ಕಾಳ ಸಂತೆಕೋರರ ಜೊತೆಗೂಡಿ ಖರೀದಿಸಿ ಅಕ್ರಮವಾಗಿ ಸಾಗಿಸುತ್ತಿದ್ದ 96,900 ರು. ಮೌಲ್ಯದ ಅನ್ನಭಾಗ್ಯ ಯೋಜನೆಯ 28.5 ಕ್ವಿಂಟಲ್ ಅಕ್ಕಿ ಮತ್ತು ಗೂಡ್ಸ್ ವಾಹನವನ್ನು ಆಹಾರ ಇಲಾಖೆ ಅಧಿಕಾರಿಗಳು ತಾಲೂಕಿನ ಬೆಳ್ಳೂರು ಕ್ರಾಸ್ ಬಳಿ ವಶಪಡಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಕಾಳ ಸಂತೆಕೋರರ ಜೊತೆಗೂಡಿ ಖರೀದಿಸಿ ಅಕ್ರಮವಾಗಿ ಸಾಗಿಸುತ್ತಿದ್ದ 96,900 ರು. ಮೌಲ್ಯದ ಅನ್ನಭಾಗ್ಯ ಯೋಜನೆಯ 28.5 ಕ್ವಿಂಟಲ್ ಅಕ್ಕಿ ಮತ್ತು ಗೂಡ್ಸ್ ವಾಹನವನ್ನು ಆಹಾರ ಇಲಾಖೆ ಅಧಿಕಾರಿಗಳು ತಾಲೂಕಿನ ಬೆಳ್ಳೂರು ಕ್ರಾಸ್ ಬಳಿ ಬುಧವಾರ ರಾತ್ರಿ ವಶಪಡಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಸಾತೇನಹಳ್ಳಿ ಎಸ್.ಸುದೀಪ್ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ ಸಾಗಿಸುತ್ತಿದ್ದ ವೇಳೆ ಮಾಲು ಸಮೇತ ಸಿಕ್ಕಿಬಿದ್ದಿರುವ ಆರೋಪಿ.
ಸರ್ಕಾರದ ಪರವಾನಗಿ ಇಲ್ಲದೆ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಂಡು ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ತಾಲೂಕಿನ ಬೆಳ್ಳೂರು ಕ್ರಾಸ್ ಮಾರ್ಗವಾಗಿ ನಾಗಮಂಗಲ ಪಟ್ಟಣದ ಕಡೆಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಆಧರಿಸಿ ಆಹಾರ ಇಲಾಖೆ ನಿರೀಕ್ಷಕರಾದ ಅನಿಲ್ಕುಮಾರ್ ಮತ್ತು ಶ್ರೀನಿವಾಸ್ ಅವರು ಬೆಳ್ಳೂರು ಠಾಣೆಯ ಪೊಲೀಸರ ನೆರವು ಪಡೆದು ಬುಧವಾರ ಸಂಜೆ 7.30ರ ಸಮಯದಲ್ಲಿ ಕಾರ್ಯಾಚರಣೆಗಿಳಿದರು.ಬೆಳ್ಳೂರು ಕ್ರಾಸ್ನ ಹಳ್ಳದ ಸೇತುವೆ ಬಳಿ ಅಕ್ಕಿ ತುಂಬಿದ ಗೂಡ್ಸ್ ವಾಹನವನ್ನು ತಡೆದು ಪರಿಶೀಲಿಸಲಾಗಿ ವಿವಿಧ ಬಣ್ಣದ ಪ್ಲಾಸ್ಟಿಕ್ ಚೀಲಗಳಲ್ಲಿ ಅನ್ನಭಾಗ್ಯ ಯೋಜನೆ ಅಕ್ಕಿ ತುಂಬಿರುವುದು ಕಂಡುಬಂದಿದೆ. ಅಕ್ಕಿ ಸಾಗಿಸುವ ಕುರಿತು ರಶೀದಿ ಮತ್ತು ರಹದಾರಿ ಪತ್ರವನ್ನು ಹಾಜರು ಪಡಿಸುವಂತೆ ಅಧಿಕಾರಿಗಳು ಚಾಲಕನನ್ನು ವಿಚಾರಿಸಿದ ವೇಳೆ ತನ್ನ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ತಿಳಿಸಿದ್ದಾನೆ.
ನಂತರ 80 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಅಕ್ಕಿ ಮತ್ತು ಗೂಡ್ಸ್ ವಾಹನವನ್ನು ವಶಕ್ಕೆ ಪಡೆದ ಅಧಿಕಾರಿಗಳು ಬೆಳ್ಳೂರು ಪೊಲೀಸ್ ಠಾಣೆಗೆ ತರಿಸಿ ಎಲೆಕ್ಟ್ರಾನಿಕ್ ಯಂತ್ರದ ಮೂಲಕ ತೂಕ ಹಾಕಿದ ವೇಳೆ 2850 ಕೆ.ಜಿ.ಅಕ್ಕಿ ಇದ್ದು, ಇದರ ಮೌಲ್ಯ 96,900 ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ತಡರಾತ್ರಿಯೇ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳೂರು ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮ ವಹಿಸಿದ್ದಾರೆ.