ಹವಾ ಸೃಷ್ಟಿಸಲು ಮಾರಕಾಸ್ತ್ರ ಹಿಡಿದು ಪುಂಡಾಟ: 4 ಬಂಧನ

KannadaprabhaNewsNetwork | Updated : Mar 19 2024, 04:43 PM IST

ಸಾರಾಂಶ

ಹವಾ ಸೃಷ್ಟಿಸಲು ಮಾರಕಾಸ್ತ್ರ ಹಿಡಿದು ಬೈಕ್‌ನಲ್ಲಿ ಕಿರುಚಾಡುತ್ತಾ ಪುಂಡಾಟ ನಡೆಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಏರಿಯಾದಲ್ಲಿ ಹವಾ ಸೃಷ್ಟಿಸಲು ಮಾರಕಾಸ್ತ್ರ ಹಿಡಿದು ಪುಂಡಾಟ ನಡೆಸಿದ್ದ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಆರ್‌.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಜಿ.ಹಳ್ಳಿ ಕುಶಾಲ್‌ನಗರದ ಮೊಹಮ್ಮದ್‌ ಫರಾನ್‌ ಮಲ್ಲಿಕ್‌ (19), ಅದಾನ್‌ ಶರೀಫ್‌ (18) ಹಾಗೂ ಅಕೇಲ್‌ ಭಾಷಾ (18), ಅಬ್ದುಲ್‌ ರಿಯಾನ್‌ (19) ಬಂಧಿತರು. 

ಆರೋಪಿಗಳಿಂದ ಎರಡು ದ್ವಿಚಕ್ರ ವಾಹನ ಹಾಗೂ ಎರಡು ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ. ಆರೋಪಿಗಳು ಭಾನುವಾರ ಸಂಜೆ 5.30ರ ಸುಮಾರಿಗೆ ಸುಲ್ತಾನ್‌ಪಾಳ್ಯ ಮುಖ್ಯರಸ್ತೆಯಲ್ಲಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ದ್ವಿಚಕ್ರ ವಾಹನದಲ್ಲಿ ಓಡಾಡುತ್ತಾ ಜೋರಾಗಿ ಕೂಗಾಡುತ್ತಿದ್ದರು.

ಈ ಸಂಬಂದ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಏರಿಯಾದಲ್ಲಿ ಹವಾ ಸೃಷ್ಟಿಸಲು ಹಾಗೂ ಶೋಕಿಗಾಗಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಜಳಪಿಸುತ್ತಾ ಸಾರ್ವಜನಿಕರಲ್ಲಿ ಭಯ ಉಂಟು ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ಆರ್‌.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಬೈಕ್‌ ವ್ಹೀಲಿಂಗ್‌: ನಾಲ್ವರ ವಿರುದ್ಧ ಪ್ರಕರಣ ದಾಖಲುಕನ್ನಡಪ್ರಭ ವಾರ್ತೆ ಬೆಂಗಳೂರುಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿಯಾಗಿ ದ್ವಿಚಕ್ರ ವಾಹನ ವ್ಹೀಲಿಂಗ್‌ ಮಾಡುತ್ತಿದ್ದ ನಾಲ್ವರು ಯುವಕರ ವಿರುದ್ಧ ಕೆಂಗೇರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪಶ್ಚಿಮ ವಿಭಾಗದ ಕೆಂಗೇರಿ ಸಂಚಾರ ಠಾಣೆ ಪೊಲೀಸರು, ಮಾ.17ರಂದು ಅಪಾಯಕಾರಿಯಾಗಿ ವ್ಹೀಲಿಂಗ್‌ ಮಾಡುತ್ತಿದ್ದ ನಾಲ್ವರು ಯುವಕರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. 

ಈ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದ್ದು, ವ್ಹೀಲಿಂಗ್‌ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ ಅನಿತಾ ಬಿ.ಹದ್ದಣ್ಣನವರ್‌ ತಿಳಿಸಿದ್ದಾರೆ.

ಏರೋಸ್ಪೆಸ್‌ ಮೇಲೆ ಸೈಬರ್‌ ದಾಳಿ ತನಿಖೆ ಎನ್‌ಐಎಗೆಕನ್ನಡಪ್ರಭ ವಾರ್ತೆ ಬೆಂಗಳೂರು ಕಳೆದ ವರ್ಷದ ನಡೆದಿದ್ದ ನ್ಯಾಷನಲ್‌ ಏರೋಸ್ಪೆಸ್ ಲ್ಯಾಬರೋಟರೀಸ್ (ಎನ್‌ಎಎಲ್‌) ಮೇಲಿನ ಸೈಬರ್ ದಾಳಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಕೇಂದ್ರ ಸರ್ಕಾರ ವಹಿಸಿದೆ. 

ಹಳೇ ವಿಮಾನ ನಿಲ್ದಾಣ ರಸ್ತೆಯ ಕೊಡೀಹಳ್ಳಿ ಸಮೀಪದಲ್ಲಿ ಎಎಎಲ್‌ ಕಚೇರಿ ಇದ್ದು, 2023ರ ನವೆಂಬರ್ 15ರಂದು ಎನ್‌ಎಎಲ್ ವೆಬ್‌ಸೈಟ್‌ಗೆ ಸೈಬರ್ ದುಷ್ಕರ್ಮಿಗಳು ದಾಳಿ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. 

ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕೃತ್ಯ ಸಂಬಂಧ ಈಗ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿ ಬೆಂಗಳೂರು ವಲಯದ ಎನ್‌ಐಎ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. 

ಇಸ್ರೋ ಹಾಗೂ ಡಿಆರ್‌ಓ ಜೊತೆ ಎನ್ಎಎಲ್ ಕಂಪನಿ ಕೆಲಸ ಮಾಡುತ್ತಿದೆ. ಹೀಗಾಗಿ ಎನ್‌ಎಎಲ್‌ ಮೇಲಿನ ಸೈಬರ್ ದಾಳಿ ಹಿಂದೆ ದೇಶದ ಭದ್ರತೆಗೆ ಅಪಾಯ ತರುವ ದುರುದ್ದೇಶವಿರಬಹುದು ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್‌ಐಎಗೆ ಕೇಂದ್ರ ಗೃಹ ಸಚಿವಾಲಯ ವಹಿಸಿದೆ ಎಂದು ತಿಳಿದು ಬಂದಿದೆ.

Share this article