ಬೆಂಗಳೂರು : ದುಬೈನಿಂದ ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳ ಸಾಗಣೆಯಿಂದ ₹4.83 ಕೋಟಿ ಸುಂಕ ನಷ್ಟವಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ಹೇಳಿದ್ದಾರೆ.
ವಿದೇಶದಿಂದ ಚಿನ್ನ ಸಾಗಿಸುವಾಗ ಸುಂಕ ಪಾವತಿಸಬೇಕಿದೆ. ಆದರೆ ಈ ಸುಂಕ ತಪ್ಪಿಸುವ ದುರುದ್ದೇಶದಿಂದಲೇ ಕಳ್ಳ ಮಾರ್ಗದಲ್ಲಿ ರನ್ಯಾ ಚಿನ್ನ ಸಾಗಿಸಿದ್ದಾರೆ. ತನ್ನ ಹೊಟ್ಟೆ, ಕಾಲು ಹಾಗೂ ಸೊಂಟ ಸೇರಿ ದೇಹದ ವಿವಿಧ ಭಾಗಗಳಲ್ಲಿ ಬ್ಯಾಂಡೇಜ್ ಬಟ್ಟೆಯಿಂದ ಸುತ್ತಿಕೊಂಡು ಅವರು ಚಿನ್ನ ಸಾಗಿಸಿದ್ದಾರೆ. ಅಲ್ಲದೆ ಆಕೆ ಧರಿಸಿದ್ದ ಜಾಕೆಟ್‌ನಲ್ಲೂ ಚಿನ್ನ ಪತ್ತೆಯಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ಹೇಳಿರುವುದಾಗಿ ತಿಳಿದು ಬಂದಿದೆ.
ಚಿನ್ನ ಸಾಗಣೆ ಹಿಂದೆ ಸಿಂಡಿಕೇಟ್ :
ದುಬೈನಿಂದ ಚಿನ್ನ ಸಾಗಣೆ ಕೃತ್ಯದ ಹಿಂದೆ ವ್ಯವಸ್ಥಿತವಾದ ಸಿಂಡಿಕೇಟ್ ಕೆಲಸ ಮಾಡುತ್ತಿದ್ದು, ಈ ಕೃತ್ಯದಲ್ಲಿ ರನ್ಯಾ ಪ್ರಮುಖ ಪಾತ್ರವಹಿಸಿದ್ದಾಳೆ. ಈ ಜಾಲದ ಹಿಂದಿರುವ ಸಿಂಡಿಕೇಟ್ ಬಗ್ಗೆ ಮಾಹಿತಿ ಕಲೆ ಹಾಕಬೇಕಿದೆ. ಅಲ್ಲದೆ, ಅವರ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಪರಿಶೀಲನೆಗೆ ರನ್ಯಾರವರ ವಿಚಾರಣೆ ಅಗತ್ಯವಾಗಿದೆ ಎಂದು ಮೂಲಗಳು ಹೇಳಿವೆ.
ವಕೀಲರ ಮುಂದೆ ರನ್ಯಾ ಕಣ್ಣೀರು:
‘ತಾನು ತಪ್ಪು ಮಾಡಿದ್ದೇನೆ. ನನಗೆ ಇಂಥ ಸಂಕಷ್ಟದ ಪರಿಸ್ಥಿತಿ ಎದುರಿಸಲಾಗುತ್ತಿಲ್ಲ. ಕಣ್ಮುಚ್ಚಿದರೆ ವಿಮಾನ ನಿಲ್ದಾಣದ ಘಟನೆಯೇ ನೆನಪಾಗುತ್ತಿದೆ. ನನಗೆ ಅರೆ ಕ್ಷಣವೂ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಯಾತನೆಯಿಂದ ನನ್ನನ್ನು ಪಾರು ಮಾಡಿ’ ಎಂದು ತಮ್ಮ ವಕೀಲರ ಬಳಿ ರನ್ಯಾ ಕಣ್ಣೀರಿಟ್ಟಿದ್ದಾರೆ.
ನ್ಯಾಯಾಲಯ ಮುಂದೆ ಹಾಜರುಪಡಿಸಿ ಕರೆದೊಯ್ಯುವ ವೇಳೆ ತಮ್ಮ ವಕೀಲರ ಭೇಟಿಗೆ ರನ್ಯಾಗೆ ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಆ ವೇಳೆ ವಕೀಲರ ಮುಂದೆ ಕಂಬನಿಗರೆಯುತ್ತ ವಿನಂತಿಸಿಕೊಂಡ ಘಟನೆ ನಡೆದಿದೆ.
ತಾನು ಹೇಗೆ ಈ ಸಂಕಷ್ಟಕ್ಕೆ ಸಿಲುಕಿದೆ ಎನ್ನುವುದೇ ಗೊತ್ತಾಗುತ್ತಿಲ್ಲ. ನಾನು ತಪ್ಪು ಮಾಡಿಬಿಟ್ಟಿದ್ದೇನೆ. ನನ್ನನ್ನು ಕಾಪಾಡಿ ಎಂದು ಅವರು ವಿನಂತಿಸಿದ್ದಾರೆ.
ಒಂದೇ ಜೊತೆ ಬಟ್ಟೆಯಲ್ಲಿ 5 ದಿನಗಳು:
ಕಳ್ಳ ದಾರಿಯಲ್ಲಿ ಚಿನ್ನ ಸಾಗಿಸುವಾಗ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳ ಬಲೆಗೆ ಬಿದ್ದ ದಿನದಿಂದಲೂ ರನ್ಯಾ ಒಂದೇ ಜೊತೆ ಬಟ್ಟೆಯಲ್ಲೇ ಐದು ದಿನಗಳು ಕಳೆದಿದ್ದಾರೆ ಎನ್ನಲಾಗಿದೆ.
ನ್ಯಾಯಾಲಯದ ವಿಚಾರಣೆ ಮುಗಿಸಿ ಮರಳುವಾಗ ಅವರಿಗೆ ಸೋದರ ರಿಷಬ್ ಸ್ನೇಹಿತರು ಬಟ್ಟೆಯ ಬ್ಯಾಗ್ ಕೊಟ್ಟು ಮರಳಿದ್ದಾರೆ. ಹಾಗಾಗಿ ಕೋರ್ಟ್‌ಗೆ ಬಂದಾಗ ತಾವು ದುಬೈ ಪ್ರಯಾಣದಿಂದ ಮರಳುವಾಗ ಧರಿಸಿದ್ದ ಬಟ್ಟೆಯಲ್ಲೇ ರನ್ಯಾ ಕಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ.