ಗೆಳೆಯನ ಪತ್ನಿಯನ್ನೇ ಮದುವೆ ಆಗಿದ್ದಕ್ಕೆ ಎಸ್‌ಡಿಪಿಐ ಕಾರ್ಯಕರ್ತನ ಕೊಲೆ

KannadaprabhaNewsNetwork | Updated : Apr 26 2025, 04:32 AM IST

ಸಾರಾಂಶ

ಎಸ್‌ಡಿಪಿಐ ಕಾರ್ಯಕರ್ತ ಇರ್ಫಾನ್‌ ಹತ್ಯೆಯ ರಹಸ್ಯ ಬಯಲಾಗಿದೆ. ತನ್ನ ಸ್ನೇಹಿತನ ಪತ್ನಿಯನ್ನೇ ಪಟಾಯಿಸಿ ಮದುವೆ ಅಗಿದ್ದಕ್ಕೆ ಗೆಳೆಯರೇ ಸೇರಿ ಆತನನ್ನು ಕೊಲೆ ಮಾಡಿದ್ದಾರೆ.

 ಬೆಂಗಳೂರು : ನಾಲ್ಕು ದಿನಗಳ ಹಿಂದೆ ನಡೆದಿದ್ದ ಎಸ್‌ಡಿಪಿಐ ಕಾರ್ಯಕರ್ತ ಇರ್ಫಾನ್‌ ಖಾನ್ ಕೊಲೆ ಪ್ರಕರಣ ಸಂಬಂಧ ಮೃತನ ಮೂವರು ಸ್ನೇಹಿತರನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉಮರ್‌ ನಗರದ ಮಹಮ್ಮದ್‌ ಓವೈಸಿ, ಅಬ್ಡುಲ್‌ ಅಲೀಮ್‌ ಹಾಗೂ ಮಹಮ್ಮದ್‌ ಹನೀಫ್ ಬಂಧಿತರು. ಗೋವಿಂದಪುರದ ಬಳಿ ಏ.21ರಂದು ರಾತ್ರಿ ಇರ್ಫಾನ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಕೊಂದು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸ್ನೇಹಿತನ ಪತ್ನಿ ಜತೆ ಮದುವೆಗೆ ಪ್ರತೀಕಾರ:

ಸ್ಥಳೀಯವಾಗಿ ಎಸ್‌ಡಿಪಿಐ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದ ಮೃತ ಇರ್ಫಾನ್‌, ಖಾಸಗಿ ಕೈಗಾರಿಕೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. 2020ರ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ. ಅದೇ ವೇಳೆ ಆತನ ಜತೆ ಜೈಲಿನಲ್ಲಿದ್ದ ಗೆಳೆಯ ಅಬ್ಬಾಸ್‌ ಪತ್ನಿ ಜತೆ ಇರ್ಫಾನ್ ಮದುವೆಯಾಗಿದ್ದು ಹತ್ಯೆಗೆ ಮೂಲ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್‌ಡಿಪಿಐ ಪಕ್ಷದಲ್ಲಿ ಅಬ್ಬಾಸ್ ಹಾಗೂ ಇರ್ಫಾನ್‌ ಗುರುತಿಸಿಕೊಂಡಿದ್ದರು. ಗಲಭೆ ವೇಳೆ ಪೊಲೀಸ್ ಠಾಣೆ ಮುಂದೆ ಗಲಾಟೆ ಮಾಡಿದ ಆರೋಪದಡಿ ಬಂಧಿತರಾದ ಇಬ್ಬರ ಪೈಕಿ ಅಬ್ಬಾಸ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆ (ಯಎಪಿಎ) ದಾಖಲಾಯಿತು. ಹೀಗಾಗಿ ಜಾಮೀನು ಸಿಗದೆ ಆತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಇದ್ದಾನೆ. ಇದೇ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದ ಇರ್ಫಾನ್‌, ಸ್ನೇಹಿತ ಅಬ್ಬಾಸ್ ಕುಟುಂಬಕ್ಕೆ ನೆರವಾಗುವ ನೆಪದಲ್ಲಿ ಆತನ ಮನೆಗೆ ಹೋಗಿ ಬರುತ್ತಿದ್ದ. ಆಗ ಗೆಳೆಯನ ಪತ್ನಿಯನ್ನೇ ಬಲೆಗೆ ಬೀಳಿಸಿಕೊಂಡು ಇರ್ಫಾನ್ ಎರಡನೇ ಮದುವೆಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಈ ಮದುವೆ ವಿಚಾರ ತಿಳಿದು ಕೆರಳಿದ್ದ ಅಬ್ಬಾಸ್‌, ಗೆಳೆಯನ ಮೇಲೆ ಪ್ರತೀಕಾರ ತೀರಿಸಲು ತನ್ನ ಮೂವರು ಸ್ನೇಹಿತರಿಗೆ ಹತ್ಯೆಗೆ ಸೂಚಿಸಿದ್ದ. ಆದರೆ ಅಬ್ಬಾಸ್ ಪತ್ನಿ ಜತೆ ಇರ್ಫಾನ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಸುದ್ದಿ ಆರೋಪಿಗಳಿಗೆ ತಿಳಿದಿತ್ತು. ಮೊದಲು ಸುಮ್ಮನಿದ್ದ ಅವರು, ಇತ್ತೀಚೆಗೆ ಬಹಿರಂಗವಾಗಿಯೇ ಆಕೆಯ ಜತೆ ಇರ್ಫಾನ್ ಓಡಾಟ ಸಹಿಸದಾದರು. ಆದರೆ ತನ್ನ ಸ್ನೇಹಿತರಿಗೆ ತಿಳಿಯದಂತೆ ಆಕೆ ಜತೆ ಇರ್ಫಾನ್ ಮದುವೆಯಾಗಿದ್ದ. ಕೊನೆಗೆ ಏ.21ರಂದು ರಾತ್ರಿ ಮೂವರು ಆರೋಪಿಗಳು ಇರ್ಫಾನ್‌ ಮೇಲೆ ಹಲ್ಲೆ ನಡೆಸಿ ಭೀಕರವಾಗಿ ಕೊಂದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗೆಳೆಯರ ಪತ್ನಿಯರ ಮೇಲೆ ಕಣ್ಣು

ಜೈಲು ಸೇರುವ ಗೆಳೆಯರ ಪತ್ನಿಯರ ಮೇಲೆ ಇರ್ಫಾನ್ ಕಣ್ಣು ಬೀಳುತ್ತಿತ್ತು. ಈ ಮೊದಲು ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ದ ಸ್ನೇಹಿತನ ಪತ್ನಿಯನ್ನೇ ಆತ ಮದುವೆಯಾಗಿದ್ದ. ಇದಾದ ಬಳಿಕ ಮತ್ತೊಬ್ಬ ಗೆಳೆಯನ ಪತ್ನಿ ಹಿಂದೆ ಇರ್ಫಾನ್ ಬಿದ್ದಿದ್ದ. ಆದರೆ ಈತನ ಲಂಪಟತನಕ್ಕೆ ಆತ ಬಲಿಯಾಗಲಿಲ್ಲ. ಕೊನೆಗೆ ಮೂರನೇ ಬಾರಿಗೆ ಅಬ್ಬಾಸ್ ಪತ್ನಿಯನ್ನು ತನ್ನ ಪ್ರೇಮದ ಬಲೆಗೆ ಬೀಳಿಸಿಕೊಂಡು ಇರ್ಫಾನ್ ಮದುವೆಯಾಗಿದ್ದ ಎಂದು ಮೂಲಗಳು ಹೇಳಿವೆ.

Share this article