ಪ್ರತ್ಯೇಕ ಪ್ರಕರಣ: ಮಂಡ್ಯ ಜಿಲ್ಲೆಯಲ್ಲಿ ಐವರು ಸಾವು

KannadaprabhaNewsNetwork |  
Published : Aug 24, 2025, 02:00 AM IST
ಪ್ರತ್ಯೇಕ ಪ್ರಕರಣ: ಜಿಲ್ಲೆಯಲ್ಲಿ ಐದು ಸಾವು | Kannada Prabha

ಸಾರಾಂಶ

ಕೆ.ಆರ್.ಪೇಟೆ ಪಟ್ಟಣದ ಬಂಡಿಹೊಳೆ ರಸ್ತೆಯ ಶ್ರೀಚೌಡೇಶ್ವರಿ ದೇವಸ್ಥಾನದ ಜಲಸೂರು ಹೆದ್ದಾರಿ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ವಿವಿಧೆಡೆ ಪ್ರತ್ಯೇಕ ಪ್ರಕರಣಗಳಲ್ಲಿ ಬಾಲಕಿ ಸೇರಿದಂತೆ ಐವರು ಮೃತಪಟ್ಟಿರುವ ಘಟನೆ ನಡೆದಿದೆ.

ಪಾದಚಾರಿ ಸಾವು:

ಕೆ.ಆರ್.ಪೇಟೆ ಪಟ್ಟಣದ ಬಂಡಿಹೊಳೆ ರಸ್ತೆಯ ಶ್ರೀಚೌಡೇಶ್ವರಿ ದೇವಸ್ಥಾನದ ಜಲಸೂರು ಹೆದ್ದಾರಿ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ನಡೆದಿದೆ. ಪಟ್ಟಣದ ಹೇಮಾವತಿ ಬಡಾವಣೆಯ ನಂಜಪ್ಪ (೮೦) ಮೃತ ವ್ಯಕ್ತಿ. ಇವರು ತಮ್ಮ ಸ್ನೇಹಿತ ಕರೀಗೌಡ ಅವರೊಂದಿಗೆ ವಾಯುವಿಹಾರಕ್ಕೆ ತೆರಳಿದ್ದಾಗ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ನಂಜಪ್ಪ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ತಲೆ-ಕಾಲಿಗೆ ತೀವ್ರ ಪೆಟ್ಟಾಗಿದ್ದು, ಕೂಡಲೇ ಕೆ.ಆರ್.ಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸೊಸೆ ಧನಲಕ್ಷ್ಮೀ ನೀಡಿದ ದೂರಿನನ್ವಯ ಕೆ.ಆರ್.ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೋಟಾರ್ ಗ್ರೇಡರ್ ಹರಿದು ವ್ಯಕ್ತಿ ಸಾವು:

ಚಾಲಕನೊಬ್ಬ ಮಣ್ಣು ಮಟ್ಟ ಮಾಡುವ ಮೋಟಾರ್ ಗ್ರೇಡರ್‌ನ್ನು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರ ಮೇಲೆ ಹರಿದು ಅವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕೆಎನ್‌ಆರ್ ಕನ್‌ಸ್ಟ್ರಕ್ಷನ್‌ನಲ್ಲಿ ೯ ವರ್ಷದಿಂದ ಕೆಲಸ ಮಾಡುತ್ತಿದ್ದ ತಾತಾರಾವ್ (೬೨) ಮೃತ ವ್ಯಕ್ತಿ. ಶ್ರೀರಂಗಪಟ್ಟಣ-ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯ ಹೊಸ ರಸ್ತೆ ಮಾಡುತ್ತಿರುವ ಸಮಯದಲ್ಲಿ ಬೀಚನಕುಪ್ಪೆ ಗ್ರಾಮದ ಬಳಿ ಮಣ್ಣನ್ನು ಮಟ್ಟ ಮಾಡಲಾಗುತ್ತಿತ್ತು. ಈ ವೇಳೆ ಮೋಟಾರ್ ಗ್ರೇಡರ್ ಚಾಳಕ ಬಿ.ಲಕ್ಷ್ಮೀನಾರಾಯಣ ವಾಹನವನ್ನು ನಿರ್ಲಕ್ಷತೆಯಿಂದ ಹಿಂಭಾಗಕ್ಕೆ ಚಾಲನೆ ಮಾಡಿದ್ದರಿಂದ ಕೂಲಿ ಕೆಲಸ ಮಾಡುತ್ತಿದ್ದ ತಾತಾರಾವ್ ಅವರಿಗೆ ಡಿಕ್ಕಿ ಹೊಡೆದು ಅವರ ಮೇಳೆ ಹರಿದಿದೆ.. ಹೊಟ್ಟೆಯ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಕೂಡಲೇ ಅವರನ್ನು ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ತಾತಾರಾವ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಶ್ರೀರಂಗಪಟ್ಟಣದ ಕೆಆರ್‌ಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಜಲು ಹೋದ ವಿದ್ಯಾರ್ಥಿ ನೀರು ಪಾಲು:

ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರುಪಾಲಾಗಿರುವ ಘಟನೆ ಬಿ.ಹೊಸೂರು ಕಾಲೋನಿ ಬಳಿಯ ವಿಶ್ವೇಶ್ವರಯ್ಯ ನಾಲೆ ಬಳಿ ಜರುಗಿದೆ. ಮಂಡ್ಯ ತಾಲೂಕು ಬೆಟ್ಟಹಳ್ಳಿ ಗ್ರಾಮದ ದರ್ಶನ್ (೧೫) ಮೃತ ವಿದ್ಯಾರ್ಥಿ. ಈತ ಹುಲಿವಾನ ಗ್ರಾಮದ ಶ್ರೀ ಕಾಲಭೈರವೇಶ್ವರ ವಿದ್ಯಾಸಂಸ್ಥೆಯಲ್ಲಿ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದನು. ಆ.೨೧ರಂದು ಸಂಜೆ ಶಾಲೆ ಮುಗಿಸಿ ಎಲ್ಲಾ ಮಕ್ಕಳನ್ನು ವ್ಯಾನಿನ ಚಾಲಕ ಶಂಕರ್ ಹಾಸ್ಟೆಲ್ ಬಳಿ ಇಳಿಸದೆ ಹೊಸೂರು ಕಾಲೋನಿ ಗೇಟ್ ಬಳಿ ಇಳಿಸಿ ವಾಪಸ್ ಹೋಗಿದ್ದಾನೆ. ಈ ವೇಳೆ ದರ್ಶನ್ ಸ್ನೇಹಿತರ ಜೊತೆ ನಾಲೆಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾನೆ. ಈತನ ಸಾವಿಗೆ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ರಾಜಲಕ್ಷ್ಮೀ ಹಾಗೂ ವಾಹನ ಚಾಳಕ ಶಂಕರ್ ಕಾರಣ ಎಂದು ಆರೋಪಿಸಿ ಮೃತನ ತಾಯಿ ವೇದಾವತಿ ಕೆರಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಬ್ಬಿನ ಹಾಲಿನ ಕೊಪ್ಪರಿಕೆಗೆ ಬಿದ್ದು ಬಾಲಕಿ ಸಾವು:

ಆಲೆಮನೆಯಲ್ಲಿ ಕುದಿಯುತ್ತಿದ್ದ ಕಬ್ಬಿನ ಹಾಲಿನ ಕೊಪ್ಪರಿಕೆಗೆ ಬಾಲಕಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ನಡೆದಿದೆ. ಉತ್ತರ ಪ್ರದೇಶ ಪುನೇಗರ್ ಜಿಲ್ಲೆ ನಾಪ್ಲೆ ಗ್ರಾಮದ ನೀಟು-ಕೃಷ್ಣಪಾಲ್ ದಂಪತಿ ಪುತ್ರಿ ಗೌರಿ (೮) ಮೃತ ಬಾಲಕಿ. ಆಲೆಮನೆ ಹತ್ತಿರ ಬಾಲಕಿ ಆಟವಾಡುತ್ತಿದ್ದ ಸಮಯದಲ್ಲಿ ಮೊಬೈಲ್ ತೆಗೆದುಕೊಂಡು ಬರುವಂತೆ ಎಂದು ತಾಯಿ ಹೇಳಿದ್ದಾರೆ. ಆಗ ಕಪ್ಪರಿಕೆ ಬಳಿ ಇದ್ದ ಮೊಬೈಲ್‌ನ್ನು ತರಲು ಹೋದಾಗ ಆಕಸ್ಮಿಕವಾಗಿ ಕಾಲುಜಾರಿ ಕೊಪ್ಪರಿಕೆಯೊಳಗೆ ಬಾಲಕಿ ಬಿದ್ದಿದ್ದಾಳೆ. ಕೂಡಲೇ ಮಗುವನ್ನು ಮೇಲೆತ್ತಿ ಉಪಚರಿಸಿ ಪಾಂಡವಪುರ, ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರಿಮಿನಾಶಕ ಸೇವಿಸಿ ವ್ಯಕ್ತಿ ಸಾವು:

ಕ್ರಿಮಿನಾಶಕ ಸೇವಿಸಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆದ್ದೂರು ತಾಲೂಕಿನ ಹುಣ್ಣನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಎಚ್.ಎಸ್.ಸುಮಂತ್ (೩೨) ಮೃತ ವ್ಯಕ್ತಿ. ಈತ ಕೈಸಾಲ ತೀರಿಸಿಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ಜಮೀನಿನ ಬಳಿ ಕ್ರಿಮಿನಾಶಕ ಔಷಧ ಸೇವಿಸಿದ್ದಾನೆ. ನಂತರ ಬೆಂಗಳೂರಿಗೆ ಪತ್ನಿ ಮತ್ತು ಮಗನೊಂದಿಗೆ ಬೆಂಗಳೂರಿಗೆ ಬೈಕ್‌ನಲ್ಲಿ ತೆರಳುವಾಗ ಮೂರ್ನಾಲ್ಕು ಬಾರಿ ವಾಂತಿಯಾಗಿದೆ. ಪತ್ನಿ ಉಮಾ ಈ ಬಗ್ಗೆ ಕೇಳಿದಾಗ ಕ್ರಿಮಿನಾಶಕ ಔಷಧ ಸೇವಿಸಿರುವ ವಿಷಯ ತಿಳಿಸಿದ್ದಾನೆ. ಬಳಿಕ ಕೆಂಗೇರಿ ಬಳಿಯ ನಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಪದ್ಮನಾಭನಗರದಲ್ಲಿರುವ ಡಿಜಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

PREV

Recommended Stories

ತಾನೇ ಹೆರಿಗೆ ಮಾಡಿಕೊಂಡು, ಮಗುವಿನ ಕತ್ತು ಸೀಳಿದ ತಾಯಿ!
ಗೃಹಿಣಿಗೆ ವರ್ಕ್ ಫ್ರಮ್ ಹೋಂ ಹೆಸರಿನಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರು. ವಂಚನೆ