ ಆವರಣದಲ್ಲಿರುವ ಕಸದ ತೊಟ್ಟಿಯಲ್ಲಿ ಬಿಸಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಲೇಖಾಲಯ ಶಾಖೆಯ ವಿಷಯ ನಿರ್ವಾಹಕ ಹಾಗೂ ತಹಸೀಲ್ದಾರ್ ಗ್ರೇಡ್-೨ ಎಂ.ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಕನ್ನಡಪ್ರಭವಾರ್ತೆ ನಾಗಮಂಗಲ

ಕಂದಾಯ ಇಲಾಖೆಗೆ ಸೇರಿದ ಮೂಲ ಭೂದಾಖಲೆ ಕಡತಗಳನ್ನು ಪಟ್ಟಣದ ತಾಲೂಕು ಆಡಳಿತಸೌಧದ ಆವರಣದಲ್ಲಿರುವ ಕಸದ ತೊಟ್ಟಿಯಲ್ಲಿ ಬಿಸಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಲೇಖಾಲಯ ಶಾಖೆಯ ವಿಷಯ ನಿರ್ವಾಹಕ ಹಾಗೂ ತಹಸೀಲ್ದಾರ್ ಗ್ರೇಡ್-೨ ಎಂ.ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ತಾಲೂಕು ಕಚೇರಿಯ ಅಭಿಲೇಖಾಲಯ ಶಾಖೆಯಲ್ಲಿ ಅತ್ಯಂತ ಸುರಕ್ಷತೆಯಿಂದ ಇರಬೇಕಾದ ರೈತರ ಜಮೀನಿಗೆ ಸಂಬಂಧಿಸಿದ ಕಡತಗಳಾದ ಎಂಆರ್, ಆರ್‌ಆರ್ ಇಂಡೆಕ್ಸ್, ಕೈಬರವಣಿಗೆ ಆರ್‌ಟಿಸಿ ಸೇರಿದಂತೆ ಮುಂತಾದ ಮೂಲ ದಾಖಲೆಗಳ ಎರಡು ಬಂಡಲ್‌ಗಳು ಕಳೆದ ಸೆ.೧೫ರಂದು ತಾಲೂಕು ಆಡಳಿತ ಸೌಧದ ಆವರಣದಲ್ಲಿನ ಕಸದ ತೊಟ್ಟಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಸಾರ್ವಜನಿಕರು ಅವುಗಳನ್ನು ಕಸದ ತೊಟ್ಟಿಯಿಂದ ತೆಗೆದು ನೋಡಿ ಮೂಲ ಕಡತಗಳಂತಿರುವುದನ್ನು ಗಮನಿಸಿ ತಹಸೀಲ್ದಾರ್ ಗಮನಕ್ಕೆ ತಂದಿದ್ದರು.

ವಿಚಾರದ ಗಂಭೀರತೆ ಅರಿತ ತಹಸೀಲ್ದಾರ್ ಡಾ.ಅಶೋಕ್ ಅವರು ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ನೇತೃತ್ವದಲ್ಲಿ ಮಹಜರು ನಡೆಸಿ ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಮೂಲ ಕಡತಗಳನ್ನು ಕಸದ ತೊಟ್ಟಿಗೆ ಯಾರು ಹಾಕಿದವರು, ಯಾವಾಗ, ಯಾವ ಉದ್ದೇಶಕ್ಕೆ ಹಾಕಿದ್ದಾರೆಂಬುದನ್ನು ತನಿಖೆ ನಡೆಸಿ ಪತ್ತೆಹಚ್ಚುವಂತೆ ಒಬ್ಬರು ಉಪ ತಹಸೀಲ್ದಾರ್ ಹಾಗೂ ಇಬ್ಬರು ರಾಜಸ್ವ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಅಲ್ಲದೆ ಭೂದಾಖಲೆಗಳು ಕಸದ ತೊಟ್ಟಿಯಲ್ಲಿ ಪತ್ತೆಯಾಗಿರುವ ಬಗ್ಗೆ ತಹಸೀಲ್ದಾರ್ ಗ್ರೇಡ್-೨ ಎಂ.ಮಂಜುನಾಥ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಅಶೋಕ್‌ಕುಮಾರ್‌ಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿತ್ತು.

ಎಲ್ಲಾ ಭೂದಾಖಲೆಗಳನ್ನು ಪರಿಶೀಲಿಸಿದ ತನಿಖಾ ತಂಡದ ಅಧಿಕಾರಿಗಳು ೩೮ ಕೈಬರಹದ ಆರ್‌ಟಿಸಿ, ೧೦ಎಂಆರ್, ಹರಿದು ಚಿಂದಿಯಾಗಿರುವ ೧೦೭ ಐಎಲ್‌ಆರ್ ಪ್ರತಿಗಳು, ೭೦ಆರ್‌ಆರ್ ಇಂಡೆಕ್ಸ್ ತುಕುಡುಗಳು, ಖಾಲಿ ಇರುವ ೨೩೮ಎಂಆರ್ ಪ್ರತಿಗಳು, ೧೩ಖಾಲಿ ಆರ್‌ಟಿಸಿ ನಮೂನೆ, ಗುರುತಿಸಲಾಗದಂತಹ ೯೦ ಕೈಬರಹದ ಪಹಣಿ ತುಕುಡು, ೨೪೮ ಖಾಲಿ ಎಂಆರ್ ನಮೂನೆ ಸೇರಿದಂತೆ ವಿಲೇವಾರಿಗೆ ಅರ್ಹವಾಗಿರುವ ೨೨೫ ಕ್ಕೂ ಹೆಚ್ಚು ಅನುಪಯುಕ್ತ ದಾಖಲಾತಿಗಳೆಂದು ಗುರುತಿಸಿದ್ದರು.

ಪ್ರಕರಣ ಸಂಬಂಧ ಅಭಿಲೇಖಾಲಯದ ದ್ವಿತೀಯ ದರ್ಜೆ ಸಹಾಯಕ ಎಂ.ಅಶೋಕ್‌ಕುಮಾರ್ ಅವರನ್ನು ಇಲಾಖಾ ವಿಚಾರಣೆಗೆ ಒಳಪಡಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸೆ.೧೬ರಂದು ಸೇವೆಯಿಂದ ಅಮಾನತ್ತುಗೊಳಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯ ತಹಶೀಲ್ದಾರ್ ಗುರುಪ್ರಸಾದ್ ನೇತೃತ್ವದ ಅಧಿಕಾರಿಗಳ ತಂಡ ಸೆ.೧೭ರಂದು ಪಟ್ಟಣದ ತಾಲೂಕು ಆಡಳಿತ ಸೌಧಕ್ಕೆ ಭೇಟಿ ಕೊಟ್ಟು ಕೆಲ ದಾಖಲಾತಿ ಪರಿಶೀಲಿಸಿ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಅಗತ್ಯ ಮಾಹಿತಿ ಪಡೆದುಕೊಂಡು ಎಲ್ಲಾ ಅಂಶಗಳ ಕುರಿತು ಸಿದ್ದಪಡಿಸಿರುವ ವರದಿಯನ್ನು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿದ್ದರು.

ತಾಲೂಕು ಕಚೇರಿಯ ಅಭಿಲೇಖಾಲಯ ಶಾಖೆಯಲ್ಲಿನ ಕಂದಾಯ ದಾಖಲೆಗಳನ್ನು ನಿಯಮಾನುಸಾರ ಸಂರಕ್ಷಿಸದೆ ಕಚೇರಿ ಆವರಣದಲ್ಲಿನ ಕಸದ ತೊಟ್ಟಿಯಲ್ಲಿ ಪತ್ತೆಯಾದ ಪ್ರಕರಣದಲ್ಲಿ ಮೇಲ್ವಿಚಾರಣಾ ವೈಫಲ್ಯಕ್ಕಾಗಿ ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿತನದಿಂದ ವರ್ತಿಸಿರುವ ತಹಸೀಲ್ದಾರ್ ಗ್ರೇಡ್-೨ ಎಂ.ಮಂಜುನಾಥ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ಮಹತ್ವದ ದಾಖಲೆಗಳನ್ನು ನಿಯಮಾನುಸಾರ ವಿಲೇವಾರಿ ಮಾಡದೆ ಗಂಭೀರ ಸ್ವರೂಪದ ದುರ್ನಡತೆ ಎಸಗಿ ಕರ್ನಾಟಕ ನಾಗರೀಕ ಸೇವಾ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರಿ ನೌಕರನಿಗೆ ತಕ್ಕದಲ್ಲದ ರೀತಿಯಲ್ಲಿ ವರ್ತಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಗಳು ೧೯೫೭ರ ನಿಯಮ ೧೧ರಡಿ ಶಿಸ್ತು ಕ್ರಮಕ್ಕೆ ಗುರಿಯಾಗಿರುವುದರಿಂದ ತಹಸೀಲ್ದಾರ್ ಗ್ರೇಡ್-೨ ಎಂ.ಮಂಜುನಾಥ್ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ತಹಸೀಲ್ದಾರ್ ಗ್ರೇಡ್‌೨ ಎಂ.ಮಂಜುನಾಥ್ ಅವರು ಅಮಾನತ್ತಿನ ಅವಧಿಯಲ್ಲಿ ಕೆಸಿಎಸ್‌ಆರ್ ನಿಯಮ-೯೮(೧)(ಎ)ರನ್ವಯ ನಿಯಮಾನುಸಾರ ಜೀವನಾಧಾರ ಭತ್ಯೆ ಪಡೆಯಲು ಅನುವಾಗುವಂತೆ ಹುದ್ದೆಯ ಮೇಲಿನ ಲೀನ್ ಅನ್ನು ತಹಸೀಲ್ದಾರ್ ಗ್ರೇಡ್-೨ ಚನ್ನರಾಯಪಟ್ಟಣ ತಾಲೂಕು ಹುದ್ದೆಯಲ್ಲಿರಿಸಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

28.5 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ, ಗೂಡ್ಸ್ ವಾಹನ ವಶ
ವೇಗವಾಗಿ ಚಲಿಸುತ್ತಿದ್ದ ರೈಲಿನ ಸೆಳೆತಕ್ಕೆ ಸಿಲುಕಿ ಯುವತಿ ಬಲಿ