ಅಕ್ರಮ ಮರಳು ದಂಧೆ<bha>;</bha> ಇಬ್ಬರ ಕಿಡ್ನಾಪ್‌, ಕೊಲೆ ಯತ್ನ!

KannadaprabhaNewsNetwork | Published : Oct 23, 2023 12:16 AM

ಸಾರಾಂಶ

ಅಕ್ರಮ ಮರಳು ದಂಧೆ; ಇಬ್ಬರ ಕಿಡ್ನಾಪ್‌, ಕೊಲೆ ಯತ್ನ!ಅಕ್ರಮದ ವೀಡಿಯೋ ಮಾಡಿದ್ದಕ್ಕೆ ಕಾರು ಡಿಕ್ಕಿಯಲ್ಲಿ ಹಾಕಿ ದಂಧೆಕೋರರಿಂದ ಥಳಿತ । ಜೀವಂತವಾಗಿ ಕೃಷ್ಣಾ ನದಿಗೆಸೆಯಲು ಸಂಚುಹಲ್ಲೆಗೊಳಗಾದ ಶರಣಗೌಡ ಸ್ಥಿತಿ ಗಂಭೀರ, ರಾಜು ಎಂಬಾತನ ಕಾಲು ಫ್ರ್ಯಾಕ್ಚರ್ । ಶಹಾಪುರ ತಾಲೂಕಿನ ವಿಭೂತಿಹಳ್ಳಿ ಬಳಿ ಘಟನೆ
ಅಕ್ರಮದ ವೀಡಿಯೋ ಮಾಡಿದ್ದಕ್ಕೆ ಕಾರು ಡಿಕ್ಕಿಯಲ್ಲಿ ಹಾಕಿ ದಂಧೆಕೋರರಿಂದ ಥಳಿತ । ಜೀವಂತವಾಗಿ ಕೃಷ್ಣಾ ನದಿಗೆಸೆಯಲು ಸಂಚು ಹಲ್ಲೆಗೊಳಗಾದ ಶರಣಗೌಡ ಸ್ಥಿತಿ ಗಂಭೀರ, ರಾಜು ಎಂಬಾತನ ಕಾಲು ಫ್ರ್ಯಾಕ್ಚರ್ । ಶಹಾಪುರ ತಾಲೂಕಿನ ವಿಭೂತಿಹಳ್ಳಿ ಬಳಿ ಘಟನೆ ಕನ್ನಡಪ್ರಭ ವಾರ್ತೆ ಯಾದಗಿರಿ ಯಾದಗಿರಿ ಜಿಲ್ಲೆಯಲ್ಲಿ ಮರಳು ಮಾಫಿಯಾ ಮತ್ತೆ ತಲೆ ಎತ್ತಿದಂತಿದೆ. ಅಕ್ರಮ ಮರಳು ದಂಧೆಯ ದೃಶ್ಯಗಳ ಚಿತ್ರೀಕರಿಸಿದ್ದಕ್ಕೆ ವ್ಯಕ್ತಿಗಳಿಬ್ಬರನ್ನು ಕಾರಿನ ಡಿಕ್ಕಿಯೊಳಗೆ ಎಳೆದ್ಹಾಕಿ, ಹಿಗ್ಗಾಮುಗ್ಗಾ ಥಳಿಸಿದ ದಂಧೆಕೋರರು, ಇಬ್ಬರನ್ನೂ ಕೃಷ್ಣಾ ನದಿಯಲ್ಲಿ ಜೀವಂತವಾಗಿ ಎಸೆದು ಹತ್ಯೆಗೈಯ್ಯುವ ಸಂಚು ನಡೆಸಿದ್ದರು ಎಂಬ ಆರೋಪಗಳು ಮೂಡಿಬಂದಿವೆ. ಶಹಾಪುರ ತಾಲೂಕಿನ ವಿಭೂತಿಹಳ್ಳಿ ಸಮೀಪದ ಢಾಬಾವೊಂದರಲ್ಲಿ ಅ. 17ರ ಮಧ್ಯರಾತ್ರಿ 1.30ರ ಸುಮಾರಿಗೆ ಇಂತಹ ಕಿಡ್ನಾಪ್‌ ಪ್ರಕರಣ ನಡೆದಿದ್ದು, ಹಲ್ಲೆಗೊಳಗಾದ ಶರಣಗೌಡ ಹಯ್ಯಾಳ್‌ ಹಾಗೂ ರಾಜಕುಮಾರ್‌ ಗುತ್ತೇದಾರ್‌ ಎಂಬಿಬ್ಬರನ್ನು ಕಲಬುರಗಿಯ ಯುನೈಟೆಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ರಾಡ್‌ನಿಂದ ಹೊಡೆದಿದ್ದರಿಂದ ರಕ್ತಸ್ರಾವಗೊಂಡು ಶರಣಗೌಡ ಕೋಮಾದಲ್ಲಿದ್ದರೆ, ರಾಜಕುಮಾರ್‌ ಕಾಲುಗಳೆರಡೂ ನಿಸ್ತೇಜಗೊಂಡಿವೆ. ಗಾಯಾಳು ರಾಜಕುಮಾರನ ತಂದೆ ಬಸಯ್ಯ ಗುತ್ತೇದಾರ ಅವರು ಶಹಾಪುರ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ, 7 ಜನರ ವಿರುದ್ಧ ಪ್ರಕರಣ (ಪ್ರಕರಣ ಸಂಖ್ಯೆ: 229/2023) ದಾಖಲಾಗಿದೆ. ಆರೋಪಿತರಲ್ಲೊಬ್ಬನಾದ ವಿಜಯ ರಾಠೋಡ್‌, ಚಾಮನಾಳ ಗ್ರಾಮ ಪಂಚಾಯಿತಿ ಹಾಲಿ ಸದಸ್ಯ ಎನ್ನಲಾಗಿದೆ. ಮಧ್ಯರಾತ್ರಿಯಿಂದ ಬೆಳಗಿನವರೆಗೂ ಕಾರಿನ ಡಿಕ್ಕಿಯಲ್ಲಿ ಕೂಡಿಟ್ಟು ಇಬ್ಬರನ್ನೂ ಮನಸೋಇಚ್ಛೆ ಥಳಿಸಲಾಗಿದೆ. ಇಬ್ಬರನ್ನೂ ಕೃಷ್ಣಾ ನದಿಗೆ ಜೀವಂತವಾಗಿ ಎಸೆದು ಕೊಲ್ಲುವ ಸಂಚು ನಡೆಸಿದ್ದರು. ಆದರೆ, ಅಷ್ಟರಲ್ಲಾಗಲೇ ಹಲ್ಲೆ ಘಟನೆಯ ವೀಡಿಯೋ ಎಲ್ಲೆಡೆ ಹಂಚಿಕೆಯಾಗಿದ್ದರಿಂದ ದಂಧೆಕೋರರು ಇದನ್ನು ಕೈಬಿಟ್ಟಿರಬಹುದು ಎಂದು ಶರಣಗೌಡನ ತಂದೆ ವೀರನಗೌಡ "ಕನ್ನಡಪ್ರಭ "ಕ್ಕೆ ತಿಳಿಸಿದರು. - - - ಬಾಕ್ಸ್:1 ಕೊಲೆಯತ್ನ ಅಪಘಾತವೆಂದು ಬಿಂಬಿಸಲಾಗಿತ್ತೇ? ಈ ಕೊಲೆಯತ್ನ ಪ್ರಕರಣವನ್ನು ಆರಂಭದಲ್ಲಿ ಅಪಘಾತವೆಂದೇ ಬಿಂಬಿಸಲಾಗಿತ್ತು. ಆರೋಪಿಗಳೇ ಇವರನ್ನು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ದೂರು ದಾಖಲಿಸಲು ಪೊಲೀಸ್‌ ಠಾಣೆಗೆ ಹೋದಾಗಲೂ ಆರೋಪಿಗಳ ಪೈಕಿ ಒಬ್ಬಾತ ಪ್ರಭಾವಿ ಅನ್ನುವ ಕಾರಣಕ್ಕೆ ಪೊಲೀಸರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಹೀಗಾಗಿ, ಕೊನೆಗೆ ದೂರು ದಾಖಲಿಸದಿದ್ದರೆ ವಿಷ ಕುಡಿಯುತ್ತೇವೆಂದು ಕುಟುಂಬಸ್ಥರು ಪೊಲೀಸರೆದುರು ಪ್ರತಿಭಟನೆ ನಡೆಸಿದಾಗ ಪೊಲೀಸರು ದೂರು ದಾಖಲಿಸಿದರು ಎಂದು ಗಾಯಾಳುವಿನ ಕುಟುಂಬ ಅಳಲು ವ್ಯಕ್ತಪಡಿಸಿದೆ. ಆದರೆ, ಇದನ್ನು ನಿರಾಕರಿಸುವ ಪೊಲೀಸರು, ದೂರು ಕೊಡಲು ಯಾರೂ ಬಂದಿರಲಿಲ್ಲ. ಮೂರು ದಿನಗಳ ನಂತರ ಬಂದಾಗ ದೂರು ದಾಖಲಿಸಲಾಗಿದೆ ಎನ್ನುತ್ತಾರೆ. - - - ಬಾಕ್ಸ್‌:2 ಟೊಣ್ಣೂರು ಬಳಿ ಅಕ್ರಮ ಮರಳು ಸಾಗಾಟ ಶಹಾಪುರದ ಟೊಣ್ಣೂರು ಬಳಿ ಅಕ್ರಮ ಮರಳು ಸಾಗಾಟದ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇಲ್ಲಿನ ಕೃಷ್ಣಾ ನದಿಯ ಬಳಿ ಅನುಮತಿಯಿಲ್ಲದಿದ್ದರೂ "ಡಕ್ಕಾ " (ಮರಳು ಗಣಿಗಾರಿಕೆ ಸ್ಥಳ) ದ ಮೂಲಕ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಟ ನಡೆಯುತ್ತದೆ. ನದಿ ಪಾತ್ರದಿಂದ ಮುಖ್ಯ ರಸ್ತೆಗೆ ಟಿಪ್ಪರ್‌ಗಳ ಮೂಲಕ ಮರಳು ಸಾಗಿಸಲು ಸುಮರು 40-45 ಲಕ್ಷ ರು.ಗಳ ಖರ್ಚು ಮಾಡಿ ಅಕ್ರಮ ರಸ್ತೆ ನಿರ್ಮಿಸಲಾಗಿದೆ. ಇದರಲ್ಲಿ ಪ್ರಭಾವಿಗಳ ಕೈವಾಡ ಶಂಕೆಯಿದ್ದು, ಇನ್ನು ಕೆಲವು ದಿನಗಳಲ್ಲಿ ಆಡಳಿತದ ಅನುಮತಿ ಪಡೆಯುವ ಪ್ರಯತ್ನವೂ ನಡೆದಿತ್ತು ಎನ್ನಲಾಗುತ್ತಿದೆ. - - - 22ವೈಡಿಆರ್‌1 : ಶಹಾಪುರ ತಾಲೂಕಿನ ವಿಭೂತಿಹಳ್ಳಿ ಬಳಿ ನಡೆದ ಹಲ್ಲೆ ಪ್ರಕರಣದ ದೂರು. 22ವೈಡಿಆರ್‌2 : ಶಹಾಪುರ ತಾಲೂಕಿನ ವಿಭೂತಿಹಳ್ಳಿ ಬಳಿ ನಡೆದ ಹಲ್ಲೆ ಪ್ರಕರಣದಲ್ಲಿ, ಕಾರಿನ ಡಿಕ್ಕಿಯಲ್ಲಿ ಹಾಕಿ ಹೊಡಯುತ್ತಿರುವುದು. 22ವೈಡಿಆರ್‌3 : ಹಲ್ಲೆ ನಡೆಸದಂತೆ ಕೈಮುಗಿದು ಬೇಡಿಕೊಳ್ಳುತ್ತಿರುವ ರಾಜಕುಮಾರ ಎಂಬಾತ. - - - -

Share this article