ವೇಗವಾಗಿ ಚಲಿಸುತ್ತಿದ್ದ ರೈಲಿನ ಸೆಳೆತಕ್ಕೆ ಸಿಲುಕಿ ಯುವತಿ ಧಾರುಣವಾಗಿ ಮೃತಪಟ್ಟಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಚಿಂದಗಿರಿಕೊಪ್ಪಲು ಗ್ರಾಮದ ಬಳಿ ಸಂಭವಿಸಿದೆ. ಗ್ರಾಮದ ಸುರೇಶ್ ಅವರ ಪುತ್ರಿ ಬಿಸಿಎ ವಿದ್ಯಾರ್ಥಿನಿ ಸಿ.ಎಸ್ ಲಿಖಿತ (19) ಮೃತ ದುರ್ದೈವಿ.
ಶ್ರೀರಂಗಪಟ್ಟಣ:
ವೇಗವಾಗಿ ಚಲಿಸುತ್ತಿದ್ದ ರೈಲಿನ ಸೆಳೆತಕ್ಕೆ ಸಿಲುಕಿ ಯುವತಿ ಧಾರುಣವಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಚಿಂದಗಿರಿಕೊಪ್ಪಲು ಗ್ರಾಮದ ಬಳಿ ಸಂಭವಿಸಿದೆ.ಗ್ರಾಮದ ಸುರೇಶ್ ಅವರ ಪುತ್ರಿ ಬಿಸಿಎ ವಿದ್ಯಾರ್ಥಿನಿ ಸಿ.ಎಸ್ ಲಿಖಿತ (19) ಮೃತ ದುರ್ದೈವಿ. ಚಿನಕುರಳಿ ಬಳಿಯ ಕಾಲೇಜುವೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆಯನ್ನು ತಾಯಿ ಭವ್ಯ ಪ್ರತಿನಿತ್ಯ ಗ್ರಾಮದಿಂದ ಪಾಂಡವಪುರ ಪಟ್ಟಣಕ್ಕೆ ಬೆಳಗ್ಗೆ ಬಿಟ್ಟು, ಪುನಃ ವಾಪಸ್ಸು ತಮ್ಮ ದ್ವಿಚಕ್ರ ವಾಹನದಲ್ಲಿ ಕರೆತರುತ್ತಿದ್ದರು.
ಎಂದಿನಂತೆ ಶನಿವಾರವೂ ಸಹ ಪುತ್ರಿಯನ್ನು ಸ್ವಗ್ರಾಮಕ್ಕೆ ಕರೆತರುತ್ತಿದ್ದ ವೇಳೆ ಗ್ರಾಮ ಸಮೀಪದಲ್ಲಿ ರೈಲು ಹಾದು ಹೋಗಲು ಗೇಟ್ ಹಾಕಲಾಗಿತ್ತು. ರೈಲನ್ನು ನೋಡುವ ಖುಷಿಯಿಂದ ದ್ವಿಚಕ್ರ ವಾಹನದಿಂದ ಕೆಳಗೆ ಇಳಿದ ಯುವತಿ ಚಲಿಸುತ್ತಿದ್ದ ರೈಲಿನ ಹಳಿಯ ತೀರ ಸಮೀಪಕ್ಕೆ ಧಾವಿಸಿದ್ದಾರೆ. ಈ ವೇಳೆ ವೇಗವಾಗಿ ಬಂದ ರೈಲಿನ ಮುಂಭಾಗ ಯುವತಿ ತಲೆಗೆ ಬಡಿದು ಬಳಿಕ ರಭಸದ ಸೆಳತಕ್ಕೆ ಹಳಿಯೊಳಗೆ ಸಿಲುಕಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.ಈ ಎಲ್ಲಾ ಘಟನೆಯು ಯುವತಿ ತಾಯಿ ಎದುರೇ ಕ್ಷಣ ಕಾಲದಲ್ಲೇ ನಡೆದು ಹೋಗಿದ್ದು, ಈ ಆಘಾತಕ್ಕೆ ಸಿಲುಕಿದ ತಾಯಿ ಭವ್ಯ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ಮೃತಳ ಪೋಷಕರು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಪೂರ್ಣ ಗ್ರಾಮವು ಶೋಕಸಾಗರದಲ್ಲಿ ಮುಳುಗಿತ್ತು. ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಈ ಸಂಬಂಧ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.