ಬೀದಿ ನಾಯಿ ಮೇಲೆ ಕಾರು ಹತ್ತಿಸಿಹತ್ಯೆಗೈದ ವಿಕೃತ ಚಾಲಕನ ಸೆರೆ

KannadaprabhaNewsNetwork |  
Published : Jan 10, 2025, 01:46 AM IST
Dog death | Kannada Prabha

ಸಾರಾಂಶ

ಇತ್ತೀಚೆಗೆ ರಸ್ತೆಯಲ್ಲಿ ತನ್ನಪಾಡಿಗೆ ತಾನು ಮಲಗಿದ್ದ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಅಮಾನುಷವಾಗಿ ಹತ್ಯೆ ಮಾಡಿದ್ದ ಘಟನೆ ಸಂಬಂಧ ಕಾರು ಚಾಲಕನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ರಸ್ತೆಯಲ್ಲಿ ತನ್ನಪಾಡಿಗೆ ತಾನು ಮಲಗಿದ್ದ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಅಮಾನುಷವಾಗಿ ಹತ್ಯೆ ಮಾಡಿದ್ದ ಘಟನೆ ಸಂಬಂಧ ಕಾರು ಚಾಲಕನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆ.ಪಿ.ನಗರ 8ನೇ ಹಂತದ ರಘವನಪಾಳ್ಯ ನಿವಾಸಿ ಮಂಜುನಾಥ(35) ಬಂಧಿತ ಕಾರು ಚಾಲಕ. ಡಿ.31ರಂದು ಸಂಜೆ ಸುಮಾರು 4.30ಕ್ಕೆ ರಘವನಪಾಳ್ಯದ ಶೇಖರ್‌ ಲೇಔಟ್‌ 1ನೇ ಮುಖ್ಯರಸ್ತೆಯ 1ನೇ ಅಡ್ಡರಸ್ತೆಯಲ್ಲಿ ಸುಮಾರು 4 ತಿಂಗಳ ಬೀದಿ ನಾಯಿ ಮಲಗಿತ್ತು. ಈ ವೇಳೆ ಆರೋಪಿ ಮಂಜುನಾಥ ತನ್ನ ಕೆ.ಎ.02 ಎಂಎಸ್‌ 2781 ನೋಂದಣಿ ಸಂಖ್ಯೆಯ ಕೆಂಪು ಬಣ್ಣದ ಮಹೀಂದ್ರ ಥಾರ್‌ ಕಾರನ್ನು ನಾಯಿ ಮೇಲೆ ಹತ್ತಿಸಿಕೊಂಡು ತೆರಳಿದ್ದ. ದೇಹದ ಮೇಲೆ ಕಾರಿನ ಚಕ್ರ ಉರುಳಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆ ಬೀದಿ ನಾಯಿ ನರಳಾಡಿ ರಸ್ತೆಯಲ್ಲೇ ಪ್ರಾಣ ಬಿಟ್ಟಿತ್ತು.

ವೈರಲ್‌ ವಿಡಿಯೋ ನೋಡಿ ದೂರು:

ಬೀದಿ ನಾಯಿ ಮೇಲೆ ಕಾರು ಹತ್ತಿಸಿಕೊಂಡು ಹೋಗುವ ದೃಶ್ಯಾವಳಿ ಘಟನಾ ಸ್ಥಳದ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ವಿಡಿಯೋ ಗಮನಿಸಿದ್ದ ಕಲಾಸಿಪಾಳ್ಯ ನಿವಾಸಿ ಅನಿರುದ್ಧ ಎಂಬುವವರು ಘಟನೆ ಕುರಿತು ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ತಲಘಟ್ಟಪುರ ಠಾಣೆ ಪೊಲೀಸರು ತನಿಖೆ ನಡೆಸಿ, ವೈರಲ್‌ ವಿಡಿಯೋ ಸುಳಿವು ಆಧರಿಸಿ ಕಾರನ್ನು ಪತ್ತೆ ಮಾಡಿ ಚಾಲಕ ಮಂಜುನಾಥನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾಲಕನ ವಿರುದ್ಧ ಭಾರೀ ಆಕ್ರೋಶ:

ವೈರಲ್‌ ವಿಡಿಯೋದಲ್ಲಿ ಕಾರು ಚಾಲಕ ಅಮಾಯಕ ಬೀದಿ ನಾಯಿ ಮೇಲೆ ಉದ್ದೇಶ ಪೂರ್ವಕವಾಗಿ ಕಾರು ಹರಿಸಿ ಹತ್ಯೆ ಮಾಡಿರುವುದು ಕಂಡು ಬಂದಿತ್ತು. ಹೀಗಾಗಿ ನೆಟ್ಟಿಗರು ದುರುಳ ಕಾರು ಚಾಲಕನ ಮೇಲೆ ಆಕ್ರೋಶ ಹೊರಹಾಕಿದ್ದರು. ಮೂಕಪ್ರಾಣಿ ಮೇಲೆ ಕ್ರೌರ್ಯ ಮೆರೆದ ಕಾರು ಚಾಲಕನ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು
ಶಾಸಕ ಬೈರತಿಗೆ ಕಂಟಕವಾದ ಕುಂಭಮೇಳ ಯಾತ್ರೆ!