ಕನ್ನಡಪ್ರಭ ವಾರ್ತೆ ಬೆಂಗಳೂರು
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಸುಳ್ಳು ದೂರು ದಾಖಲಿಸುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಳೆದ ಐದು ವರ್ಷಗಳ ಅವಧಿಯಲ್ಲಿ ಸುಳ್ಳು ದೂರು ನೀಡಿದವರ ವಿರುದ್ಧ ಆರು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ ನಾಲ್ಕು ಪ್ರಕರಣಗಳಲ್ಲಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಎರಡು ಪ್ರಕರಣಗಳ ವಿಚಾರಣೆ ಪೂರ್ಣಗೊಂಡು ನ್ಯಾಯಾಲಯವು ಶಿಕ್ಷೆ ಘೋಷಿಸಿದೆ ಎಂದು ವಿವರಿಸಿದರು.ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖಾ ಹಂತದಲ್ಲಿ ಸುಳ್ಳು ದೂರು ನೀಡಿರುವುದು ಗೊತ್ತಾಯಿತು. ಆಗ ದೂರುದಾರರ ವಿರುದ್ಧವೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಯಿತು. ಕೊನೆಗೆ ನ್ಯಾಯಾಲಯದಲ್ಲಿ ಸುಳ್ಳು ದೂರು ನೀಡಿದ್ದನ್ನು ಆರೋಪಿ ತಪ್ಪೊಪ್ಪಿಕೊಂಡಿದ್ದು, ಆತನಿಗೆ ₹500 ದಂಡ ವಿಧಿಸಿದೆ. ಈ ದಂಡ ಪಾವತಿಸದೆ ಹೋದರೆ 5 ದಿನ ಸಾದಾ ಶಿಕ್ಷೆ ವಿಧಿಸಿದೆ ಎಂದು ತಿಳಿಸಿದರು.
ಅದೇ ರೀತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣದಲ್ಲಿ ಸಹ ಸುಳ್ಳು ದೂರು ನೀಡಿದ್ದು ಬಯಲಾಯಿತು. ಈ ಪ್ರಕರಣದ ದೂರುದಾರನಿಗೆ ₹100 ದಂಡ ಹಾಗೂ ದಂಡ ಪಾವತಿಸದೆ ಹೋದರೆ 5 ದಿನ ಸಾದಾ ಶಿಕ್ಷೆಯನ್ನು ನ್ಯಾಯಾಲಯವು ವಿಧಿಸಿದೆ ಎಂದು ತಿಳಿಸಿದರು.