ಬೆಂಗಳೂರು : ಇತ್ತೀಚೆಗೆ ನಡೆದಿದ್ದ ರೌಡಿ ಶೀಟರ್ ಹೈದರ್ ಅಲಿ ಕೊಲೆ ಪ್ರಕರಣ ಭೇದಿಸಿರುವ ಅಶೋಕನಗರ ಠಾಣೆ ಪೊಲೀಸರು ಇಬ್ಬರು ರೌಡಿ ಶೀಟರ್‌ಗಳು ಸೇರಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ರೌಡಿ ಶೀಟರ್ ನಯಾಜ್ ಪಾಷಾ (40), ಮತೀನ್ (37) ದರ್ಶನ್ (28) ರೌಡಿ ಶೀಟರ್ ರಿಜ್ವಾನ್(40), ಸದ್ದಾಂ (24), ರಾಹೀದ್ (23) ಹಾಗೂ ವಸೀಂ (25) ಬಂಧಿತರು. ಆರೋಪಿಗಳು ಫೆ.23ರಂದು ಅಶೋಕನಗರ ಫುಟ್‌ಬಾಲ್ ಸ್ಟೇಡಿಯಂನ ಗೇಟ್ ಬಳಿ ರೌಡಿ ಶೀಟರ್ ಹೈದರ್ ಅಲಿಯನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆಗೈದು ಭೀಕರವಾಗಿ ಹತ್ಯೆ ಮಾಡಿದ್ದರು.
ಬಂಧಿತರ ಪೈಕಿ ನಯಾಜ್ ಮತ್ತು ರಿಜ್ವಾನ್ ರೌಡಿ ಶೀಟರ್‌ಗಳಾಗಿದ್ದಾರೆ. ರಿಜ್ವಾನ್, ಸದ್ದಾಂ, ರಾಹೀದ್, ವಸೀಂ ಶಿವಮೊಗ್ಗದವರು. ಉಳಿದ ಐವರ ವಿರುದ್ಧ ಗಲಾಟೆ, ಹಲ್ಲೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ. ಪ್ರಕರಣದ ಪ್ರಮುಖ ಆರೋಪಿ ನಯಾಜ್ ಮತ್ತು ಹತ್ಯೆಯಾದ ಹೈದರ್ ನಡುವೆ ಕಳೆದ 10 ವರ್ಷಗಳಿಂದ ದ್ವೇಷ ಇತ್ತು. ಈ ದ್ವೇಷದ ಹಿನ್ನೆಲೆಯಲ್ಲಿ ನಯಾಜ್ ಹಾಗೂ ಆತನ ಸಹಚರರು ಸಂಚು ರೂಪಿಸಿ ರೌಡಿ ಹೈದರ್‌ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ.ಶೇಖರ್ ತಿಳಿಸಿದ್ದಾರೆ.
ಹ್ಯಾರಿಸ್ ಜತೆ ಹೈದರ್ ಪ್ರಚಾರ:
ಈ ಹತ್ಯೆ ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಸಾಧ್ಯತೆಯಿದ್ದು, ಆರೋಪಿಗಳ ಹೆಚ್ಚಿನ ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ. ಇತ್ತೀಚೆಗೆ ಹೈದರ್ ರಾಜಕೀಯವಾಗಿ ಗುರುತಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದ. ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಜತೆಗೆ ಕಾಣಿಸಿಕೊಂಡು ಚುನಾವಣಾ ಪ್ರಚಾರದಲ್ಲೂ ಭಾಗಿಯಾಗಿದ್ದ. ಹೀಗಾಗಿ ಆತನ ಹತ್ಯೆಗೆ ರಾಜಕೀಯ ದ್ವೇಷ ಏನಾದರೂ ಇರಬಹುದೇ ಎಂಬ ಕೋನದಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಯಾಜ್ ವಿರುದ್ಧ 8 ಕ್ರೈಂ ಕೇಸ್ ದಾಖಲು:
ಪ್ರಮುಖ ಆರೋಪಿ ನಯಾಜ್ ಅಶೋಕನಗರ ಠಾಣೆ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಅಶೋಕನಗರ, ಶಾಂತಿನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ 8 ಅಪರಾಧ ಪ್ರಕರಣಗಳು ದಾಖಲಾಗಿವೆ. ನಯಾಜ್ ಪಾಷಾ ಮತ್ತು ಹೈದರ್ ಅಲಿ ನಡುವೆ ಹಲವು ವರ್ಷಗಳಿಂದ ಜಟಾಪಟಿ ನಡೆಯುತ್ತಿತ್ತು. ಹೀಗಾಗಿ ಇಬ್ಬರು ಪರಸ್ಪರ ದ್ವೇಷ ಸಾಧಿಸುತ್ತಿದ್ದರು. ಈ ನಡುವೆ ನಯಾಜ್ ಸ್ಕೆಚ್ ಹಾಕಿ ಹೈದರ್ ಅಲಿ ಅನ್ನು ಅಡ್ಡಗಟ್ಟಿ ಹತ್ಯೆ ಮಾಡಿದ್ದರು.
ರೌಡಿ ಹೈದರ್ ಅಲಿ ಹತ್ಯೆ ಪ್ರಕರಣ ಸಂಬಂಧ ಇಬ್ಬರು ರೌಡಿ ಶೀಟರ್ ಸೇರಿ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ದ್ವೇಷವೇ ಹತ್ಯೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ತನಿಖೆ ಮುಂದುವರೆದಿದೆ
- ಎಚ್.ಟಿ.ಶೇಖರ್, ಕೇಂದ್ರ ವಿಭಾಗದ ಡಿಸಿಪಿ