ವೈಯಕ್ತಿಕ ಕಾರಣಗಳಿಂದ ಬೇಸರಗೊಂಡು ಕಿರುತೆರೆ ಖ್ಯಾತ ನಟಿಯೊಬ್ಬರು ಆತ್ಮ*ತ್ಯೆಗೆ ಶರಣಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೈಲಸಂದ್ರದ ಲಿವಿಂಗ್ ಇನ್ಸ್ಟಾ ಪಿಜಿ ನಿವಾಸಿ ನಂದಿನಿ (26) ಮೃತ ದುರ್ದೈವಿ.
ಬೆಂಗಳೂರು : ವೈಯಕ್ತಿಕ ಕಾರಣಗಳಿಂದ ಬೇಸರಗೊಂಡು ಕಿರುತೆರೆ ಖ್ಯಾತ ನಟಿಯೊಬ್ಬರು ಆತ್ಮ*ತ್ಯೆಗೆ ಶರಣಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಲಸಂದ್ರದ ಲಿವಿಂಗ್ ಇನ್ಸ್ಟಾ ಪಿಜಿ ನಿವಾಸಿ ನಂದಿನಿ (26) ಮೃತ ದುರ್ದೈವಿ. ಪಿಜಿಯ ತನ್ನ ಕೊಠಡಿಯಲ್ಲಿ ಭಾನುವಾರ ರಾತ್ರಿ ಅವರು ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ಮೃತಳ ಕೋಣೆಗೆ ಸ್ನೇಹಿತೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಬಸವರಾಜೇಶ್ವರಿ ದಂಪತಿ ಪುತ್ರಿ ನಂದಿನಿ ಅವರು, ಬಿಇ ವಿದ್ಯಾಭ್ಯಾಸ ಮೊಟಕುಗೊಳಿಸಿ ಬಣ್ಣದ ಲೋಕಕ್ಕೆ ಅಡಿಯಿಟ್ಟಿದ್ದರು. 2019ರಿಂದ ಕನ್ನಡದಲ್ಲಿ ಜೀವ ಹೂವಾಗಿದೆ, ನೀನಾದೆ ನಾ, ಸಂಘರ್ಷ, ಮಧುಮಗಳು ಸೇರಿ ಹಲವು ಧಾರವಾಹಿಗಳಲ್ಲಿ ನಂದಿನಿ ನಟಿಸಿದ್ದರು. ಇತ್ತೀಚೆಗೆ ತಮಿಳು ಕಿರುತೆರೆಯಲ್ಲಿ ‘ಗೌರಿ’ ಧಾರವಾಹಿಯಲ್ಲಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಈ ಧಾರವಾಹಿ ಕಾರಣಕ್ಕೆ ಚೆನ್ನೈ ನಗರಕ್ಕೆ ವಾಸ್ತವ್ಯ ಬದಲಾಯಿಸಲು ನಂದಿನಿ ಯೋಜಿಸಿದ್ದರು. ಆದರೆ ಅಷ್ಟರಲ್ಲಿ ಅವರ ಬದುಕಿನ ಪಯಣ ದುರಂತ ಅಂತ್ಯ ಕಂಡಿದೆ.
ತಂದೆ ಕೆಲಸ ಮಗಳಿಗೆ:
ಎರಡು ವರ್ಷಗಳ ಹಿಂದೆ ಅನಾರೋಗ್ಯ ಹಿನ್ನೆಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದ ನಂದಿನಿ ಅವರ ತಂದೆ ಮಹಾಬಲೇಶ್ವರ ಮೃತಪಟ್ಟಿದ್ದರು. ಅಕಾಲಿಕವಾಗಿ ತಂದೆ ನಿಧನ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇರೆಗೆ ನಂದಿನಿಗೆ ದ್ವಿತೀಯ ದರ್ಜೆ ಸಹಾಯಕ ಹುದ್ದೆ ನೀಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ ಸರ್ಕಾರಿ ಉದ್ಯೋಗಕ್ಕೆ ಸೇರಲು ಅವರು ನಿರಾಕರಿಸಿದ್ದರು. ಎರಡು ಬಾರಿ ಸರ್ಕಾರ ಹುದ್ದೆ ಆಫರ್ ಬಂದರೂ ಅವರು ಒಲ್ಲೆ ಎಂದಿದ್ದರು. ಇದೇ ವಿಷಯವಾಗಿ ಬೇಸರಗೊಂಡು ನಂದಿನಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಡೈರಿ ಪತ್ತೆ
ಅಲ್ಲದೆ ಮೃತಳ ಕೋಣೆಯಲ್ಲಿ ಡೈರಿ ಪತ್ತೆಯಾಗಿದ್ದು, ಇದರಲ್ಲಿ ಸಹ ಸರ್ಕಾರಿ ನೌಕರಿ ವಿಷಯವನ್ನು ಅವರು ಉಲ್ಲೇಖಿಸಿದ್ದಾರೆ. ತನಗೆ ಸರ್ಕಾರಿ ನೌಕರಿಗೆ ಸೇರಲು ಇಷ್ಟವಿಲ್ಲ. ನಟನೆಯಲ್ಲೇ ಮುಂದುವರೆಯಲು ಬಯಸಿದ್ದೇನೆ. ಆದರೆ ನನ್ನ ಕುಟುಂಬದವರು ಸರ್ಕಾರಿ ನೌಕರಿಗೆ ಸೇರುವಂತೆ ಒತ್ತಾಯಿಸುತ್ತಿದ್ದಾರೆ ಎಂದು ನಂದಿನಿ ಬರೆದಿದ್ದಾರೆ ಎನ್ನಲಾಗಿದೆ.


