ಕನ್ನಡಪ್ರಭ ವಾರ್ತೆ ಬೆಂಗಳೂರು
ಫ್ರೇಜರ್ ಟೌನ್‌ನ ರಿಯಾಜ್ ಹಾಗೂ ಗೋವಾದ ಆಸ್ಟಿನ್ ಕಾರ್ಡೋಸ್ ಬಂಧಿತರಾಗಿದ್ದು, ಆರೋಪಿಗಳಿಂದ ರೇಂಜ್ ರೋವರ್ ಹಾಗೂ ಜಾಗ್ವಾರ್ ಸೇರಿದಂತೆ ₹2.56 ಕೋಟಿ ಮೌಲ್ಯದ 17 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ನಗರದಲ್ಲಿ ನಕಲಿ ಎನ್ಓಸಿ ಸೃಷ್ಟಿಸಿ ಕಾರು ಮಾರಾಟ ಮಾಡುವ ಜಾಲ ಸಕ್ರಿಯವಾಗಿರುವ ಬಗ್ಗೆ ಸಿಸಿಬಿಯ ಸಂಘಟಿತ ಅಪರಾಧ ದಳ (ಪಶ್ಚಿಮ) ಇನ್‌ಸ್ಪೆಕ್ಟರ್ ಮಹದೇವಸ್ವಾಮಿ ಅವರಿಗೆ ಮಾಹಿತಿ ಸಿಕ್ಕಿತು. ಈ ಸುಳಿವು ಬೆನ್ನಹತ್ತಿದ್ದಾಗ ರಿಯಾಜ್ ಹಾಗೂ ಆಸ್ಟಿನ್ ಬಂಧಿತರಾಗಿದ್ದು, ತಪ್ಪಿಸಿಕೊಂಡಿರುವ ಮತ್ತೆ ಕೆಲವರ ಪತ್ತೆಗೆ ಸಿಸಿಬಿ ತನಿಖೆ ಮುಂದುವರೆಸಿದೆ.
ಹೇಗೆ ವಂಚನೆ?:ರಿಯಾಜ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ನಗರದ ವಿವಿಧ ಠಾಣೆಗಳಲ್ಲಿ ಆತನ ಮೇಲೆ ಪ್ರಕರಣಗಳು ದಾಖಲಾಗಿವೆ. ಹಲವು ದಿನಗಳಿಂದ ಕಳವು ಕಾರುಗಳ ಮಾರಾಟ ದಂಧೆಯಲ್ಲಿ ರಿಯಾಜ್ ಸಕ್ರಿಯವಾಗಿದ್ದ. ಹಣದಾಸೆಗೆ ಆತನಿಗೆ ಗೋವಾದ ಆಸ್ಟಿನ್ ಸೇರಿದಂತೆ ಇತರರು ಸಾಥ್ ಕೊಟ್ಟಿದ್ದರು. ಕೆಲವು ತಿಂಗಳ ಹಿಂದೆ ವಿಧಾನಪರಿಷತ್ ಜೆಡಿಎಸ್ ಸದಸ್ಯ ಬೋಜೇಗೌಡ ಅವರ ಕಾರು ನೋಂದಣಿ ಸಂಖ್ಯೆ ಬಳಸಿ ಬೇರೋಂದು ವಾಹನ ಮಾರಾಟ ಯತ್ನಿಸಿದ್ದಾಗ ರಿಯಾಜ್‌ನನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರಬಂದು ಆತ ಮತ್ತೆ ತನ್ನ ಚಾಳಿ ಮುಂದುವರೆಸಿದ್ದಾನೆ.
ಜಾಗ್ವಾರ್ ಮಾರಾಟ
ಕೆಲ ದಿನಗಳ ಹಿಂದೆ ರಿಯಾಜ್‌ಗೆ ತುರ್ತು ಹಣದ ಅವಶ್ಯಕತೆ ಇದ್ದ ಕಾರಣ ತಮ್ಮ ಜಾಗ್ವಾರ್ ಕಾರು ಮಾರಾಟ ಮಾಡಿಸಿ ಕೊಡುವಂತೆ ಆತನ ಪರಿಚಿತರೊಬ್ಬರು ಕೇಳಿದ್ದರು. ಆಗ ಅವರ ಜಾಗ್ವಾರ್ ಕಾರಿಗೆ ನಕಲಿ ದಾಖಲೆ ಸೃಷ್ಟಿಸಿ ಆತ ಮಾರಾಟ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.