ಚಿನ್ನ ದಂಧೆ ಹಣ ಬಿಳಿ ಮಾಡಿಕೊಳ್ಳಲೆಂದೇ ರನ್ಯಾ ಕಂಪನಿ ಸ್ಥಾಪನೆ? ರನ್ಯಾ ಜತೆ ಇಬ್ಬರು ಸಚಿವರಿಗೆ ನಂಟು

KannadaprabhaNewsNetwork |  
Published : Mar 17, 2025, 01:30 AM ISTUpdated : Mar 17, 2025, 05:05 AM IST
ರನ್ಯಾ ರಾವ್‌ | Kannada Prabha

ಸಾರಾಂಶ

ದುಬೈನಿಂದ ಚಿನ್ನ ಕಳ್ಳ ಸಾಗಣೆ ವೇಳೆ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್‌ ಅಕ್ರಮವಾಗಿ ಗಳಿಸಿದ ಹಣವನ್ನು ಸಕ್ರಮಗೊಳಿಸಲು ನಗರದಲ್ಲಿ ತನ್ನ ಒಡೆತನದ ಕಂಪನಿಗಳನ್ನೇ ಬಳಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

 ಮೋಹನ ಹಂಡ್ರಂಗಿ 

 ಬೆಂಗಳೂರು : ದುಬೈನಿಂದ ಚಿನ್ನ ಕಳ್ಳ ಸಾಗಣೆ ವೇಳೆ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್‌ ಅಕ್ರಮವಾಗಿ ಗಳಿಸಿದ ಹಣವನ್ನು ಸಕ್ರಮಗೊಳಿಸಲು ನಗರದಲ್ಲಿ ತನ್ನ ಒಡೆತನದ ಕಂಪನಿಗಳನ್ನೇ ಬಳಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ರನ್ಯಾ ಒಡೆತನದ ಕಂಪನಿಗಳ ಹಣಕಾಸು ವಹಿವಾಟು ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.

ಆರೋಪಿ ರನ್ಯಾ ರಾವ್‌ ‘ವೈರಾ ಡೈಮಂಡ್ಸ್ ಟ್ರೇಡಿಂಗ್‌’ ಹೆಸರಿನಲ್ಲಿ ಅಧಿಕೃತವಾಗಿ ದುಬೈನಲ್ಲಿ ಕಂಪನಿ ತೆರೆದಿರುವುದು ಇ.ಡಿ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 2023ರಲ್ಲಿ ದುಬೈನಲ್ಲಿ ‘ವೈರಾ ಡೈಮಂಡ್ಸ್ ಟ್ರೇಡಿಂಗ್‌’ ಹೆಸರಿನಲ್ಲಿ ಕಂಪನಿ ತೆರೆದು ಆ ಕಂಪನಿಯನ್ನು ನೋಂದಣಿ ಸಹ ಮಾಡಿದ್ದಾರೆ. ಈ ಕಂಪನಿ ನೋಂದಣಿಯ ದಾಖಲೆಗಳನ್ನೂ ಸಂಗ್ರಹಿಸಿರುವ ಇ.ಡಿ ಅಧಿಕಾರಿಗಳು ಕಂಪನಿಯ ಹಣಕಾಸು ವಹಿವಾಟಿನ ಬಗ್ಗೆಯೂ ಶೋಧಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರನ್ಯಾ ರಾವ್‌ 2022ರಲ್ಲಿ ಬೆಂಗಳೂರಿನಲ್ಲಿ ‘ಬಯೋ ಎನ್ಝೋ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌’ ಕಂಪನಿ ತೆರೆದಿದ್ದರು. ಬಳಿಕ ಆ ಕಂಪನಿಯ ಹೆಸರನ್ನು ‘ಕ್ಸಿರೋದಾ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌’ ಎಂದು ಬದಲಿಸಿದ್ದರು. ಈ ಕಂಪನಿ ಖಾತೆಗೆ ಸಹಕಾರಿ ಬ್ಯಾಂಕ್‌ವೊಂದರಿಂದ 10 ಲಕ್ಷ ರು. ವರ್ಗಾವಣೆಯಾಗಿದೆ. ಇದಕ್ಕೂ ಮುನ್ನ ರನ್ಯಾ ವೈಲ್ಡ್‌ಲೈಫ್‌ ಹೆಸರಿನಲ್ಲಿ ಕಂಪನಿಯೊಂದನ್ನು ಆರಂಭಿಸಿದ್ದರು. ಈ ಕಂಪನಿಗಳ ಮುಖಾಂತರ ರನ್ಯಾ ಅನಧಿಕೃತ ಹಣ ಸಕ್ರಮಗೊಳಿಸಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಇ.ಡಿ ಅಧಿಕಾರಿಗಳು ಈ ಕಂಪನಿಗಳ ಹಣಕಾಸು ವ್ಯವಹಾರದ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹಣದ ಮೂಲ ಪತ್ತೆಗೆ ತನಿಖೆ:

ರನ್ಯಾ ರಾವ್‌ ದುಬೈನಲ್ಲಿ ಚಿನ್ನ ಖರೀದಿಸಲು ಬಳಸಿರುವ ಹಣದ ಮೂಲ ಪತ್ತೆಗೆ ಇದೀಗ ಇ.ಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಚಿನ್ನ ಖರೀದಿಗೆ ಹವಾಲಾ ಹಣ ಬಳಕೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಚಿನ್ನ ಕಳ್ಳ ಸಾಗಣೆ ಹಿಂದೆ ವ್ಯವಸ್ಥಿತ ಜಾಲವೊಂದು ಕೆಲಸ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈಗಾಗಲೇ ಡಿಆರ್‌ಐ ಅಧಿಕಾರಿಗಳು ರನ್ಯಾ ಗೆಳೆಯ ತರುಣ್‌ ರಾಜ್‌ನನ್ನು ಬಂಧಿಸಿದ್ದಾರೆ. ದುಬೈನಲ್ಲಿರುವ ವೈರಾ ಡೈಮಂಡ್ಸ್‌ ಟ್ರೇಡಿಂಗ್‌ ಕಂಪನಿಗೆ ತರುಣ್‌ ರಾಜ್‌ ಸಹ ಪಾಲುದಾರ ಎನ್ನಲಾಗಿದೆ. ಆರಂಭದಲ್ಲಿ ರನ್ಯಾ ಜತೆಗೆ ವ್ಯವಹಾರ ಮಾಡಿದ್ದ ತರುಣ್‌ ರಾಜ್‌ ಬಳಿಕ ತನ್ನ ಷೇರುಗಳನ್ನು ಹಿಂಪಡೆದಿದ್ದ ಎನ್ನಲಾಗಿದೆ. ಹೀಗಾಗಿ ಇ.ಡಿ ಅಧಿಕಾರಿಗಳು ಶೀಘ್ರದಲ್ಲೇ ರನ್ಯಾ ಹಾಗೂ ತರುಣ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

ದುಬೈನಲ್ಲೇ ಚಿನ್ನದ ವ್ಯವಹಾರ ಏಕೆ?:

ಚಿನ್ನದ ವ್ಯಾಪಾರಕ್ಕೆ ದುಬೈ ಸ್ವರ್ಗ ಎನ್ನಲಾಗುತ್ತದೆ. ಅತಿ ಹೆಚ್ಚು ಚಿನ್ನದ ವ್ಯಾಪಾರಿಗಳು ದುಬೈನಲ್ಲಿದ್ದಾರೆ. ಅಂದರೆ, ಕೇವಲ ದುಬೈ ವ್ಯಾಪಾರಿಗಳು ಮಾತ್ರವಲ್ಲದೆ, ಜಗತ್ತಿನ ಹಲವು ದೇಶಗಳ ವ್ಯಾಪಾರಿಗಳು ದುಬೈನಲ್ಲಿ ಕಂಪನಿ ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ, ದುಬೈನಲ್ಲಿ ಚಿನ್ನದ ವ್ಯಾಪಾರ-ವಹಿವಾಟು ಸುಲಭವಾಗಿದೆ. ದುಬೈನಲ್ಲಿ ಚಿನ್ನದ ವ್ಯವಹಾರ ಮಾಡಬೇಕಾದರೆ, ಅಲ್ಲಿನ ರೆಸಿಡೆಂಟ್‌ ವೀಸಾ ಇರಬೇಕು. ಬಳಿಕ ನೋಂದಾಯಿತ ಕಂಪನಿ ಇರಬೇಕು. ವ್ಯವಹಾರಕ್ಕೆ ಹೂಡಿಕೆ ಮಾಡುವ ಹಣದ ಮೂಲದ ಬಗ್ಗೆ ಅಲ್ಲಿನ ಸರ್ಕಾರ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನಿಗದಿತ ತೆರಿಗೆ ಪಾವತಿಸಿ ಚಿನ್ನದ ವ್ಯಾಪಾರ-ವಹಿವಾಟು ನಡೆಸಬಹುದು. ಇದನ್ನೇ ಬಳಸಿಕೊಂಡು ಕೆಲವರು ಚಿನ್ನ ಕಳ್ಳ ಸಾಗಣೆಯಲ್ಲಿ ತೊಡಗಿದ್ದಾರೆ.

ವ್ಯವಸ್ಥಿತವಾಗಿ ಚಿನ್ನ ಕಳ್ಳ ಸಾಗಣೆ?:

ಆರೋಪಿ ರನ್ಯಾ ರಾವ್‌ ಬಳಿ ದುಬೈ ರೆಸಿಡೆಂಟ್‌ ವೀಸಾ ಪತ್ತೆಯಾಗಿದೆ. ಸುಮಾರು 80 ಲಕ್ಷ ರು. ವೆಚ್ಚದಲ್ಲಿ ಈ ರೆಸಿಡೆಂಟ್‌ ವೀಸಾ ಪಡೆದಿದ್ದಾರೆ. ಅಂತೆಯೇ ಆಕೆ ದುಬೈನಲ್ಲಿ ಫ್ಲ್ಯಾಟ್‌ ಸಹ ಹೊಂದಿದ್ದಾರೆ. ಅಂದರೆ, ದುಬೈನಲ್ಲಿ ರೆಸಿಡೆಂಟ್‌ ವೀಸಾ, ನೋಂದಾಯಿತ ಕಂಪನಿ, ಫ್ಲ್ಯಾಟ್‌ ಇರುವುದನ್ನು ನೋಡಿದರೆ, ರನ್ಯಾ ಕೆಲ ವರ್ಷಗಳಿಂದ ದುಬೈನಿಂದ ಭಾರತಕ್ಕೆ ವ್ಯವಸ್ಥಿತವಾಗಿ ಚಿನ್ನ ಕಳ್ಳ ಸಾಗಣೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಹಾಗೂ ಡಿಆರ್‌ಐ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ತನ್ನ ಮಲತಂದೆ ಡಿಜಿಪಿ ರಾಮಚಂದ್ರ ರಾವ್‌ ಅವರ ಪ್ರಭಾವ ಬಳಸಿರುವ ಸಾಧ್ಯತೆಯಿದೆ ಎನ್ನಲಾಗಿದೆ.

1 ಕೆ.ಜಿ. ಚಿನ್ನಕ್ಕೆ 20 ಲಕ್ಷ ರು. ಲಾಭ:

ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೆರಿಕದಿಂದ ದುಬೈಗೆ ಸಾಕಷ್ಟು ಚಿನ್ನ ಬರುತ್ತದೆ. ಬೇರೆ ದೇಶಗಳಿಗೆ ಹೋಲಿಸಿದರೆ, ದುಬೈನಲ್ಲಿ ಚಿನ್ನದ ದರ ಕಡಿಮೆ ಇದೆ. ಒಮ್ಮೆ ಹತ್ತಾರು ಕೆ.ಜಿ. ಖರೀದಿಸುವುದರಿಂದ ಅಲ್ಲಿನ ಚಿನ್ನದ ವ್ಯಾಪಾರಿಗಳು ಮಾರುಕಟ್ಟೆ ದರದಲ್ಲಿ ಕೊಂಚ ರಿಯಾಯಿತಿಯನ್ನೂ ನೀಡುತ್ತಾರೆ. ಉದಾಹರಣೆಗೆ ದುಬೈನಲ್ಲಿ ಕೆ.ಜಿ. ಚಿನ್ನ 70 ಲಕ್ಷ ರು. ಇದ್ದರೆ, ಭಾರತದಲ್ಲಿ 90 ಲಕ್ಷ ರು.. ಅಂದರೆ, ಒಂದು ಕೆ.ಜಿ.ಗೆ 20 ಲಕ್ಷ ರು. ಲಾಭ ಸಿಗುತ್ತದೆ. ಹೀಗಾಗಿ ಆರೋಪಿ ರನ್ಯಾ ರಾವ್‌ ದುಬೈನಲ್ಲಿ ಸಗಟು ದರಕ್ಕೆ ಚಿನ್ನ ಖರೀದಿಸಿ ಬೆಂಗಳೂರಿಗೆ ಕಳ್ಳ ಸಾಗಣೆ ಮಾಡಿ ಭಾರೀ ಪ್ರಮಾಣದಲ್ಲಿ ಲಾಭ ಮಾಡಿರುವ ಶಂಕೆ ವ್ಯಕ್ತವಾಗಿದೆ.

ರನ್ಯಾ ಜತೆ ಇಬ್ಬರು ಸಚಿವರಿಗೆ ನಂಟು, ಅವರ ಹೆಸರನ್ನು ನಾನು ಕಲಾಪದಲ್ಲಿ ಹೇಳ್ತೀನಿ: ಯತ್ನಾಳ

ಕನ್ನಡಪ್ರಭ ವಾರ್ತೆ ವಿಜಯಪುರನಟಿ ರನ್ಯಾ ರಾವ್‌ ಚಿನ್ನ ಸ್ಮಗ್ಲಿಂಗ್‌ ಪ್ರಕರಣದಲ್ಲಿ ರಾಜ್ಯದ ಇಬ್ಬರು ಸಚಿವರು ಭಾಗಿಯಾಗಿದ್ದಾರೆ. ಅವರು ಯಾರು ಎನ್ನುವುದು ನನಗೆ ಗೊತ್ತಿದೆ. ವಿಧಾನಸಭೆಯ ಅಧಿವೇಶನದಲ್ಲಿ ಆ ಸಚಿವರ ಹೆಸರನ್ನು ಪ್ರಸ್ತಾಪಿಸುವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರನ್ಯಾ ಜೊತೆಗೆ ಸಂಬಂಧ ಹೊಂದಿದವರು, ಆಕೆಗೆ ಪ್ರೋಟೋಕಾಲ್ ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಚಿನ್ನವನ್ನು ತಂದಿದ್ದು ಎಲ್ಲಿಂದ? ಎಂಬುದೂ ನನಗೆ ಗೊತ್ತಿದೆ ಎಂದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌