;Resize=(412,232))
ಬೆಂಗಳೂರು : ಷೇರು ಮಾರುಕಟ್ಟೆ (ಟ್ರೇಡಿಂಗ್) ಹಾಗೂ ಆನ್‌ಲೈನ್ ಬೆಟ್ಟಿಂಗ್ ಹೆಸರಿನಲ್ಲಿ ನಡೆದಿರುವ 1000 ಕೋಟಿ ರು.ಗೂ ಅಧಿಕ ಮೊತ್ತದ ಮಹಾ ಸೈಬರ್ ವಂಚನೆ ಹಗರಣವನ್ನು ಹುಳಿಮಾವು ಠಾಣೆ ಪೊಲೀಸರು ಬಯಲು ಮಾಡಿದ್ದಾರೆ.
ಈ ಕೃತ್ಯದ ಹಣ ವರ್ಗಾವಣೆಗೆ ನಕಲಿ ಬ್ಯಾಂಕ್ ಖಾತೆ ತೆರೆಯಲು ನೆರವಾಗಿದ್ದ ತಾಯಿ-ಮಗ ಸೇರಿ 12 ಮಂದಿಯನ್ನು ಬಂಧಿಸಿರುವ ಪೊಲೀಸರು, ದೇಶ ವ್ಯಾಪಿ 4,500 ಬ್ಯಾಂಕ್ ಖಾತೆಗಳಲ್ಲಿ ಸುಮಾರು 240 ಕೋಟಿ ರು. ಹಣ ವಂಚಕರ ಪಾಲಾಗದಂತೆ ಮುಟ್ಟಗೋಲು ಹಾಕುವಲ್ಲಿ ಯಶಸ್ಸು ಕಂಡಿದ್ದಾರೆ.
ಜೆ.ಪಿ.ನಗರದ ಅಂಜನಾಪುರದ ಮೊಹಮ್ಮದ್ ಹುಜೈಪಾ, ಆತನ ತಾಯಿ ಶಬಾನಾ, ಉತ್ತರಪ್ರದೇಶದ ಅಂಕಿತ್ ಕುಮಾರ್ ಸಿಂಗ್, ಬಿಹಾರದ ಅಜಿತ್ ಕುಮಾರ್ ಯಾದವ್, ರಾಜಸ್ಥಾನದ ಎಂ.ಅಭಿಷೇಕ್ ಸಿಂಗ್ ರಾಥೋಡ್, ವಿಶ್ವರಾಜ್ ಸಿಂಗ್ ಶೆಖಾವತ್, ಕುಶಾಲ್ ಸಿಂಗ್ ಚೌಹಾರ್, ಸತ್ಯಂಕುಮಾರ್ ಪಾಂಡೆ, ಆಕಾಶ್ ಜೈಸ್ವಾಲ್, ಪ್ರದೀಪ್ ಸಿಂಗ್, ಪಿತಾಂಬರ್ ಸಿಂಗ್ ಹಾಗೂ ಅಜಯ್ ಕುಮಾರ್ ಬಂಧಿತರು. ಇವರಿಂದ 58 ಮೊಬೈಲ್‌ಗಳು, 7 ಲ್ಯಾಪ್‌ಟಾಪ್, 9 ವಾಚ್‌ಗಳು, 531 ಗ್ರಾಂ. ಚಿನ್ನಾಭರಣ ಹಾಗೂ 4.89 ಲಕ್ಷ ರು. ನಗದು ಸೇರಿ 1 ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಜಾಲದ ‘ಮಾಸ್ಟರ್ ಮೈಂಡ್’ ಮುಂಬೈ ಮೂಲದ ಪ್ರೇಮ್ ತನೇಜಾ ದುಬೈನಲ್ಲಿ ಅಡಗಿದ್ದು, ಆತನ ಪತ್ತೆಗೆ ಪೊಲೀಸರು ಇಂಟರ್‌ಪೋಲ್ ಮೂಲಕ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.
ಇತ್ತೀಚೆಗೆ ಷೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ 3 ಕೋಟಿ ರು. ಕಳೆದುಕೊಂಡಿರುವ ಬಗ್ಗೆ ಹುಳಿಮಾವು ಠಾಣೆಗೆ ಅಕ್ಷಯ್ ನಗರದ ನಿವಾಸಿ ದೂರು ನೀಡಿದ್ದರು. ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ.ನಾರಾಯಣ್ ಮಾರ್ಗದರ್ಶನದಲ್ಲಿ ಎಸಿಪಿ ಕೆ.ಎಂ.ಸತೀಶ್ ಹಾಗೂ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರಸ್ವಾಮಿ ನೇತೃತ್ಪದ ತಂಡ ತನಿಖೆಗಿಳಿದಾಗ ದೇಶಾದ್ಯಂತ ಹರಿಡಿದ್ದ ಸೈಬರ್ ವಂಚನೆ ಜಾಲ ಪತ್ತೆಯಾಗಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಇಡೀ ವಂಚನೆ ಜಾಲವನ್ನು ದುಬೈನಲ್ಲಿ ಕುಳಿತೇ ಪ್ರೇಮ್ ನಿರ್ವಹಿಸಿದ್ದಾನೆ. ಮೂರು ವರ್ಷಗಳ ಹಿಂದೆ ಆನ್ ಲೈನ್ ಗೇಮಿಂಗ್‌ಗೆ ‘ಸ್ವಾಮೀಜಿ ಡಾಟ್.ಕಾಂ’ ಹಾಗೂ ಷೇರು ಟ್ರೇಡಿಂಗ್‌ಗೆ ‘ನಿಯೋ ಸಿಸ್ಟಮ್’ ಹೆಸರಿನ 2 ವೆಬ್‌ಸೈಟ್, ಆ್ಯಪ್‌ಗಳನ್ನು ಪ್ರತ್ಯೇಕವಾಗಿ ಪ್ರೇಮ್ ಅಭಿವೃದ್ಧಿಪಡಿಸಿದ್ದ. ಫೇಸ್ ಬುಕ್, ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಸೇರಿ ಸಾಮಾಜಿಕ ಜಾಲತಾಣಗಳ ಮೂಲಕ ಇವುಗಳ ಬಗ್ಗೆ ಪ್ರಚಾರ ನಡೆಸಿದ್ದ. ಈ ಆ್ಯಪ್‌ಗಳಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಮಾಡಿಕೊಡುವುದಾಗಿ ಆಮಿಷವೊಡ್ಡಿದ್ದ.
ಆರಂಭದಲ್ಲಿ ಆನ್‌ಲೈನ್ ಜೂಜಾಟ ಹಾಗೂ ಟ್ರೇಡಿಂಗ್‌ನಲ್ಲಿ ಎರಡು ಪಟ್ಟು ಲಾಭ ಕೊಟ್ಟು ಜನರಿಗೆ ಹೆಚ್ಚಿನ ಹೂಡಿಕೆಗೆ ಪ್ರಚೋದಿಸಿದ್ದಾನೆ. ಹಣದಾಸೆಗೆ ಬಿದ್ದು ಜನ ದೊಡ್ಡ ಮೊತ್ತದ ಹಣ ಹಾಕಿದಾಗ ಪ್ರೇಮ್ ಪಂಗನಾಮ ಹಾಕಿದ್ದಾನೆ. ಉದಾಹರಣೆಗೆ ಒಂದು ಸಾವಿರ ರು. ಬಾಜಿಗೆ 5 ಸಾವಿರ ರು. ಲಾಭ ಕೊಟ್ಟಿದ್ದಾನೆ. ಇದರಿಂದ ಉತ್ತೇಜಿತನಾಗಿ ಅದೇ ವ್ಯಕ್ತಿ 1 ಲಕ್ಷ ಬಾಜಿ ಕಟ್ಟಿದ್ದಾಗ ಅಸಲು ಕೂಡ ನೀಡದೆ ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ವಂಚನೆ ಜಾಲಕ್ಕೆ ದೆಹಲಿಯಲ್ಲಿ ಕೇಂದ್ರ ಕಚೇರಿ ತೆರೆದಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ಅಂಕಿತ್, ಬಿಹಾರದ ಅಜಿತ್, ರಾಜಸ್ಥಾನದ ಅಭಿಷೇಕ್, ಪೀತಾಂಬರ್, ಪ್ರದೀಪ್, ವಿಶ್ವರಾಜ್, ಕುಶಾಲ್, ಜಾರ್ಖಂಡ್‌ನ ಸತ್ಯಂ ಪಾಂಡೆ, ಆಕಾಶ್ ಜೈಸ್ವಾಲ್ ಹಾಗೂ ಅಜಯ್‌ಕುಮಾರ್‌ನನ್ನು ಬಂಧಿಸಲಾಗಿದೆ. ಈ ಕೆಲಸಗಾರರಿಗೆ ಪ್ರೇಮ್ ಮಾಸಿಕ ವೇತನ ಕೊಡುತ್ತಿದ್ದ. ಇನ್ನುಳಿದಂತೆ ಹುಜೈಪಾ, ಆತನ ತಾಯಿ ಶಬಾನಾ ನಕಲಿ ಖಾತೆ ಪೂರೈಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ವಂಚಕರ ತಂಡ ಬಲೆಗೆ ಬಿದ್ದದ್ದು ಹೇಗೆ?:
ಕಳೆದ ನಂಬರ್‌ನಲ್ಲಿ ಟೆಲಿಗ್ರಾಂ ಆ್ಯಪ್ ಮೂಲಕ ಪ್ರೇಮ್‌ನ ನಿಯೋ ಸಿಸ್ಟಂ ಆ್ಯಪ್ ಬಗ್ಗೆ ಅಕ್ಷಯ್ ನಗರದ ನಿವಾಸಿ ತಿಳಿದುಕೊಂಡಿದ್ದರು. ಈ ಆ್ಯಪ್‌ನಲ್ಲಿ 3.03 ಕೋಟಿ ರು. ಹೂಡಿಕೆ ಮಾಡಿ ಮೋಸ ಹೋಗಿ ಹುಳಿಮಾವು ಠಾಣೆಗೆ ದೂರು ನೀಡಿದ್ದರು. ಅದರಂತೆ ತನಿಖೆಗಿಳಿದ ಪೊಲೀಸರು, ವಂಚನೆ ಹಣ ವರ್ಗಾವಣೆಗೆ ಬಳಕೆಯಾಗಿದ್ದ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದರು. ಹೀಗೆ ಜಪ್ತಿಯಾಗಿದ್ದ ಬ್ಯಾಂಕ್ ಖಾತೆದಾರರನೊಬ್ಬ ಪೊಲೀಸರನ್ನು ಭೇಟಿಯಾಗಿ ತನ್ನ ಖಾತೆ ಯಾಕೆ ಮುಟ್ಟುಗೋಲು ಹಾಕಿದ್ದೀರಿ ಎಂದು ಪ್ರಶ್ನಿಸಿದರು. ಆಗ ಪೊಲೀಸರು, ಹಣ ವರ್ಗಾವಣೆ ಜಾಲ ಶೋಧಿಸಿದಾಗ ಭಾರೀ ಬೆಟ್ಟಿಂಗ್ ಹಾಗೂ ಟ್ರೇಡಿಂಗ್ ವಂಚನೆ ಜಾಲ ಬೆಳಕಿಗೆ ಬಂದಿದೆ.
ವಂಚಕರಿಗೆ ಟಕ್ಕರ್ ಕೊಟ್ಟು ಸ್ನೇಹ:
ಬಿಕಾಂ ಪದವಿ ಅರ್ಧಕ್ಕೆ ಮೊಟಕುಗೊಳಿಸಿದ್ದ ನಿರುದ್ಯೋಗಿ ಹುಜೈಪ ಆನ್‌ಲೈನ್ ಗೇಮಿಂಗ್ ವ್ಯಸನಿ. ಕೆಲ ತಿಂಗಳ ಹಿಂದೆ ಪ್ರೇಮ್‌ನ ಸ್ವಾಮೀಜಿ ಆ್ಯಪ್‌ನಲ್ಲಿ ಜೂಜಾಟವಾಡಿದ್ದ. ಆಗ ಹೆಚ್ಚಿನ ಹಣ ಗೆದ್ದಿದ್ದ ಆತ, ಆ ಹಣವನ್ನು ವಂಚನೆಗೆ ಒಳಗಾಗದೆ ನಗದು ಮಾಡಿಕೊಂಡಿದ್ದ. ಅಲ್ಲದೆ, ಸ್ವಾಮೀಜಿ ಆ್ಯಪ್ ಅನ್ನು ಎರಡು ಬಾರಿ ಹ್ಯಾಕ್ ಮಾಡಿ ವಂಚಕರಿಗೆ ಟಕ್ಕರ್ ಕೊಟ್ಟು ಮತ್ತಷ್ಟು ಹಣ ದೋಚಿದ್ದ. ಈ ತಾಂತ್ರಿಕ ನೈಪುಣ್ಯತೆಗೆ ಮಾರು ಹೋದ ಸೈಬರ್ ವಂಚಕರು, ಹುಜೈಪನ ಸ್ನೇಹ ಬೆಳೆಸಿದರು.
ಪ್ರೇಮ್ ಸೂಚನೆ ಮೇರೆಗೆ ದೆಹಲಿಗೆ ತೆರಳಿ ಆತನ ಸಹಚರರನ್ನು ಭೇಟಿಯಾದ. ನಂತರ ದುಬೈಗೆ ಹುಜೈಪನನ್ನು ಕರೆಸಿಕೊಂಡು ವಂಚನೆ ಕೃತ್ಯಕ್ಕೆ ಪ್ರೇಮ್ ಮಾರ್ಗದರ್ಶನ ಮಾಡಿದ್ದ. ‘ತನಗೆ ತಂದೆ ಇಲ್ಲ, ಕಷ್ಟಪಟ್ಟು ದುಡಿದು ತಾಯಿ ಸಾಕುತ್ತಿದ್ದೇನೆ’ ಎಂದು ಕರುಣಾಜನಕ ಕತೆ ಹೇಳಿ ಹುಜೈಪ ಸಿಂಪತಿಯನ್ನೂ ಗಿಟ್ಟಿಸಿಕೊಂಡಿದ್ದ. ಈ ಕತೆಗೆ ಕರಗಿದ ಪ್ರೇಮ್, ಹುಜೈಪಗೆ ಕೈ ತುಂಬ ಹಣಕೊಟ್ಟು ಕಳುಹಿಸಿದ್ದ ಎನ್ನಲಾಗಿದೆ.
25 ಸಾವಿರ ರು. ಕೊಟ್ಟು ನಕಲಿ ಖಾತೆ:
ಸೈಬರ್ ವಂಚನೆ ಕೃತ್ಯಗಳಿಗೆ ನಕಲಿ ಖಾತೆ ತೆರೆಯಲು ಹುಜೈಪ ನೆರವು ನೀಡಿದ್ದಾನೆ. ಎರಡು ವರ್ಷಗಳಲ್ಲಿ ಕೂಲಿ ಕಾರ್ಮಿಕರು ಸೇರಿ ಆರ್ಥಿಕ ದುರ್ಬಲ ವರ್ಗದವರಿಗೆ 25 ರಿಂದ 30 ಸಾವಿರ ರು. ಕೊಟ್ಟು ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಹುಜೈಪ ತೆರೆಯುತ್ತಿದ್ದ. ಹೀಗೆ ಪ್ರೇಮ್ ತಂಡಕ್ಕೆ 7,500 ಖಾತೆಯನ್ನು ಆತ ಪೂರೈಸಿದ್ದ. ನಕಲಿ ಖಾತೆ ತೆರೆಯಲು ತಾಯಿ ಶಬಾನಾ ಕೂಡ ನೆರವಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಅಪಾರ್ಟ್‌ಮೆಂಟ್, ಪ್ರೇಯಸಿಗೆ ಚಿನ್ನ ಗಿಫ್ಟ್
ಸೈಬರ್ ವಂಚನೆ ಕೃತ್ಯದಿಂದ ಸಂಪಾದಿಸಿದ ಹಣದಲ್ಲಿ ಹುಜೈಪ ಮೋಜಿನ ಜೀವನ ಸಾಗಿಸುತ್ತಿದ್ದ. ತಿಂಗಳಿಗೆ ಮೂರು ಬಾರಿ ದುಬೈ ಪ್ರವಾಸ. ಅಂಜನಾಪುರ ಬಳಿ ಫ್ಲ್ಯಾಟ್ ಖರೀದಿ ಹಾಗೂ ಪ್ರಿಯತಮೆಗೆ ಚಿನ್ನ ಉಡುಗೊರೆ... ಹೀಗೆ ಬಿಂದಾಸ್ ಜೀವನ ನಡೆಸಿದ್ದ. ಪ್ರತಿ ತಿಂಗಳು ಆತನಿಗೆ 30 ರಿಂದ 35 ಲಕ್ಷ ರು. ವರಮಾನವಿತ್ತು ಎಂದು ಮೂಲಗಳು ಹೇಳಿವೆ.
ಸಂವಹನಕ್ಕೆ ಸ್ಯಾಟಲೈಟ್ ಪೋನ್
ತಮ್ಮ ಜಾಡು ಸಿಗದಂತೆ ಜಾಗ್ರತೆ ವಹಿಸಿದ್ದ ಪ್ರೇಮ್ ಹಾಗೂ ಆತನ ಸಹಚರರು ಪರಸ್ಪರ ಸಂವಹನಕ್ಕೆ ಸ್ಯಾಟಲೈಟ್ ಪೋನ್ ಬಳಸುತ್ತಿದ್ದರು. ಸ್ಯಾಟಲೈಟ್ ಫೋನ್ ಮೂಲಕ ಕರೆ ಮಾಡಿದರೆ ಕರೆ ಸ್ವೀಕರಿಸಿದವನ ಗುರುತು ಸಿಗುತ್ತಿರಲಿಲ್ಲ. ಅಲ್ಲದೆ, ಎಲ್ಲಿಂದ ಸಂಪರ್ಕ ಪಡೆದಿದೆ ಎಂಬುದೂ ಗೊತ್ತಾಗುತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸೈಬರ್ ವಂಚನೆ ಜಾಲ ಭೇದಿಸಿದ ತನಿಖಾ ತಂಡಕ್ಕೆ 50 ಸಾವಿರ ರು. ಬಹುಮಾನ ನೀಡಲಾಗುತ್ತದೆ. ಬ್ಯಾಂಕ್ ಖಾತೆಗಳಲ್ಲಿ 240 ಕೋಟಿ ರು. ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ನ್ಯಾಯಾಲಯದ ಅನುಮತಿ ಪಡೆದು ಇದರಲ್ಲಿ 90 ಲಕ್ಷ ರು.ಅನ್ನು ಜನರಿಗೆ ಹಿಂತಿರುಗಿಸಲಾಗುತ್ತದೆ. ಮುಂದಿನ ಹಂತದಲ್ಲಿ ಉಳಿಕೆ ಹಣ ಸಂತ್ರಸ್ತರಿಗೆ ಮರಳಿಸಲಾಗುತ್ತದೆ.
-ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತ, ಬೆಂಗಳೂರು ನಗರ
ವಂಚನೆ ಹೇಗೆ?
- ‘ಸ್ವಾಮೀಜಿ ಡಾಟ್ ಕಾಂ’, ‘ನಿಯೋ ಸಿಸ್ಟಮ್’ ಹೆಸರಲ್ಲಿ ವೆಬ್‌ಸೈಟ್, ಆ್ಯಪ್ ಹೊಂದಿದ್ದ ವಂಚಕರು
- ಒಂದು ಆನ್‌ಲೈನ್ ಗೇಮಿಂಗ್ ಸಂಬಂಧಿಸಿದ್ದಾದರೆ, ಮತ್ತೊಂದು ಷೇರು ವಹಿವಾಟಿನ ಕುರಿತಾದದ್ದು
- ಅಧಿಕ ಲಾಭದ ಆಸೆ ನಂಬಿ ಹಣ ಹೂಡುತ್ತಿದ್ದ ಜನರು. ಆರಂಭದಲ್ಲಿ 1000 ರು.ಗೆ 5000 ರು. ಲಾಭ
- ಉತ್ತೇಜಿತರಾಗಿ ಲಕ್ಷ ಲಕ್ಷ ಹಣ ಕಟ್ಟಿದವರಿಗೆ ಪಂಗನಾಮ. ಸಹಸ್ರಾರು ಕೋಟಿ ರು. ವಂಚನೆ
ಕೂಲಿ ಕಾರ್ಮಿಕರ ಖಾತೆಗೆ ಹಣ ವರ್ಗ
- ಸೈಬರ್ ವಂಚಕರು ಹಣ ಸ್ವೀಕರಿಸಲು ನಕಲಿ ಖಾತೆಗಳನ್ನು ಬಳಸುತ್ತಿದ್ದರು
- ಕೂಲಿ ಕಾರ್ಮಿಕರು, ಬಡವರಿಗೆ ಹಣ ಕೊಟ್ಟು ಬ್ಯಾಂಕ್ ಖಾತೆ ತೆರೆಸುತ್ತಿದ್ದರು
- ಬೆಂಗಳೂರಿನ ವ್ಯಕ್ತಿ ಇದೇ ರೀತಿ 7500 ಖಾತೆಗಳನ್ನು ವಂಚಕರಿಗೆ ಒದಗಿಸಿದ್ದ
- ವಂಚಕರ ಜಾಲದ ಜತೆ ಸೇರಿ ತಿಂಗಳಿಗೆ 35 ಲಕ್ಷ ರು. ಗಳಿಸುತ್ತಿದ್ದವ ಈಗ ಬಲೆಗೆ
ಪತ್ತೆಯಾಗಿದ್ದು ಹೇಗೆ?
- ಬೆಂಗಳೂರಿನ ನಿವಾಸಿಯೊಬ್ಬರು ವಂಚಕರ ಆ್ಯಪ್‌ನಲ್ಲಿ ಹೂಡಿ 3 ಕೋಟಿ ಕಳೆದುಕೊಂಡಿದ್ದರು
- ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಹಣ ವರ್ಗವಾದ ಖಾತೆಯನ್ನು ಸೀಜ್ ಮಾಡಲಾಗಿತ್ತು
- ಖಾತೆದಾರ ತನ್ನ ಅಕೌಂಟ್ ಅನ್ನು ಏಕೆ ಸೀಜ್ ಮಾಡಿದ್ದೀರಿ ಎಂದು ಪ್ರಶ್ನಿಸಿದಾಗ ಹಗರಣ ಪತ್ತೆ