ಎಟಿಎಂ ತುಂಬಿಸಬೇಕಿದ್ದ ಹಣ ಕದ್ದರು, ಹಣ ಹಂಚಿಕೆಕೊಳ್ಳುವಾಗ ಜಗಳವಾಡಿ ಸಿಕ್ಕಿಬಿದ್ದರು!

KannadaprabhaNewsNetwork |  
Published : Feb 08, 2025, 01:46 AM ISTUpdated : Feb 08, 2025, 05:38 AM IST
Mahalakshmi PS | Kannada Prabha

ಸಾರಾಂಶ

ಎಟಿಎಂಗೆ ತುಂಬಿಸಬೇಕಿದ್ದ ಹಣ ಕದ್ದು ಅದನ್ನು ಹಂಚಿಕೊಳ್ಳುವಾಗ ಜಗಳವಾಡಿ ಆರು ಮಂದಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

 ಬೆಂಗಳೂರು : ಎಟಿಎಂ ಯಂತ್ರಗಳಿಗೆ ಹಣ ತುಂಬುವಾಗ ಹಣ ಎಗರಿಸುತ್ತಿದ್ದ ಏಜೆನ್ಸಿಯ ಮೂವರು ನೌಕರರು ಸೇರಿ ಆರು ಮಂದಿ ಆರೋಪಿಗಳನ್ನು ಮಹಾಲಕ್ಷ್ಮೀ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಂದಿನಿ ಲೇಔಟ್ ನಿವಾಸಿಗಳಾದ ಸಮೀರ್ (26), ಮನೋಹರ(29), ಗಿರೀಶ್(26), ಜಗ್ಗೇಶ್(28), ಶಿವು(27) ಮತ್ತು ಜಶ್ವಂತ್‌(27) ಬಂಧಿತರು. ಆರೋಪಿಗಳಿಂದ ₹51.76 ಲಕ್ಷ ನಗದು ಹಾಗೂ ಮೂರು ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳು ಜ.25ರಂದು ಮಹಾಲಕ್ಷ್ಮೀ ಲೇಔಟ್‌ನ ಕೆಂಪೇಗೌಡ ಲೇಔಟ್‌ನ ಸರ್ವಿಸ್‌ ರಸ್ತೆಯ ಟೀ ಅಂಗಡಿಯಲ್ಲಿ ಕದ್ದ ಹಣ ಹಂಚಿಕೊಳ್ಳುವ ವಿಚಾರ ಸಂಬಂಧ ಗಲಾಟೆ ಮಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಸಿಕ್ಕ ಮಾಹಿತಿ ಮೇರೆಗೆ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು, ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಎಟಿಎಂ ಯಂತ್ರಗಳಲ್ಲಿ ಹಣ ಕಳವು ಮಾಡಿದ್ದ ವಿಚಾರ ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಬಂಧಿತ ಆರು ಮಂದಿ ಆರೋಪಿಗಳ ಪೈಕಿ ಜಗ್ಗೇಶ್‌, ಮನೋಹರ್‌ ಮತ್ತು ಗಿರೀಶ್‌ ಸೆಕ್ಯೂರ್‌ ವ್ಯಾಲ್ಯೂ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಲ್ಲಿ ಕ್ಯಾಶ್‌ ಲೋಡರ್‌ ಕೆಲಸ ಮಾಡುತ್ತಿದ್ದರು. ಆರೋಪಿಗಳಾದ ಸಮೀರ್‌ ಮತ್ತು ಜಶ್ವಂತ್‌ ಕಳೆದ ಒಂದು ವರ್ಷದ ಹಿಂದೆ ಈ ಕಂಪನಿಯ ಕೆಲಸ ಬಿಟ್ಟಿದ್ದು, ಬೇರೆ ಕೆಲಸ ಮಾಡಿಕೊಂಡಿದ್ದರು. ಆರೋಪಿ ಸಮೀರ್‌ನ ಸ್ನೇಹಿತನಾಗಿರುವ ಆರೋಪಿ ಶಿವು ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ.

ಆರೋಪಿಗಳು ಕಳೆದ ಎರಡು ವರ್ಷಗಳಿಂದ ಸೆಕ್ಯೂರ್‌ ವ್ಯಾಲ್ಯೂ ಕಂಪನಿಯಲ್ಲಿ ನಗರದ ವಿವಿಧ ಬ್ಯಾಂಕ್‌ಗಳ ಎಟಿಎಂ ಯಂತ್ರಗಳಿಗೆ ಹಣ ತುಂಬುವುದು ಹಾಗೂ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದರು. ಬಳಿಕ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಸಂಚು ರೂಪಿಸಿ ಎಟಿಎಂ ಯಂತ್ರಗಳಿಗೆ ಹಣ ತುಂಬುವಾಗ ಶೇ.70ರಷ್ಟು ಹಣವನ್ನು ಮಾತ್ರ ತುಂಬಿ ಉಳಿದ ಶೇ.30ರಷ್ಟು ಹಣ ತುಂಬದೆ ಕಳವು ಮಾಡುತ್ತಿದ್ದರು. ಎಟಿಎಂ ಯಂತ್ರಗಳ ರಿಪೇರಿ ಕೆಲಸಕ್ಕೆ ಹೋದಾಗಲೂ ಪಾಸ್‌ವರ್ಡ್‌ ಪಡೆದು ಆ ಎಟಿಎಂ ಯಂತ್ರದಲ್ಲಿನ ಹಣ ಪೈಕಿ ಸ್ವಲ್ಪ ಹಣ ಎಗರಿಸುತ್ತಿದ್ದರು.

ಆಡಿಟಿಂಗ್‌ನಲ್ಲಿ ಸಿಕ್ಕಿ ಬೀಳದಂತೆ ವಂಚನೆ

ಕಂಪನಿ ಎಟಿಎಂ ಕೇಂದ್ರಗಳಲ್ಲಿರುವ ಹಣ ಆಡಿಟಿಂಗ್‌ ಮಾಡುವ ವಿಚಾರ ತಿಳಿದುಕೊಳ್ಳುತ್ತಿದ್ದ ಆರೋಪಿಗಳು, ಕಂಪನಿ ಯಾವ ಎಟಿಎಂ ಕೇಂದ್ರಗಳಲ್ಲಿ ಆಡಿಟಿಂಗ್‌ ಮಾಡುವುದಿಲ್ಲವೋ ಆ ಎಟಿಎಂ ಕೇಂದ್ರಗಳಿಂದ ಹಣ ತೆಗೆದು ಆಡಿಟಿಂಗ್‌ ನಡೆಸುವ ಎಟಿಎಂ ಕೇಂದ್ರಗಳಿಗೆ ಹಣ ತುಂಬುತ್ತಿದ್ದರು. ಕಳೆದ ಆರು ತಿಂಗಳಿಂದ ಆರೋಪಿಗಳು ಆಡಿಟಿಂಗ್‌ ವೇಳೆಯೂ ಸಿಕ್ಕಿ ಬೀಳದಂತೆ ನೋಡಿಕೊಂಡಿದ್ದರು ಎಂಬುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಗೋವಾದಲ್ಲಿ ಮೋಜು-ಮಸ್ತಿ

ಆರೋಪಿಗಳು ಈವರೆಗೆ ಎಷ್ಟು ಹಣ ವಂಚಿಸಿದ್ದಾರೆ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಕಳೆದ ಆರು ತಿಂಗಳಿಂದ ಸುಮಾರು ₹1 ಕೋಟಿವರೆಗೂ ವಂಚಿಸಿರುವ ಸಾಧ್ಯತೆಯಿದೆ. ಎಟಿಎಂ ಯಂತ್ರಗಳಲ್ಲಿ ಕಳವು ಮಾಡುತ್ತಿದ್ದ ಹಣದಲ್ಲಿ ಆರೋಪಿಗಳು ಗೋವಾಗೆ ತೆರಳಿ ಮೋಜು-ಮಸ್ತಿ ಮಾಡಿದ್ದಾರೆ. ಕ್ಯಾಸಿನೋಗಳಲ್ಲಿ ಜೂಜಾಡಿದ್ದಾರೆ. ಯುವತಿಯರ ಜತೆಗೆ ಸೇರಿಕೊಂಡು ಮೋಜು-ಮಸ್ತಿ ಮಾಡಿ ಹಣ ವ್ಯಯಿಸಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.

ಮೂರು ಕಾರು ಖರೀದಿ!

ಮೂವರು ಆರೋಪಿಗಳು ಈ ಹಣ ಬಳಸಿ ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಮೂರು ಕಾರುಗಳನ್ನು ಖರೀದಿಸಿದ್ದರು. ಉಳಿದ ಆರೋಪಿಗಳು ಸಾಲ ತೀರಿಸಿದ್ದರು. ಸದ್ಯ ಆ ಮೂರು ಕಾರುಗಳನ್ನೂ ಜಪ್ತಿ ಮಾಡಲಾಗಿದೆ. ಆರೋಪಿ ಜಶ್ವಂತ್‌ ಮನೆಯಲ್ಲಿ ಇರಿಸಿದ್ದ ₹8 ಲಕ್ಷ ವಶಕ್ಕೆ ಪಡೆಯಲಾಗಿದೆ. ಟೀ ಅಂಗಡಿ ಬಳಿ ಗಲಾಟೆ ಮಾಡಿಕೊಳ್ಳುವಾಗ ಕಾರಿನೊಳಗೆ ಇರಿಸಿಕೊಂಡಿದ್ದ ₹43.76 ಲಕ್ಷ ಸೇರಿದಂತೆ ಒಟ್ಟು ₹51.76 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

6 ನೇ ಕ್ಲಾಸ್ ವಿದ್ಯಾರ್ಥಿ ಮೇಲೆ ಪೊಲೀಸ್ ಹಲ್ಲೆ? ಬಲವಂತದ ಸಾಕ್ಷಿ ವಿಡಿಯೋ ಚಿತ್ರಿಕರಣ
ಚುನಾವಣೆಗೆ ನಿಲ್ಲಲು ಅಡ್ಡಿ ಎಂದು ಮಗಳನ್ನೇ ಹತ್ಯೆಗೈದ ಪಾಪಿ ಅಪ್ಪ