ಚಿನ್ನ ಮಾರಾಟ ಮಾಡಿ ಬರುವುದಾಗಿ ಮಾಲೀಕನಿಗೆ ನಂಬಿಸಿ ₹7.50 ಕೋಟಿಯ ಚಿನ್ನ ಕದ್ದ ಸೇಲ್ಸ್‌ಮನ್‌ ಬಂಧನ

KannadaprabhaNewsNetwork |  
Published : Feb 08, 2025, 01:47 AM ISTUpdated : Feb 08, 2025, 05:37 AM IST
Dhanteras 2024 Right Way To Store Gold Jewellery

ಸಾರಾಂಶ

ಚಿನ್ನ ಮಾರಾಟ ಮಾಡಿ ಬರುವುದಾಗಿ ಮಾಲೀಕನಿಗೆ ನಂಬಿಸಿ ₹7 ಕೋಟಿ ಮೌಲ್ಯದ ಚಿನ್ನ ಕದ್ದಿದ್ದ ನೌಕರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಚಿನ್ನಾಭರಣ ಮಾರಾಟ ಮಾಡಿಕೊಂಡು ಬರುವುದಾಗಿ ಜುವೆಲ್ಲರಿ ಅಂಗಡಿ ಮಾಲೀಕ ಹಾಗೂ ಅವರ ಸ್ನೇಹಿತನಿಂದ ಬರೋಬ್ಬರಿ ₹7.50 ಕೋಟಿ ಮೌಲ್ಯದ 9.4 ಕೆ.ಜಿ. ಚಿನ್ನಾಭರಣ ಪಡೆದು ವಂಚಿಸಿ ಪರಾರಿಯಾಗಿದ್ದ ಸೇಲ್ಸ್‌ಮನ್‌ನನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಚೆನ್ನೈ ಮೂಲದ ನರೇಶ್ ಶರ್ಮಾ(40) ಬಂಧಿತ. ಆರೋಪಿಯಿಂದ ₹50 ಲಕ್ಷ ಮೌಲ್ಯದ 500 ಗ್ರಾಂ ಚಿನ್ನಾಭರಣ-ಚಿನ್ನದಗಟ್ಟಿ ಹಾಗೂ ₹5 ಲಕ್ಷ ನಗದು ಜಪ್ತಿ ಮಾಡಲಾಗಿದೆ. ನಗರ್ತಪೇಟೆಯ ವಿಕ್ರಮ್‌ ಜುವೆಲ್ಲರಿ ಅಂಗಡಿ ಮಾಲೀಕ ವಿಕ್ರಮ್‌ ಕಾರಿಯಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಉತ್ತರಪ್ರದೇಶ ಲಕ್ನೋದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ದೂರುದಾರ ವಿಕ್ರಮ್‌ ಕಾರಿಯಾ ನಗರ್ತಪೇಟೆಯ ಧರ್ಮರಾಯ ದೇವಸ್ಥಾನ ರಸ್ತೆಯಲ್ಲಿ ವಿಕ್ರಮ್‌ ಜುವೆಲ್ಸ್‌ ಹೆಸರಿನ ಚಿನ್ನಾಭರಣ ಅಂಗಡಿ ಇರಿಸಿಕೊಂಡಿದ್ದಾರೆ. ಈ ಜುವೆಲರಿ ಅಂಗಡಿಯಲ್ಲಿ ಆರು ಮಂದಿ ನೌಕರರು ಇದ್ದಾರೆ. ಈ ಪೈಕಿ ಆರೋಪಿ ನರೇಶ್‌ ಶರ್ಮಾ ಕಳೆದ ನಾಲ್ಕು ವರ್ಷಗಳಿಂದ ಅಂಗಡಿಯಲ್ಲಿ ಸೇಲ್ಸ್‌ಮನ್‌ ಕೆಲಸ ಮಾಡಿಕೊಂಡಿದ್ದ. ಈತ ಮಾಲೀಕರ ಸೂಚನೆ ಮೇರೆಗೆ ಗ್ರಾಹಕರು ಹಾಗೂ ಬೇರೆ ಚಿನ್ನಾಭರಣ ಅಂಗಡಿಗಳಿಗೆ ಚಿನ್ನಾಭರಣ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ. ಈ ಮೂಲಕ ಮಾಲೀಕರ ನಂಬಿಕೆ ಗಿಟ್ಟಿಸಿದ್ದ.

ಕೊಯಮತ್ತೂರಿಗೆ ಹೋದವ ವಾಪಸ್‌ ಬರಲಿಲ್ಲ:

ಮಾಲೀಕ ವಿಕ್ರಮ್‌ ಕಳೆದ ತಿಂಗಳು 7 ಕೆ.ಜಿ. 732 ಗ್ರಾಂ ಚಿನ್ನಾಭರಣವನ್ನು ಮಾರಾಟ ಮಾಡಲು ಸೇಲ್ಸ್‌ಮನ್‌ ನರೇಶ್‌ ಶರ್ಮಾಗೆ ನೀಡಿದ್ದರು. ಅದರಂತೆ ಆರೋಪಿ ನರೇಶ್‌ ಶರ್ಮಾ ಆ ಚಿನ್ನಾಭರಣ ತೆಗೆದುಕೊಂಡು ತಮಿಳುನಾಡಿನ ಕೊಯಮತ್ತೂರಿಗೆ ತೆರಳಿದ್ದ. ಬಳಿಕ ಕೊಯಮತ್ತೂರಿನಿಂದ ವಾಪಾಸ್‌ ಬಂದಿದ್ದ ಆರೋಪಿ, ಕೆಲವೊಂದು ಆಭರಣಗಳ ಮಾರಾಟ ಬಾಕಿ ಇದೆ ಎಂದು ಜ.8ರಂದು ಮತ್ತೆ ಕೊಯಮತ್ತೂರಿಗೆ ತೆರಳಿದ್ದ. ಜ.10ರ ವರೆಗೂ ಮಾಲೀಕ ವಿಕ್ರಮ್‌ ಜತೆಗೆ ಫೋನ್‌ನಲ್ಲಿ ಸಂಪರ್ಕದಲ್ಲಿದ್ದ ಆರೋಪಿ ಬಳಿಕ ಫೋನ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡು ಸಂಪರ್ಕ ಕಡಿದುಕೊಂಡಿದ್ದ.

ಮಾಲೀಕನ ಸ್ನೇಹಿತನಿಗೂ ವಂಚನೆ:

ಈ ನಡುವೆ ಜ.3ರಂದು ಆರೋಪಿ ನರೇಶ್‌ ಶರ್ಮಾ, ಮಾಲೀಕ ವಿಕ್ರಮ್‌ನ ಸ್ನೇಹಿತ ರಬಿಶಂಕರ್‌ ಪಾಲ್‌ ಅವರ ಬಳಿಯೂ ಚಿನ್ನಾಭರಣ ಮಾರಾಟ ಮಾಡುವುದಾಗಿ 1 ಕೆ.ಜಿ.730 ಗ್ರಾಂ ಚಿನ್ನಾಭರಣ ಪಡೆದಿದ್ದ. ಅಂದರೆ, ಆರೋಪಿಯು ಇಬ್ಬರಿಂದ ಒಟ್ಟು 9 ಕೆ.ಜಿ. 462 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿ ಪರಾರಿಯಾಗಿದ್ದ. ಈ ಸಂಬಂಧ ಮಾಲೀಕ ವಿಕ್ರಮ್‌ ಹಲಸೂರು ಗೇಟ್‌ ಠಾಣೆಗೆ ದೂರು ನೀಡಿದ್ದರು.

ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿ ಮೇರೆಗೆ ಕೊಯಮತ್ತೂರಿನ ವಿವಿಧ ಜುವೆಲ್ಲರಿ ಅಂಗಡಿಗಳಿಗೆ ಮಾರಾಟ ಮಾಡಿದ್ದ 500 ಗ್ರಾಂ ಚಿನ್ನಾಭರಣ ಹಾಗೂ ಜುವೆಲ್ಲರಿ ಅಂಗಡಿಯಲ್ಲೇ ಬಿಟ್ಟಿದ್ದ ₹5 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗರ್ಲ್‌ ಫ್ರೆಂಡ್‌ ಜೊತೆಗೆವಿಮಾನದಲ್ಲಿ ಸುತ್ತಾಟ

ಆರೋಪಿ ನರೇಶ್‌ ಶರ್ಮಾಗೆ ಉತ್ತರಪ್ರದೇಶದ ಲಕ್ನೋದಲ್ಲಿ ಪ್ರೇಯಸಿಯೊಬ್ಬಳು ಇದ್ದಾಳೆ. ಆರೋಪಿಯು ಚಿನ್ನಾಭರಣ ಮಾರಾಟ ಮಾಡಿದ ಬಳಿಕ ಲಕ್ನೋಗೆ ತೆರಳಿ ಪ್ರೇಯಸಿ ಜತೆಗೆ ಮೋಜು-ಮಸ್ತಿ ಮಾಡಿದ್ದಾನೆ. ಪ್ರೇಯಸಿಯನ್ನು ವಿಮಾನದಲ್ಲಿ ಜಮ್ಮು-ಕಾಶ್ಮೀರ, ಹೈದರಾಬಾದ್‌ ಸೇರಿದಂತೆ ವಿವಿಧ ಪ್ರವಾಸಿ ಸ್ಥಳಗಳಿಗೆ ಕರೆದೊಯ್ದು ಮಜಾ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.ವಂಚಿಸಿದ್ದು 9.4 ಕೆ.ಜಿ. ಚಿನ್ನ: ಸಿಕ್ಕಿದ್ದು ಕೇವಲ 500 ಗ್ರಾಂ!

ಆರೋಪಿ ನರೇಶ್‌ ಶರ್ಮಾ ಜುವೆಲ್ಲರಿ ಅಂಗಡಿ ಮಾಲೀಕ ಮತ್ತು ಅವರ ಸ್ನೇಹಿತನಿಂದ ಒಟ್ಟು 9.4 ಕೆ.ಜಿ. ಚಿನ್ನಾಭರಣ ಪಡೆದು ಮಾರಾಟ ಮಾಡಲು ಕೊಯಮತ್ತೂರಿಗೆ ತೆಗೆದುಕೊಂಡು ಹೋಗಿದ್ದ. ಈ ವೇಳೆ ಸುಮಾರು 2 ಕೆ.ಜಿ. ಚಿನ್ನಾಭರಣ ಕಳ್ಳತನವಾಗಿರುವುದಾಗಿ ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ. ಉಳಿದ ಚಿನ್ನಾಭರಣದ ಪೈಕಿ ಸ್ವಲ್ಪ ಮಾರಾಟ ಮಾಡಿದ್ದಾನೆ. ಮಿಕ್ಕ ಚಿನ್ನಾಭರಣ ಏನು ಮಾಡಿದ ಎಂಬುದರ ಬಗ್ಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!