ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟು ದರ್ಶನ್ ಗ್ಯಾಂಗ್ ಟಾರ್ಚರ್‌!

Published : Jun 16, 2024, 07:33 AM IST
Darshan arrest

ಸಾರಾಂಶ

ಚಿತ್ರ ನಟ ದರ್ಶನ್‌ ಹಾಗೂ ಆತನ ಸಹಚರರು ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ದೈಹಿಕ ಹಲ್ಲೆ ಮಾತ್ರವಲ್ಲದೆ, ಆತನಿಗೆ ವಿದ್ಯುತ್‌ ಶಾಕ್‌ ಕೂಡ ನೀಡಿದ್ದರು ಎಂಬ ಆಘಾತಕಾರಿ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಬೆಂಗಳೂರು : ಚಿತ್ರ ನಟ ದರ್ಶನ್‌ ಹಾಗೂ ಆತನ ಸಹಚರರು ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ದೈಹಿಕ ಹಲ್ಲೆ ಮಾತ್ರವಲ್ಲದೆ, ಆತನಿಗೆ ವಿದ್ಯುತ್‌ ಶಾಕ್‌ ಕೂಡ ನೀಡಿದ್ದರು ಎಂಬ ಆಘಾತಕಾರಿ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಮೃತನಿಗೆ ವಿದ್ಯುತ್ ಶಾಕ್ ಕೊಟ್ಟು ಹಿಂಸಿಸಿರುವ ವಿಚಾರವನ್ನು ನ್ಯಾಯಾಲಯಕ್ಕೆ ತಿಳಿಸಿದ ಸರ್ಕಾರಿ ವಿಶೇಷ ಅಭಿಯೋಜಕ (ಎಸ್‌ಪಿಪಿ) ಪಿ.ಪ್ರಸನ್ನಕುಮಾರ್ ಅವರು, ಈಗ ವಿದ್ಯುತ್ ಶಾಕ್ ಕೊಟ್ಟಿದ್ದ ಸಲಕರಣೆ (ಡಿವೈಸ್)ಯನ್ನು ಜಪ್ತಿ ಮಾಡಬೇಕಿರುವ ಕಾರಣ ದರ್ಶನ್ ಗ್ಯಾಂಗ್ ಅನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ವಾದ ಮಂಡಿಸಿದ್ದಾರೆ.

ರೇಣುಕಾಸ್ವಾಮಿಗೆ ಕಾಲಿನಿಂದ ಫುಟ್ಬಾಲ್‌ನಂತೆ ಒದ್ದು, ಮರ್ಮಾಂಗಕ್ಕೆ ಹೊಡೆದು, ಕೈ-ಕಾಲುಗಳನ್ನು ಹಿಡಿದು ಜೋಲಿಯಾಡಿ, ದೊಣ್ಣೆ, ಮರದ ತುಂಡುಗಳು ಹಾಗೂ ಹಗ್ಗದಿಂದ ಹೊಡೆದು ಮನಬಂದಂತೆ ಚಿತ್ರಹಿಂಸೆ ನೀಡಿ ಕೊಂದಿದ್ದು ಬೆಳಕಿಗೆ ಬಂದಿತ್ತು. ಆದರೆ ಆತನಿಗೆ ವಿದ್ಯುತ್ ಶಾಕ್ ಸಹ ಕೊಟ್ಟಿದ್ದರು ಎಂಬ ವಿಚಾರ ಇದೀಗ ಬಹಿರಂಗವಾಗಿದೆ.

ವಿದ್ಯುತ್ ಡಿವೈಸ್‌ಗೆ ಹುಡುಕಾಟ: ತನ್ನ ಪ್ರೇಯಸಿ ಪವಿತ್ರಾಗೌಡಳಿಗೆ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ಕೋಪಗೊಂಡು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಜೂ.8ರಂದು ತನ್ನ ಸಹಚರರ ಮೂಲಕ ಅಪಹರಿಸಿ ನಗರಕ್ಕೆ ನಟ ದರ್ಶನ್ ಕರೆಸಿದ್ದರು. ಆನಂತರ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ಆತನ ಮೇಲೆ ದರ್ಶನ್ ಗ್ಯಾಂಗ್ ಕ್ರೌರ್ಯ ಮೆರೆದಿತ್ತು. ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ನೀಡುವ ಸಲುವಾಗಿ ಶೆಡ್‌ಗೆ ಹೊರಗಡೆಯಿಂದ ಉಪಕರಣವನ್ನು (ಡಿವೈಸ್‌) ತಂದಿದ್ದರು. ಈ ಕೃತ್ಯ ಎಸಗಿದ ಬಳಿಕ ಆ ವಿದ್ಯುತ್ ಉಪಕರಣವನ್ನು ದರ್ಶನ್ ಸಹಚರರು ಬೇರೆಡೆ ಸಾಗಿಸಿದ್ದಾರೆ.

ಶೆಡ್‌ನಲ್ಲಿ ರೇಣುಕಾಸ್ವಾಮಿಗೆ ಮನಬಂದಂತೆ ಹೊಡೆದು ಹಿಂಸಿಸಿದ ದರ್ಶನ್ ಗ್ಯಾಂಗ್‌, ಆ ವೇಳೆ ಆತನಿಗೆ ವಿದ್ಯುತ್ ಶಾಕ್ ಸಹ ಕೊಟ್ಟು ಹಿಂಸಿಸಿದೆ. ಶೆಡ್‌ನಲ್ಲಿ ರೇಣುಕಾಸ್ವಾಮಿ ಮೃತಪಟ್ಟ ಬಳಿಕ ಆತಂಕಗೊಂಡ ಆರೋಪಿಗಳು, ವಿದ್ಯುತ್‌ ಶಾಕ್ ನೀಡಲು ತಂದಿದ್ದ ಉಪಕರಣವನ್ನು ಬೇರೆಡೆ ಸಾಗಿಸಿದ್ದಾರೆ. ವಿಚಾರಣೆ ವೇಳೆ ವಿದ್ಯುತ್ ಶಾಕ್ ಕೊಟ್ಟಿರುವ ಸಂಗತಿ ಬಯಲಾಗಿದೆ. ಆದರೆ ಆ ಉಪಕರಣದ ಕುರಿತು ಆರೋಪಿಗಳು ಬಾಯ್ಬಿಡುತ್ತಿಲ್ಲ. ಹೀಗಾಗಿ ವಿದ್ಯುತ್ ಶಾಕ್ ಕೊಟ್ಟಿದ್ದ ಸಾಧನ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮರ್ಮಾಂಗ, ಪೃಷ್ಠ, ತಲೆ ಸೇರಿ ವಿವಿಧೆಡೆ ಶಾಕ್‌?: ಮೃತ ರೇಣುಕಾಸ್ವಾಮಿಗೆ ಮರ್ಮಾಂಗ, ಪೃಷ್ಠ, ತಲೆ ಹಾಗೂ ಬಾಯಿ ಸೇರಿದಂತೆ ದೇಹದ ವಿವಿಧೆಡೆ ವಿದ್ಯುತ್ ಶಾಕ್ ನೀಡಿ ದರ್ಶನ್‌ ಗ್ಯಾಂಗ್ ಮೃಗೀಯವಾಗಿ ವರ್ತಿಸಿದೆ ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಸಹ ಮರ್ಮಾಂಗದ ಬಳಿ ರಕ್ತದ ಕಲೆಗಳು ಹಾಗೂ ತಲೆಯೊಳಗೆ ರಕ್ತಸ್ರಾವವಾಗಿ ಹೆಪ್ಟುಗಟ್ಟಿದ್ದು ಪತ್ತೆಯಾಗಿತ್ತು. ಹೀಗಾಗಿ ವಿದ್ಯುತ್‌ ಶಾಕ್ ಪರಿಣಾಮ ತಲೆಯೊಳಗೆ ರಕ್ತ ಸಂಚಲನ ಸ್ಥಗಿತವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಷೇರುಪೇಟೆಯಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿಗೆ ₹8.3 ಕೋಟಿ ಧೋಖಾ
ಪಾದಚಾರಿಗಳಿಗೆ ಬೆಕ್ ಗುದ್ದಿಸಿ ಕೆಳಗೆ ಬಿದ್ದು ಅಪ್ರಾಪ್ತ ಸವಾರ ಸಾವು