ಪ್ರೀತಿ, ಮೋಸ ಮತ್ತು ಫ್ರಿಜ್‌ನಲ್ಲಿ ಶವ : ಬೆಂಗಳೂರಿನಲ್ಲಿ ನಡೆದ ಭೀಕರ ಪ್ರೇಮ ಕಹಾನಿ!

KannadaprabhaNewsNetwork |  
Published : Sep 27, 2024, 01:28 AM ISTUpdated : Sep 27, 2024, 04:29 AM IST
ಮಹಾಲಕ್ಷ್ಮೀ, ಮುಕ್ತಿರಂಜನ್‌ | Kannada Prabha

ಸಾರಾಂಶ

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಕೊಂದು ಮೃತದೇಹವನ್ನು ಫ್ರಿಜ್‌ನಲ್ಲಿಟ್ಟು ಪರಾರಿಯಾಗಿ ನಂತರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಮದುವೆ ವಿಚಾರದಲ್ಲಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡಿದೆ.

 ಬೆಂಗಳೂರು : ವೈಯಕ್ತಿಕ ಕಾರಣಕ್ಕೆ ಕೋಪದಲ್ಲಿ ತನ್ನ ಗೆಳತಿಯನ್ನು ಕೊಂದ ಬಳಿಕ ಭೀತಿಗೊಂಡ ಮುಕ್ತಿ ರಂಜನ್ ಪ್ರತಾಪ್ ರಾಯ್‌, ಮರು ದಿನ ಮಲ್ಲೇಶ್ವರದಿಂದ ಮಾಂಸ ಕತ್ತರಿಸುವ ಎರಡು ಚಾಕುಗಳನ್ನು ಖರೀದಿಸಿ ತಂದು ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಜ್‌ಗೆ ತುಂಬಿ ತನ್ನೂರಿಗೆ ಬೈಕ್‌ ಹತ್ತಿ ಪರಾರಿಯಾಗಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಮನೆಯಲ್ಲಿ ಮದುವೆ ವಿಚಾರವಾಗಿ ಮಹಾಲಕ್ಷ್ಮೀ ಮತ್ತು ಆಕೆಯ ಪ್ರಿಯಕರ ಮುಕ್ತಿ ರಂಜನ್‌ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಸಿಟ್ಟಿಗೆದ್ದು ಗೆಳತಿಗೆ ಕಪಾಳಕ್ಕೆ ಮುಕ್ತಿ ರಂಜನ್‌ ಹೊಡೆದಿದ್ದಾನೆ. ಒಂದೇಟಿಗೆ ಆಕೆ ಕುಸಿದು ಬಿದ್ದಿ ಪ್ರಜ್ಞಾಹೀನಳಾಗಿದ್ದಾಳೆ. ಆಗ ಆತಂಕಗೊಂಡ ಆತ, ಗೆಳತಿಯನ್ನು ಕೊಂದು ಹೊರ ಬಂದಿದ್ದಾನೆ.

ಮರು ದಿನ ಬೆಳಗ್ಗೆ 11 ಗಂಟೆಗೆ ಮಲ್ಲೇಶ್ವರದಲ್ಲಿ ಮಾಂಸ ಕತ್ತರಿಸುವ ಚಾಕುಗಳನ್ನು ಖರೀದಿಸಿ ಮತ್ತೆ ಗೆಳತಿಗೆ ಮನೆಗೆ ಬಂದ ಆತ, ಅಲ್ಲಿ ಮೃತದೇಹವನ್ನು ನಾಲ್ಕೈದು ತಾಸು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ಗೆ ತುಂಬಿದ್ದಾನೆ. ಬಳಿಕ ಹೆಬ್ಬಗೋಡಿಯಲ್ಲಿದ್ದ ತನ್ನ ಸೋದರನ್ನು ಭೇಟಿಯಾಗಿ ಘಟನೆ ಬಗ್ಗೆ ಹೇಳಿದ ಮುಕ್ತಿ ರಂಜನ್‌, ಅಲ್ಲಿಂದ ಬೈಕ್ ಹತ್ತಿ ಒಡಿಶಾಗೆ ಹೊರಟ್ಟಿದ್ದಾನೆ. ಆದರೆ ಬಂಧನ ಭೀತಿಯಿಂದ ಕೊನೆಗೆ ಆತ ನೇಣಿಗೆ ಕೊರಳಿಡ್ಡಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರು ತಿಂಗಳಿಂದ ಲವ್‌:

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ಪತಿಯಿಂದ ಪ್ರತ್ಯೇಕಗೊಂಡಿದ್ದ ಮಹಾಲಕ್ಷ್ಮೀ, ನಂತರ ನೆಲಮಂಗಲದಿಂದ ಬಂದು ವೈಯಾಲಿಕಾವಲ್‌ನಲ್ಲಿ ನೆಲೆಸಿದ್ದಳು. ತನ್ನ ಮನೆ ಸಮೀಪದಲ್ಲಿ ಪ್ರತಿಷ್ಠಿತ ಮಾಲ್‌ನಲ್ಲಿ ಸೇಲ್ಸ್ ಗರ್ಲ್ ಆಗಿ ಸೇರಿದ್ದಳು. ಅದೇ ಮಾಲ್‌ನಲ್ಲಿ ಒಡಿಶಾ ಮುಕ್ತಿ ರಂಜನ್‌ ಸ್ಟೋರ್ ಮ್ಯಾನೇಜರ್ ಆಗಿದ್ದ. ಆಗ ಇಬ್ಬರ ನಡುವೆ ಸ್ನೇಹ ಬೆಳೆದು ಕಾಲ ಕ್ರಮೇಣ ಪ್ರೇಮ ಚಿಗುರಿದೆ. ಆದರೆ ಇತ್ತೀಚಿಗೆ ಮದುವೆ ವಿಚಾರವಾಗಿ ಈ ಜೋಡಿ ನಡುವೆ ಮನಸ್ತಾಪವಾಗಿತ್ತು ಎಂದು ತಿಳಿದು ಬಂದಿದೆ.

ಮದುವೆಯಾಗುವಂತೆ ಮಹಾಲಕ್ಷ್ಮೀ ಒತ್ತಾಯಕ್ಕೆ ಮುಕ್ತಿ ರಂಜನ್‌ ಸಮ್ಮತಿಸಿರಲಿಲ್ಲ. ಅಂತೆಯೇ ಸೆ.3 ರಂದು ಶನಿವಾರ ಸಂಜೆ ಕೆಲಸ ಮುಗಿಸಿಕೊಂಡು ಮಹಾಲಕ್ಷ್ಮೀ ಮನೆಗೆ ಆತ ತೆರಳಿದ್ದ. ಆ ವೇಳೆ ಮತ್ತೆ ಮದುವೆ ವಿಷಯ ಪ್ರಸ್ತಾಪವಾಗಿ ಮಾತುಕತೆ ನಡೆದಿದೆ. ಈ ಹಂತದಲ್ಲಿ ಸಿಟ್ಟಿಗೆದ್ದ ಮುಕ್ತಿ ರಂಜನ್‌, ಗೆಳತಿಗೆ ಕಪಾಳಕ್ಕೆ ಹೊಡೆದಿದ್ದಾನೆ ಎಂದು ಮೂಲಗಳು ಹೇಳಿವೆ.

ಆಗ ಕೆಳಗೆ ಬಿದ್ದು ಪ್ರಜ್ಞಾಹೀನಳಾದ ಗೆಳತಿಯನ್ನು ಕಂಡು ದಿಗಿಲುಕೊಂಡ ಮುಕ್ತಿ ರಂಜನ್‌, ಆಕೆಯನ್ನು ಹತ್ಯೆಗೈದು ತನ್ನ ಮನೆಗೆ ತೆರಳಿದ್ದಾನೆ. ಮರು ದಿನ ಬೆಳಗ್ಗೆ 11 ಗಂಟೆಗೆ ಮಲ್ಲೇಶ್ವರದ ಸ್ಟೀಲ್ ಅಂಗಡಿ ತೆರಳಿ ಎರಡು ಚಾಕುಗಳನ್ನು ಖರೀದಿಸಿ ಮತ್ತೆ ಗೆಳತಿಗೆ ಮನೆಗೆ ಬಂದಿದ್ದಾನೆ. ನಂತರ ಸಂಜೆವರೆಗೆ ಮೃತದೇಹವನ್ನು ತುಂಡು ತುಂಡಾಗಿ ಮನಬಂದಂತೆ ಕತ್ತರಿಸಿದ ಆರೋಪಿ, ಅವುಗಳನ್ನು ಮನೆಯಲ್ಲಿದ್ದ ಫ್ರಿಜ್‌ನಲ್ಲಿಟ್ಟು ಸಂಪೂರ್ಣವಾಗಿ ಮನೆಯಲ್ಲಿ ರಕ್ತದ ಕಲೆಗಳಿರದಂತೆ ಸ್ವಚ್ಛಗೊಳಿಸಿ ಹೊರ ಬಿದ್ದಿದ್ದಾನೆ. ಅಲ್ಲಿಂದ ಹೆಬ್ಬಗೋಡಿಯಲ್ಲಿದ್ದ ತನ್ನ ಸೋದರನನ್ನು ಮುಕ್ತಿ ರಂಜನ್‌ ಭೇಟಿಯಾಗಿ ಮಾತನಾಡಿದ್ದಾನೆ.

ಬಾಯ್ಬಿಡದಂತೆ ತಮ್ಮನಿಗೆ ಬೆದರಿಕೆ:

ತನ್ನ ಸೋದರನ ಬಳಿ ಮಹಾಲಕ್ಷ್ಮೀ ಹತ್ಯೆ ವಿಚಾರ ತಿಳಿಸಿದ ಮುಕ್ತಿ ರಂಜನ್‌, ಈ ವಿಷಯ ಯಾರಿಗೂ ಹೇಳದಂತೆ ಬೆದರಿಸಿ ಒಡಿಶಾಗೆ ತನ್ನ ಬಜಾಜ್‌ ಪ್ಲಾಟಿನಂ ಬೈಕ್ ಹತ್ತಿ ತೆರಳಿದ. ಕೋಪಿಷ್ಠ ತನ್ನ ಅಣ್ಣನಿಗೆ ಬೆದರಿ ಆರೋಪಿ ಸೋದರ ಹತ್ಯೆ ಬಗ್ಗೆ ಯಾರಿಗೂ ಹೇಳಿರಲಿಲ್ಲ.

ಸೆ.21ರಂದು ಕೊಲೆ ಬೆಳಕಿಗೆ:

ಸೆ.21ರಂದು ಮಧ್ಯಾಹ್ನ ಮಹಾಲಕ್ಷ್ಮೀ ಮನೆಯಿಂದ ದುರ್ವಾಸನೆ ಬಂದಿದೆ. ಇದನ್ನು ಗಮನಿಸಿದ ನೆರೆಹೊರೆಯವರು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ ನೆಲಮಂಗಲದಲ್ಲಿರುವ ಮಹಾಲಕ್ಷ್ಮೀ ತಾಯಿ ಮತ್ತು ಸಹೋದರಿ ಮನೆಗೆ ಬಂದು ನೋಡಿದಾಗ ಫ್ರಿಜ್‌ನಲ್ಲಿ ಮಹಾಲಕ್ಷ್ಮೀ ಮೃತದೇಹದ ತುಂಡುಗಳು ಕಂಡು ಆಘಾತಗೊಂಡಿದ್ದಾರೆ. ಈ ಭೀಕರ ಹತ್ಯೆ ಕೃತ್ಯದ ಆರೋಪಿ ಪತ್ತೆಗೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ನೇೃತ್ವದಲ್ಲಿ ವಿಶೇಷ ತಂಡಗಳ ರಚನೆಯಾದವು.

15 ನಿಮಿಷದಲ್ಲಿ ತಪ್ಪಿಸಿಕೊಂಡ ಹಂತಕ:

ಮೃತಳ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸಿದಾಗ ಹತ್ಯೆಯಲ್ಲಿ ಆಕೆಯ ಗೆಳೆಯ ಮುಕ್ತಿ ರಂಜನ್‌ ನಡೆಸಿರುವ ಬಗ್ಗೆ ಪೊಲೀಸರಿಗೆ ಶಂಕೆ ಮೂಡಿತು. ಬಳಿಕ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯ ಸೋದರನ್ನು ವಶಕ್ಕೆ ಪಡೆದು ಪೊಲೀಸರು, ಬಳಿಕ ಆತನನ್ನು ವಿಚಾರಣೆಗೊಳಪಡಿಸಿದಾಗ ಮುಕ್ತಿ ರಂಜನ್‌ ಹತ್ಯೆ ನಡೆಸಿರುವುದು ಖಚಿತವಾಯಿತು. ಅಷ್ಟರಲ್ಲಿ ನಗರ ತೊರೆದಿದ್ದ ಆರೋಪಿಯನ್ನು ಬೇಟೆ ಪೊಲೀಸರಿಗೆ ಸವಾಲಾಯಿತು.

ಆತನ ಮೊಬೈಲ್ ಲೋಕೇಷನ್‌ ಪರಿಶೀಲಿಸಿದಾಗ ಆಂಧ್ರಪ್ರದೇಶದಲ್ಲಿ ಆರೋಪಿ ಇರುವುದು ಗೊತ್ತಾಗಿದೆ. ಆಗ ಮುಕ್ತಿರಂಜನ್‌ನ ಮೊಬೈಲ್ ಹಾಗೂ ಬೈಕ್‌ ನೋಂದಣಿ ಸಂಖ್ಯೆ ಆಧರಿಸಿ ಬೆನ್ನುಹತ್ತಿ ಆಂಧ್ರಪ್ರದೇಶಕ್ಕೆ ಪೊಲೀಸರ ತಂಡ ತೆರಳಿದೆ. ಆದರೆ ಹದಿನೈದು ನಿಮಿಷ ಅಂತರದಲ್ಲಿ ಆತ ತಪ್ಪಿಸಿಕೊಂಡಿದ್ದಾನೆ. ಅಲ್ಲಿಂದ ಪಶ್ಚಿಮ ಬಂಗಾಳ ಮೂಲಕ ಒಡಿಶಾಕ್ಕೆ ಆರೋಪಿ ಪರಾರಿಯಾಗಿದ್ದಾನೆ. ಆದರೆ ಪೊಲೀಸರು ಬಂಧಿಸುವ ವೇಳೆ ತನ್ನನ್ನು ಪೊಲೀಸರು ಬೆನ್ನಹತ್ತಿರುವ ಸಂಗತಿ ತಿಳಿದು ಭಯಗೊಂಡು ಆತ್ಮಹತ್ಯೆಗೆ ಆರೋಪಿ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಕುಟುಂಬದ ಸದಸ್ಯರ ಭೇಟಿ ಬಳಿಕ ಮುಕ್ತಿರಂಜನ್‌ ನೇಣು:

ಮಂಗಳವಾರ ರಾತ್ರಿ ಭೂನಿಪುರದ ಮನೆಗೆ ತೆರಳಿರುವ ಮುಕ್ತಿ ರಂಜನ್‌, ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದಾನೆ. ಬುಧವಾರ ಮುಂಜಾನೆ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಟು ಊರಿನ ಹೊರವಲಯದ ಸ್ಮಶಾನದ ಬಳಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳೀಯರು ಇದನ್ನು ಗಮನಿಸಿ ಸ್ಥಳೀಯ ದುಸೂರಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮುಕ್ತಿ ರಂಜನ್‌ ಆತ್ಮಹತ್ಯೆ ವಿಚಾರ ತಿಳಿದು ಬೆಂಗಳೂರು ಪೊಲೀಸರ ತಂಡವು ಸಹ ಘಟನಾ ಸ್ಥಳಕ್ಕೆ ತೆರಳಿ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದಿದೆ.

ಡೈರಿಯಲ್ಲಿ ಕೊಲೆ ವಿಚಾರ ಉಲ್ಲೇಖ:

ಆರೋಪಿ ಮುಕ್ತಿ ರಂಜನ್‌ ಆತ್ಮಹತ್ಯೆ ಸ್ಥಳದಲ್ಲಿ ಡೈರಿಯೊಂದು ಪತ್ತೆಯಾಗಿದೆ. ಡೈರಿಯಲ್ಲಿ ಮಹಾಲಕ್ಷ್ಮೀ ಕೊಲೆ ವಿಚಾರ ಉಲ್ಲೇಖವಾಗಿದೆ. ವೈಯಕ್ತಿಕ ವಿಚಾರಕ್ಕೆ ಸೆ.3ರಂದು ಇಬ್ಬರ ನಡುವೆ ಗಲಾಟೆಯಾಯಿತು. ಈ ವೇಳೆ ಆಕೆ ನನ್ನ ಮೇಲೆ ಹಲ್ಲೆ ಮಾಡಿದಳು. ಇದರಿಂದ ಕೋಪಗೊಂಡು ನಾನು ಸಹ ಆಕೆಯ ಕಪಾಳಕ್ಕೆ ಹೊಡೆದೆ. ಈ ವೇಳೆ ಕುಸಿದು ಬಿದ್ದು ಆಕೆ ಮೃತಟ್ಟಳು. ಬಳಿಕ ಆಕೆಯ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಜ್‌ ತುಂಬಿ ಒಡಿಶಾದತ್ತ ಹೊರಟ್ಟಿದ್ದೆ ಎಂದು ಮುಕ್ತಿ ರಂಜನ್‌ ಡೈರಿಯಲ್ಲಿ ಬರೆದಿರುವ ಡೆತ್‌ ನೋಟ್‌ನಲ್ಲಿ ಉಲ್ಲೇಖಿಸಿದ್ದಾನೆ ಎಂದು ತಿಳಿದು ಬಂದಿದೆ.

ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ:

ಮುಕ್ತಿ ರಂಜನ್‌ ಮತ್ತು ಮಹಾಲಕ್ಷ್ಮೀ ಕೆಲಸದ ಸ್ಥಳದಲ್ಲಿ ಕ್ಷುಲ್ಲಕ ವಿಚಾರಗಳಿಗೆ ಜಗಳವಾಡುತ್ತಿದ್ದರು. ಮುಕ್ತಿ ರಂಜನ್‌ ಕೆಲಸದ ಸ್ಥಳದಲ್ಲಿ ಬೇರೆ ಹುಡುಗಿಯರ ಜತೆ ಮಾತನಾಡಿದರೆ ಮಹಾಲಕ್ಷ್ಮೀ ಸಹಿಸದೆ ಜಗಳವಾಡುತ್ತಿದ್ದಳು. ಮಹಾಲಕ್ಷ್ಮೀ ಸಹ ಬೇರೆ ಯುವಕರ ಜತೆಗೆ ಮಾತನಾಡಿದರೆ, ಮುಕ್ತಿ ರಂಜನ್‌ ಜಗಳವಾಡುತ್ತಿದ್ದ ಎಂದು ತಿಳಿದು ಬಂದಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
15 ವರ್ಷಗಳಿ ಸುವರ್ಣನ್ಯೂಸ್, ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದ ಮಹಿ‍ಳೆ ಅಪಘಾತದಲ್ಲಿ ದಾರುಣ ಸಾವು