ಉಂಡುಬತ್ತಿನ ಕೆರೆ ಅಪಘಾತ ಪ್ರಕರಣ : ಅಪರಾಧಿಗೆ 3.6 ವರ್ಷ ಶಿಕ್ಷೆ

KannadaprabhaNewsNetwork |  
Published : Apr 25, 2025, 11:49 PM ISTUpdated : Apr 26, 2025, 04:34 AM IST
ಉಂಡುಬತ್ತಿನ ಕೆರೆ ಅಪಘಾತ ಪ್ರಕರಣ: ಅಪರಾಧಿಗೆ 3.6 ವರ್ಷ ಶಿಕ್ಷೆ | Kannada Prabha

ಸಾರಾಂಶ

ನಂಜನಗೂಡು-ಮೈಸೂರು ರಸ್ತೆಯ ಉಂಡಬತ್ತಿನ ಕೆರೆಯಲ್ಲಿ ಪ್ಯಾಸೆಂಜರ್‌ ಟೆಂಪೋ ಮುಳುಗಿ 31 ಮಂದಿ ಸಾವಿಗೆ ಕಾರಣವಾದ ಘಟನೆಗೆ ಸಂಬಂಧಿಸಿದಂತೆ ಅಪರಾಧಿಗೆ 3.6 ವರ್ಷ ಶಿಕ್ಷೆ ವಿಧಿಸಿ ನಗರದ 11ನೇ ಅಧಿಕ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಸಂಜಯ್‌ ಎಂ. ಮಲ್ಲಿಕಾರ್ಜುನಯ್ಯ ತೀರ್ಪು ನೀಡಿದ್ದಾರೆ.

 ಮೈಸೂರು : ನಂಜನಗೂಡು-ಮೈಸೂರು ರಸ್ತೆಯ ಉಂಡಬತ್ತಿನ ಕೆರೆಯಲ್ಲಿ ಪ್ಯಾಸೆಂಜರ್‌ ಟೆಂಪೋ ಮುಳುಗಿ 31 ಮಂದಿ ಸಾವಿಗೆ ಕಾರಣವಾದ ಘಟನೆಗೆ ಸಂಬಂಧಿಸಿದಂತೆ ಅಪರಾಧಿಗೆ 3.6 ವರ್ಷ ಶಿಕ್ಷೆ ವಿಧಿಸಿ ನಗರದ 11ನೇ ಅಧಿಕ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಸಂಜಯ್‌ ಎಂ. ಮಲ್ಲಿಕಾರ್ಜುನಯ್ಯ ತೀರ್ಪು ನೀಡಿದ್ದಾರೆ.

2010ರ ಡಿ.14 ರಂದು ಮೈಸೂರು ದಕ್ಷಿಣ ಪೊಲೀಸ್‌ ಠಾಣೆ ವ್ಯಾಪ್ತಿಯ ಉಂಡುಬತ್ತಿನ ಕೆರೆಯ ಏರಿಯ ಮೇಲೆ ಪ್ರಯಾಣಿಕರ ಟೆಂಪೋ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಕೂರಿಸಿಕೊಂಡು ನಂಜನಗೂಡು ಕಡೆಯಿಂದ ಮೈಸೂರು ಕಡಗೆ ಅತಿ ವೇಗವಾಗಿ ಮತ್ತು ಹಜಾಗರೂಕತೆಯಿಂದ ಸಂಚರಿಸಿತ್ತು.

ಈ ವೇಳೆ ಎಡಬದಿಯ ಕೆರೆಗೆ ಟೆಂಪೋ ಮುಗುಚಿಬಿದ್ದ ಪರಿಣಾಮ 31 ಮಂದಿ ಮೃತಪಟ್ಟು, ಸ್ವಲ್ಪ ಮಂದಿಗೆ ಸಾಮಾನ್ಯ ಸ್ವರೂಪದ ಗಾಯವಾಗಿತ್ತು. ಚಾಲಕನು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ, ಗಾಯಾಳುಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಅಲ್ಲದೇ, ಅಪರಾಧಿ ವಾಹನದ ಪರ್ಮಿಟ್‌ ಷರತ್ತನ್ನು ಪದೇ ಪದೇ ಉಲ್ಲಂಘಿಸಿದ್ದಾರೆ ಮತ್ತು ಎರಡನೇ ಅಪರಾಧಿಯು ವಾಹನದ ಮಾಲೀಕನಾಗಿದ್ದು, ಆತನೂ ಕೂಡ ಪರ್ಮಿಟ್ ನ ಷರತ್ತು ಉಲ್ಲಂಘಿಸಿ, ತಮ್ಮ ವಾಹನದಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಕಳುಹಿಸಿಕೊಟ್ಟಿರುವುದು ತನಿಖೆಯಿಂದ ದೃಢಪಟ್ಟಿತು.

ಈ ಸಂಬಂಧ ಅಂದಿನ ಡಿವೈಎಸ್ಪಿ ಸಿ.ಡಿ.ಜಗದೀಶ್ ಅವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದ ಪೊಲೀಸ್ ಸಿಬ್ಬಂದಿ ಮಹದೇವಸ್ವಾಮಿ ಸಾಕ್ಷಿದಾರರನ್ನು ಕರೆತರುವಲ್ಲಿ ಶ್ರಮಿಸಿದ್ದರು.

ಆಪಾದಿತರ ವಿರುದ್ಧ ಆಪಾದನೆ ರುಜುವಾತಾದ ಹಿನ್ನೆಲೆಯಲ್ಲಿ ಅಭಿಯೋಜನೆಯು 27 ಜನ ಸಾಕ್ಷಿಗಳು ಹಾಗೂ 83 ದಾಖಲೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಸುಪ್ರಿಂ ಕೋರ್ಟ್ ತೀರ್ಪನ್ನು ಹೆಸರಿಸಿ ವಾದ ಮಂಡಿಸಿದ್ದರಿಂದ ನ್ಯಾಯಾಲಯವು ಮೊದಲ ಅಪರಾಧಿ ಚಾಲಕನಿಗೆ 3.6 ವರ್ಷ ಶಿಕ್ಷೆ, 12,600 ರು. ದಂಡ ಮತ್ತು ಎರಡನೇ ಅಪರಾಧಿಗೆ 1 ವರ್ಷ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಎಂ.ಎನ್. ಸೌಮ್ಯಾ ವಾದ ಮಂಡಿಸಿದ್ದರು.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!