ಬೆಂಗಳೂರು : ನಗರ ಹೊರವಲಯದ ನಿರ್ಮಾಣ ಹಂತದ ಕಟ್ಟಡದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್‌ವೊಬ್ಬನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರಿನ ಲೋಕನಾಥ್ ಸಿಂಗ್ (37) ಕೊಲೆಯಾದ ದುರ್ದೈವಿ. ಬಿಳಿಜಾಜಿ ಗ್ರಾಮದ ಬಿಜಿಎಸ್ ಲೇಔಟ್ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಲೋಕನಾಥ್‌ಗೆ ಚಾಕುವಿನಿಂದ ಇರಿದು ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹ ಕಂಡು ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲಿಸಿದಾಗ ಮೃತನ ಗುರುತು ಪತ್ತೆಯಾಗಿದೆ.
ಹತ್ಯೆ ಹಿಂದೆ ರೈಸ್ ಫುಲ್ಲಿಂಗ್ ದಂಧೆಕೋರರು?:
ತನ್ನ ಕುಟುಂಬದ ಜತೆ ಕುದೂರಿನಲ್ಲಿ ನೆಲೆಸಿದ್ದ ಲೋಕನಾಥ್, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಇತ್ತೀಚಿಗೆ ಪ್ರಾಚೀನ ಕಾಲದ ಚೆಂಬು ಹಾಗೂ ಮಣಿ ಸರಗಳಿವೆ. ಅವುಗಳನ್ನು ಖರೀದಿಸಿದರೆ ಅದೃಷ್ಟ ಬರಲಿದೆ ಎಂದು ಹೇಳಿ ಜನರಿಗೆ ಮಂಕೂಬೂದಿ ಎರಚಿ ವಂಚಿಸುವ ರೈಸ್‌ಫುಲ್ಲಿಂಗ್ ದಂಧೆಯಲ್ಲಿ ಲೋಕನಾಥ್ ಸಿಂಗ್ ತೊಡಗಿದ್ದ ಎನ್ನಲಾಗಿದೆ. ಇದೇ ರೈಸ್ ಫುಲ್ಲಿಂಗ್ ವಿಚಾರವಾಗಿಯೇ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಪೆಕ್ಟರ್ ಹೆಸರಿನಲ್ಲಿ ಬೆದರಿಸಿ ಹಣ ವಸೂಲಿ
ಇನ್ನು ರಾಮನಗರ ಜಿಲ್ಲೆ ಬಿಡದಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ಜತೆ ಲೋಕನಾಥ್ ಆಪ್ತನಾಗಿದ್ದ. ಈ ಹಿಂದೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿದ್ದಾಗ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ವಿರುದ್ಧದ ₹72 ಲಕ್ಷ ದುರ್ಬಳಕೆ ಪ್ರಕರಣದಲ್ಲಿ ಲೋಕನಾಥ್ ಸಿಂಗ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಇನ್‌ಸ್ಪೆಕ್ಟರ್ ಪರವಾಗಿ ದೂರುದಾರರಿಗೆ ಬೆದರಿಸಿ ಹಣ ವಸೂಲಿ ಮಾಡಿದ್ದ ಆರೋಪ ಸಿಂಗ್ ಮೇಲೆ ಕೇಳಿ ಬಂದಿತ್ತು.