ಕನ್ನಡಪ್ರಭ ವಾರ್ತೆ ಬೆಂಗಳೂರು
ಮದ್ಯ ಸೇವನೆಗೆ ಹಣ ಕೊಡದೆ ರೂಮ್‌ನಲ್ಲಿ ಕೂಡಿ ಹಾಕಿದ್ದ ಮಗನ ಮೇಲೆ ಕೋಪಗೊಂಡ ತಂದೆ ರೂಮ್‌ನಲ್ಲಿದ್ದ ಶಾರ್ಟ್ ಗನ್ ತೆಗೆದುಕೊಂಡು ಗುಂಡು ಹಾರಿಸಿ ಮಗನನ್ನು ಹತ್ಯೆ ಮಾಡಿರುವ ದಾರುಣ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕರೇಕಲ್ಲಿನ 1ನೇ ಮುಖ್ಯರಸ್ತೆಯ 2ನೇ ಅಡ್ಡರಸ್ತೆ ನಿವಾಸಿ ನರ್ತನ್ ಬೋಪಣ್ಣ(35) ಹತ್ಯೆಯಾದವರು. ಪರವಾನಗಿ ಪಡೆದ ಎಸ್‌ಬಿಬಿಎಲ್ ಶಾರ್ಟ್ ಗನ್‌ನಿಂದ ಮಗನನ್ನೇ ಹತ್ಯೆ ಮಾಡಿದ ತಂದೆ ಕೆ.ಜಿ.ಸುರೇಶ್‌ನನ್ನು (58) ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?
ಕೊಡಗು ಮೂಲದ ಸುರೇಶ್, ಪತ್ನಿ ಕೆ.ಎಸ್.ರಮಾ, ಪುತ್ರ ನರ್ತನ್ ಬೋಪಣ್ಣ ಮತ್ತು ಪುತ್ರಿ ಕೆ.ಎಸ್.ಪೂಲನ್ ಜತೆಗೆ ಕಳೆದ ಎರಡು ವರ್ಷಗಳಿಂದ ಕಾಮಾಕ್ಷಿಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸುರೇಶ್ ಖಾಸಗಿ ಬ್ಯಾಂಕ್‌ನಲ್ಲಿ ಗನ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು, ಆರು ತಿಂಗಳ ಹಿಂದೆ ಆ ಕೆಲಸ ಬಿಟ್ಟಿದ್ದರು.
ಇನ್ನು ಡಿಪ್ಲೋಮಾ ವ್ಯಾಸಂಗ ಮಾಡಿದ್ದ ನರ್ತನ್ ಶಾಪಿಂಗ್ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಅನಾರೋಗ್ಯದ ಹಿನ್ನೆಲೆಯಲ್ಲಿ ತಾಯಿ ಹಾಸಿಗೆ ಹಿಡಿದಿದ್ದರಿಂದ ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ ನರ್ತನ್, ಮನೆಯಲ್ಲೇ ಉಳಿದು ತಾಯಿಯ ಆರೈಕೆಯಲ್ಲಿ ತೊಡಗಿದ್ದ.
ಇನ್ನು ತಂಗಿ ಮದುವೆಯಾಗಿದ್ದು, ಗಂಡನ ಮನೆಯಲ್ಲಿ ನೆಲೆಸಿದ್ದಾರೆ. ಹೀಗಾಗಿ ಮನೆಯಲ್ಲಿ ತಂದೆ, ತಾಯಿ ಮತ್ತು ಮಗ ಇದ್ದರು.
ಮದ್ಯ ಸೇವಿಸಲು ಹಣಕ್ಕೆ ಬೇಡಿಕೆ: ಕೆಲಸ ಬಿಟ್ಟು ಮದ್ಯ ವ್ಯಸನಿಯಾಗಿದ್ದ ಸುರೇಶ್ ಸದಾ ಮಗನ ಜತೆಗೆ ಜಗಳ ಮಾಡುತ್ತಿದ್ದ. ಕೆಲಸಕ್ಕೆ ಹೋಗಿ ಖರ್ಚಿಗೆ ಹಣ ಕೊಡುವಂತೆ ಪೀಡಿಸುತ್ತಿದ್ದ.
ಇನ್ನು ಅನಾರೋಗ್ಯ ಪೀಡಿತ ಪತ್ನಿಯ ಬಗ್ಗೆ ಕಾಳಜಿ ಮಾಡುತ್ತಿರಲಿಲ್ಲ. ಹೀಗಾಗಿ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಗುರುವಾರ ಮಧ್ಯಾಹ್ನ ಮದ್ಯ ಸೇವಿಸಲು ಹಣ ಕೊಡುವಂತೆ ಸುರೇಶ್, ನರ್ತನ್‌ನನ್ನು ಕೇಳಿದ್ದಾನೆ. ನರ್ತನ್ ಹಣ ಇಲ್ಲ ಎಂದಿದ್ದಾನೆ.
ಇದರಿಂದ ಸುರೇಶ್ ಜೋರಾಗಿ ಜಗಳ ಮಾಡಲು ಶುರು ಮಾಡಿದ್ದಾನೆ. ಇದರಿಂದ ಕೋಪಗೊಂಡ ನರ್ತನ್, ಸುರೇಶ್‌ನನ್ನು ರೂಮ್ ಒಳಗೆ ತಳ್ಳಿ ಬಾಗಿಲು ಹಾಕಿದ್ದ.
ಬಾಗಿಲಿಗೆ ಗುಂಡು ಹಾರಿಸಿದ: ರೂಮ್ ಒಳಗೆ ಸುರೇಶ್ ಮತ್ತಷ್ಟು ಜೋರಾಗಿ ಕೂಗಾಡಲು ಶುರು ಮಾಡಿದ್ದ. ರೂಮ್ ಬಾಗಿಲು ತೆಗೆಯುವಂತೆ ಹೇಳುತ್ತಿದ್ದ.
ಹೊರಗೆ ಬಂದರೆ ಜಗಳ ವಿಕೋಪಕ್ಕೆ ತಿರುಗಲಿದೆ ಎಂಬುದನ್ನು ಅರಿತ ನರ್ತನ್, ರೂಮ್‌ನ ಬಾಗಿಲು ತೆಗೆದಿಲ್ಲ. ಹೀಗಾಗಿ ಕೋಪಗೊಂಡ ಸುರೇಶ್, ರೂಮ್‌ನಲ್ಲಿದ್ದ ಶಾರ್ಟ್ ಗನ್ ತೆಗೆದುಕೊಂಡು ಒಳಗಿಂದ ಬಾಗಿಲ ಚಿಲಕಕ್ಕೆ ಗುಂಡು ಹಾರಿಸಿದ್ದಾನೆ.
ಈ ವೇಳೆ ಗುಂಡು ಬಾಗಿಲಿಗೆ ತಾಕಿ ಹಾಲ್‌ನಲ್ಲಿದ್ದ ಮಗ ನರ್ತನ್‌ನ ಒಳ ತೊಡೆಗೆ ಹೊಕ್ಕಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ನರ್ತನ್ ಕುಸಿದು ಬಿದ್ದಿದ್ದು, ತನ್ನ ಮೊಬೈಲ್‌ನಿಂದ ತಂಗಿಗೆ ಕರೆ ಮಾಡಿ ತಂದೆ ಗುಂಡು ಹಾರಿಸಿರುವ ವಿಚಾರ ತಿಳಿಸಿದ್ದಾನೆ.
ಆತಂಕಗೊಂಡ ತಂಗಿ, ತಮ್ಮ ಸಂಬಂಧಿಕ ಚೆಂಗಪ್ಪ ಎಂಬುವವರಿಗೆ ಕರೆ ಮಾಡಿ ಮನೆ ಬಳಿ ತೆರಳುವಂತೆ ಹೇಳಿದ್ದಾರೆ.
ಆಸ್ಪತ್ರೆಗೆ ದಾಖಲಿಸಿದ ಸಂಬಂಧಿ: ಕೂಡಲೇ ಸಂಬಂಧಿ ಚೆಂಗಪ್ಪ ನರ್ತನ್ ಮನೆ ಬಂದಿದ್ದಾರೆ. ಸ್ಥಳೀಯರ ನೆರವಿನಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ನರ್ತನ್‌ನನ್ನು ಬಸವೇಶ್ವರನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಆದರೆ, ಚಿಕಿತ್ಸೆ ಫಲಿಸದೆ ಸಂಜೆ ವೇಳೆಗೆ ನರ್ತನ್ ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಆರೋಪಿ ಸುರೇಶ್‌ನನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ತದ ಕಲೆ ಒರೆಸಿ ಸಾಕ್ಷ್ಯ ನಾಶ: ಗುಂಡೇಟಿನಿಂದ ಪುತ್ರ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ, ಇತ್ತ ಮನೆಯಲ್ಲಿ ತಂದೆ ಸುರೇಶ್, ಬಟ್ಟೆಯಲ್ಲಿ ರಕ್ತದ ಕಲೆಗಳನ್ನು ಒರೆಸಿ ಸಾಕ್ಷ್ಯ ನಾಶ ಮಾಡಿ ಆ ಬಟ್ಟೆಯನ್ನು ಸಿಂಕ್‌ನಲ್ಲಿ ತೊಳೆಯುತ್ತಿದ್ದ.
ಇದೇ ಸಮಯಕ್ಕೆ ಪುತ್ರಿ ಮನೆಗೆ ಬಂದಿದ್ದು, ಸಿಂಕ್‌ನಲ್ಲಿ ರಕ್ತಸಿಕ್ತ ಬಟ್ಟೆಯನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಮನೆಗೆ ದೌಡಾಯಿಸಿ ಆರೋಪಿ ಸುರೇಶ್‌ನನ್ನು ಬಂಧಿಸಿದ್ದಾರೆ.
ಕೃತ್ಯಕ್ಕೆ ಬಳಸಿದ್ದ ಶಾರ್ಟ್ ಗನ್‌ನನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಅಸಹಾಯಕ ಸ್ಥಿತಿಯಲ್ಲಿ ತಾಯಿ: ಇನ್ನು ಮನೆಯಲ್ಲಿ ತಂದೆ ಹಾರಿಸಿದ ಗುಂಡು ಹೊಕ್ಕಿ ಮಗ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೆ, ಮತ್ತೊಂದೆಡೆ ಅನಾರೋಗ್ಯ ಪೀಡಿತ ತಾಯಿ ರಮಾ ಹಾಸಿಗೆಯಲ್ಲಿ ಅಸಹಾಯಕರಾಗಿ ಮಲಗಿದ್ದರು.