ತಂದೆ - ತಾಯಿಯ ಅನಾರೋಗ್ಯದ ಕಥೆ ಕಟ್ಟಿ ಕದ್ದ ಬೈಕ್‌ ಮಾರುತ್ತಿದ್ದ : ಕಳ್ಳ ಪೊಲೀಸರ ಬಲೆಗೆ

KannadaprabhaNewsNetwork | Updated : Oct 26 2024, 05:44 AM IST

ಸಾರಾಂಶ

ಕದ್ದ ಬೈಕನ್ನು ಸ್ಮಶಾನದಲ್ಲಿ ಬಚ್ಚಿಟ್ಟು ಬಳಿಕ ಗಿರಾಕಿ ಹುಡುಕಿ ತಂದೆ-ತಾಯಿಗೆ ಅನಾರೋಗ್ಯದ ಕಥೆ ಕಟ್ಟಿ ಮಾರುತ್ತಿದ್ದ ಕಳ್ಳ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

 ಬೆಂಗಳೂರು : ನಗರದ ವಿವಿಧೆಡೆ ದ್ವಿಚಕ್ರ ವಾಹನ ಕಳವು ಮಾಡಿ ತಂದೆ-ತಾಯಿಗೆ ಅನಾರೋಗ್ಯದ ಕಥೆ ಕಟ್ಟಿ ಗಿರಾಕಿಗಳಿಗೆ ಬೈಕ್‌ ಮಾರಾಟ ಮಾಡುತ್ತಿದ್ದ ಚಾಲಾಕಿ ಕಳ್ಳನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬನಶಂಕರಿ 2ನೇ ಹಂತದ ಕಾವೇರಿನಗರ ನಿವಾಸಿ ಸೈಯದ್‌ ಇಲಿಯಾಸ್‌(25) ಬಂಧಿತ. ಆರೋಪಿಯಿಂದ ₹10 ಲಕ್ಷ ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಎನ್‌.ಎಸ್.ಪಾಳ್ಯ ನಿವಾಸಿಯೊಬ್ಬರು ಹೊಸೂರು ಮುಖ್ಯರಸ್ತೆಯ ಎಚ್‌ಡಿಎಫ್‌ಸಿ ಬ್ಯಾಂಕ್‌ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳುವಾಗಿತ್ತು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಆರೋಪಿ ಪತ್ತೆಗೆ ತನಿಖೆಗಿಳಿದ ಪೊಲೀಸರು, ಬಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ಆರೋಪಿ ಸೈಯದ್‌ ಇಲಿಯಾಸ್‌ನನ್ನು ಕದ್ದ ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ತಾನೇ ದ್ವಿಚಕ್ರ ವಾಹನ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದೇ ರೀತಿ ನಗರದ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಒಟ್ಟು 14 ದ್ವಿಚಕ್ರ ವಾಹನಗಳ ಜಪ್ತಿ:

ತನಿಖೆ ಮುಂದುವರೆಸಿದ ಪೊಲೀಸರು, ಆರೋಪಿಯು ಹೆಚ್ಚಿನ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಸಿಲ್ಕ್‌ ಬೋರ್ಡ್‌ ಬಳಿ ಇರುವ ಸ್ಮಶಾನದ ಕಾಂಪೌಂಡ್‌ ಪಕ್ಕದಲ್ಲಿ ನಿಲುಗಡೆ ಮಾಡಿದ್ದ ನಾಲ್ಕು ದ್ವಿಚಕ್ರ ವಾಹನಗಳು, ಮಡಿವಾಳ ಮಾರ್ಕೆಟ್‌ ಬಳಿ ನಿಲುಗಡೆ ಮಾಡಿದ್ದ ನಾಲ್ಕು ದ್ವಿಚಕ್ರ ವಾಹನಗಳು ಹಾಗೂ ಮಡಿವಾಳ ವಿ.ಪಿ.ರಸ್ತೆಯ ಕಾವೇರಿ ಕಾನ್ವೆಂಟ್‌ ಸ್ಕೂಲ್ ಬಳಿ ನಿಲ್ಲಿಸಿದ್ದ ಐದು ದ್ವಿಚಕ್ರ ವಾಹನಗಳು ಸೇರಿ ಒಟ್ಟು 14 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

9 ದ್ವಿಚಕ್ರ ವಾಹನ ಕಳವು ಪ್ರಕರಣ ಪತ್ತೆ:

ಆರೋಪಿಯ ಬಂಧನದಿಂದ ಮಡಿವಾಳ ಠಾಣೆಯ ಏಳು, ಬನಶಂಕರಿ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಹುಡೋ ಠಾಣೆಯ ಒಂದು ಸೇರಿ ಒಟ್ಟಯ 9 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಉಳಿದ ಐದು ದ್ವಿಚಕ್ರ ವಾಹನಗಳ ವಾರಸುದಾರರ ಪತ್ತೆಗೆ ತನಿಖೆ ಮುಂದುವರೆದಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕದ್ದ ಬೈಕ್‌ ಮಾರಾಟಕ್ಕೆ ಸಿನಿಮೀಯ ಶೈಲಿ ಕಥೆ

ಆರೋಪಿ ಸೈಯದ್‌ ಇಲಿಯಾಸ್‌ ವೃತ್ತಿಯಲ್ಲಿ ಮೆಕ್ಯಾನಿಕ್‌ ಆಗಿದ್ದು, ಪಂಕ್ಚರ್‌ ಶಾಪ್‌ ಇರಿಸಿಕೊಂಡಿದ್ದಾನೆ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ನಗರದ ವಿವಿಧೆಡೆ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ. ಕದ್ದ ದ್ವಿಚಕ್ರ ವಾಹನಗಳನ್ನು ವಿಲೇವಾರಿ ಮಾಡಲು ಸಿನಿಮೀಯ ಶೈಲಿಯಲ್ಲಿ ಕಥೆ ಕಟ್ಟುತ್ತಿದ್ದ. ತಂದೆ-ತಾಯಿಗೆ ಅನಾರೋಗ್ಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿದ್ದೇನೆ. ತುರ್ತಾವಾಗಿ ಹಣ ಬೇಕಿದೆ ಎಂದು ಸುಳ್ಳು ಹೇಳಿ ಐದಾರು ಸಾವಿರ ರು.ಗೆ ಕದ್ದ ದ್ವಿಚಕ್ರ ವಾಹನ ಮಾರಾಟ ಮಾಡುತ್ತಿದ್ದ. ಈ ವೇಳೆ ಗಿರಾಕಿಗಳು ಸಿಗದಿದ್ದರೆ, ತಾನೇ ಮೆಕ್ಯಾನಿಕ್‌ ಆಗಿರುವುದರಿಂದ ಬಿಡಿ ಭಾಗಗಳನ್ನು ಕಳಚಿ ಮಾರಾಟ ಮಾಡುತ್ತಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

Share this article