ಕೇರಳ ರೀತಿ ಲೈಂಗಿಕ ದೌರ್ಜನ್ಯದ ಕುರಿತು ತನಿಖೆ ನಡೆಸುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ

KannadaprabhaNewsNetwork | Updated : Sep 06 2024, 04:08 AM IST

ಸಾರಾಂಶ

ಮಲಯಾಳ ಚಿತ್ರರಂಗದಲ್ಲಿ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದ ಬೆನ್ನಲ್ಲೇ, ಸ್ಯಾಂಡಲ್‌ವುಡ್‌ನಲ್ಲೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಬೇಕು ಎಂಬ ಹಕ್ಕೊತ್ತಾಯ ತೀವ್ರವಾಗಿದೆ.

 ಬೆಂಗಳೂರು : ಮಲಯಾಳ ಚಿತ್ರರಂಗದಲ್ಲಿ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದ ಬೆನ್ನಲ್ಲೇ, ಸ್ಯಾಂಡಲ್‌ವುಡ್‌ನಲ್ಲೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಬೇಕು ಎಂಬ ಹಕ್ಕೊತ್ತಾಯ ತೀವ್ರವಾಗಿದೆ.

ಮುಖ್ಯಮಂತ್ರಿಗಳ ನಿವಾಸ ಕಾವೇರಿಗೆ ಗುರುವಾರ ಆಗಮಿಸಿದ ‘ಫೈರ್‌’ ಸಂಸ್ಥೆಯ ನಿಯೋಗ ಈ ಸಂಬಂಧ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ನೆರೆಯ ಕೇರಳದಲ್ಲಿ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಗಳು ಹೊರಬಂದಿವೆ. ಆದ್ದರಿಂದ ಅಲ್ಲಿನ ಸರ್ಕಾರ ತನಿಖೆಗೆ ಸಮಿತಿ ನೇಮಿಸಿದೆ. ಅದೇ ರೀತಿ ರಾಜ್ಯದಲ್ಲೂ ಸ್ಯಾಂಡಲ್‌ವುಡ್‌ ನಟಿಯರು ಲೈಂಗಿಕ ದೌರ್ಜನ್ಯ ಸೇರಿದಂತೆ ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಬೇಕು ಎಂದು ಮನವಿ ಸಲ್ಲಿಸಿತು. ಹಿರಿಯ ಸಾಮಾಜಿಕ ಕಾರ್ಯಕರ್ತೆ ವಿಜಯಮ್ಮ, ನಟ ಚೇತನ್, ನಟಿ ಶೃತಿ ಹರಿಹರನ್‌ ಮತ್ತಿತರರು ನಿಯೋಗದಲ್ಲಿದ್ದರು.

ಪತ್ರದ ಬೆನ್ನಲ್ಲೇ ಭೇಟಿ:

ಕನ್ನಡ ಚಿತ್ರರಂಗದಲ್ಲಿನ ಲೈಂಗಿಕ ಹಿಂಸೆ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸುವಂತೆ ಬುಧವಾರವಷ್ಟೇ ಫೈರ್‌ (ಫಿಲ್ಮ್‌ ಇಂಡಸ್ಟ್ರಿ ಫಾರ್‌ ರೈಟ್ಸ್‌ ಆ್ಯಂಡ್‌ ಈಕ್ವಾಲಿಟಿ) ಸಂಸ್ಥೆಯು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿತ್ತು. ಚಿತ್ರರಂಗದ ಹಲವು ಗಣ್ಯರು ಈ ಪತ್ರಕ್ಕೆ ಸಹಿ ಹಾಕಿದ್ದರು. ಇದರ ಬೆನ್ನಲ್ಲೇ ಗುರುವಾರ ಫೈರ್‌ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಮತ್ತೊಂದೆಡೆ, ನಟಿ ಸಂಜನಾ ಅವರು ಸಿದ್ದರಾಮಯ್ಯ ಅವರನ್ನು ಗುರುವಾರ ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿ, ರಾಜ್ಯದಲ್ಲೂ ಕೇರಳ ಮಾದರಿಯಲ್ಲಿ ಲೈಂಗಿಕ ದೌರ್ಜನ್ಯಗಳ ತನಿಖೆಗೆ ಸಮಿತಿ ರಚಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. 

ಸ್ಯಾಂಡಲ್‌ವುಡ್‌ನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಬೇಕು ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತೆ ವಿಜಯಮ್ಮ, ನಟ ಚೇತನ್, ನಟಿ ಶೃತಿ ಹರಿಹರನ್‌ ಮತ್ತಿತರರಿದ್ದ ‘ಫೈರ್‌’ ಸಂಸ್ಥೆಯ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿದ ನಟಿ ಸಂಜನಾ, ರಾಜ್ಯದಲ್ಲೂ ಕೇರಳ ಮಾದರಿಯಲ್ಲಿ ಲೈಂಗಿಕ ದೌರ್ಜನ್ಯಗಳ ತನಿಖೆಗೆ ಸಮಿತಿ ರಚಿಸುವಂತೆ ಮನವಿ ಸಲ್ಲಿಸಿದರು.

Share this article