ಕುರಿಗಾಹಿಗಳ ಮೇಲೆ ಶೂಟೌಟ್: ಮೂವರು ಆರೋಪಿಗಳ ಬಂಧನ

KannadaprabhaNewsNetwork |  
Published : Nov 13, 2026, 01:15 AM IST
6 | Kannada Prabha

ಸಾರಾಂಶ

ಹುಣಸೂರು ತಾಲೂಕು ಶ್ಯಾಮಭೋಗನಹಳ್ಳಿಯ ಶೇಖರೇಗೌಡ ಎಂಬವರ ಪುತ್ರ ಪ್ರಮೋದ (28), ಹಿಂಡಗೂಡ್ಲು ಗ್ರಾಮದ ಸುರೇಶ ಎಂಬವರ ಪುತ್ರ ದೇವರಾಜ (31) ಮತ್ತು ಪಿರಿಯಾಪಟ್ಟಣ ತಾಲೂಕು ಚೌತಿ ಗ್ರಾಮದ ಲೇ.ವೆಂಕಟೇಶಗೌಡ ಎಂಬವರ ಪುತ್ರ ಸಿ.ವಿ.ಸುದೀಪ (26) ಬಂಧಿತ ಆರೋಪಿಗಳು.

ಕನ್ನಡಪ್ರಭ ವಾರ್ತೆ ಮೈಸೂರು

ಕುರಿಗಾಹಿಗಳ ಮೇಲೆ ಶೂಟೌಟ್ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಜಿಲ್ಲೆಯ ಹುಣಸೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹುಣಸೂರು ತಾಲೂಕು ಶ್ಯಾಮಭೋಗನಹಳ್ಳಿಯ ಶೇಖರೇಗೌಡ ಎಂಬವರ ಪುತ್ರ ಪ್ರಮೋದ (28), ಹಿಂಡಗೂಡ್ಲು ಗ್ರಾಮದ ಸುರೇಶ ಎಂಬವರ ಪುತ್ರ ದೇವರಾಜ (31) ಮತ್ತು ಪಿರಿಯಾಪಟ್ಟಣ ತಾಲೂಕು ಚೌತಿ ಗ್ರಾಮದ ಲೇ.ವೆಂಕಟೇಶಗೌಡ ಎಂಬವರ ಪುತ್ರ ಸಿ.ವಿ.ಸುದೀಪ (26) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಒಂದು ಎಸ್.ಬಿ.ಬಿ.ಎಲ್ ಬಂದೂಕು, ಎರಡು ಮದ್ದುಗುಂಡನ್ನು (ಒಂದು ಸಜೀವ, ಒಂದು ಖಾಲಿ ಕೋಕಾ) ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹುಣಸೂರು ತಾಲೂಕು ಹಿಂಡಗೂಡ್ಲು ಗ್ರಾಮ ತೋಟದ ಮನೆಯಲ್ಲಿ ವಾಸವಿರುವ ರಾಮಕೃಷ್ಣಗೌಡ ಅ. ಪಾಪೇಗೌಡ ಎಂಬವರಿಗೆ ಸೇರಿದ ಪರವಾನಗಿ ಇರುವ ಬಂದೂಕು ಎಂದು ತಿಳಿದು ಬಂದಿದ್ದು, ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಬಂದೂಕಿನ ಮಾಲೀಕ ಸದ್ಯ ತಲೆ ಮರೆಸಿಕೊಂಡಿದ್ದು, ಆತನ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮೈಸೂರು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನ.6ರ ಬೆಳಗಿನ ಜಾವಾ ಹುಣಸೂರು ತಾಲೂಕು ಗುರುಪುರ ಗ್ರಾಮದ ಟಿಬೇಟ್ ಐ ವಿಲೇಜ್ ಕ್ಯಾಂಪ್ ಟಿಬೇಟಿಯನ್

ನಿರಾಶ್ರಿತರ ತೆಂಜಿನ್ ಅವರ ಜಮೀನಿನಲ್ಲಿ ಕುರಿ ಮಂದೆ ಸ್ಥಳಕ್ಕೆ ಮೂವರು ಬೈಕಿನಲ್ಲಿ ಬಂದೂಕುನೊಂದಿಗೆ ಬಂದು ಕುರಿಗಳನ್ನು ಕದಿಯಲು ಹೊಂಚು ಹಾಕಿದ್ದಾರೆ. ಕುರಿಗಾಹಿಗಳು ಕೇಳಿದ್ದಕ್ಕೆ ಬೇಟೆಯಾಡಲು ಬಂದಿದ್ದಾಗಿ ತಿಳಿಸಿದ್ದಾರೆ. ಈ ವೇಳೆ ಬೈಕ್ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾಗ ಕುರಿಗಾಹಿಗಳು ಬೈಕನ್ನು ತಡೆದಿದ್ದಾರೆ. ಅವರಲೊಬ್ಬ ಬಂದೂಕುನಿಂದ ಶೂಟ್ ಮಾಡಿದಾಗ ಕುರಿಗಾಹಿಗಳಾದ ಗೋವಿಂದ, ಭೀಮ ಮತ್ತು ಜುಂಜಣ್ಣ ಅವರಿಗೆ ಗುಂಡು ತಗುಲಿ ಮಂಡಿ ಕೆಳಗೆ ಏಟಾಗಿದೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ನಮ್ಮ ಪೊಲೀಸರು, ಮೂವರು ಆರೋಪಿಗಳನ್ನು ಬುಧವಾರ ರಾತ್ರಿ ಬಂಧಿಸಿದ್ದಾರೆ ಎಂದರು.

ಆರೋಪಿ ಪ್ರಮೋದ ಮೇಲೆ ಈ ಹಿಂದೆ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಮರಣಾಂತಿಕ ಹಲ್ಲೆ ಪ್ರಕರಣ, ಪ್ರಮೋದ ಹಾಗೂ ಸುದೀಪ್ ಮೇಲೆ ಬಿಳಿಕೆರೆ ಠಾಣೆಯಲ್ಲಿ ಸುಲಿಗೆ ಪ್ರಕರಣ ಸಹ ದಾಖಲಾಗಿದ್ದು, ಪ್ರಸ್ತುತ ಜಾಮೀನಿನ ಮೇಲೆ ಹೊರ ಬಂದ ಬಳಿಕ ಈ ಕೃತ್ಯ ಎಸಗಿದ್ದಾರೆ ಎಂದರು.

ಜಿಲ್ಲೆಯ ಹೆಚ್ಚುವರಿ ಎಸ್ಪಿಗಳಾದ ಸಿ.ಮಲ್ಲಿಕ್, ಎಲ್.ನಾಗೇಶ್, ಹುಣಸೂರು ಉಪ ವಿಭಾಗದ ಡಿವೈಎಸ್ಪಿ ರವಿ, ಹುಣಸೂರು ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಸಂತೋಷ್ ಕಶ್ಯಪ್, ಎಸ್ಐ ತಾಜುದ್ದೀನ್, ಸಿಬ್ಬಂದಿ ಅರುಣ್, ವಸಂತಕುಮಾರ್, ಪ್ರಸನ್ನ, ನಾರಾಯಣ ಶೆಟ್ಟಿ, ಕೆ.ಪಿ. ನಂದೀಶ, ಇರ್ಫಾನ್, ನಾಗರಾಜು, ಸತೀಶ, ಚೇತನ್, ಟೆಕ್ನಿಕಲ್ ಸೆಲ್ ವಿಭಾಗದ ಎಎಸ್ಐ ವಸಂತ್ ಕುಮಾರ್ ಈ ಪತ್ತೆ ಮಾಡಿದ್ದಾರೆ.ಬಾಳೆ ತೋಟ, ಮನೆಯಲ್ಲಿ ಡ್ರಗ್ಸ್ ಪತ್ತೆಯಾಗಿಲ್ಲ, ಆದರೂ ಹೆಚ್ಚಿನ ತನಿಖೆಕನ್ನಡಪ್ರಭ ವಾರ್ತೆ ಮೈಸೂರುಡ್ರಗ್ಸ್ ಪ್ರಕರಣದ ಆರೋಪಿ ನಂಜನಗೂಡು ತಾಲೂಕಿನಲ್ಲಿರುವ ತೋಟ, ಮನೆಯನ್ನು ಪರಶೀಲಿಸಿದಾಗ ಗಾಂಜಾ ಬೆಳೆದಿಲ್ಲ‌, ಮಾದಕ ವಸ್ತುಗಳ ಶೇಖರಣೆ ಮಾಡಿಲ್ಲ. ಆದರೂ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ಕೇರಳದ ಎರ್ನಾಕುಲಂನಲ್ಲಿ ದಾಖಲಾದ ಡ್ರಗ್ಸ್ ಪ್ರಕರಣದ ಆರೋಪಿ ದಾನೇಷ್ ನಾಯರ್ ಎಂಬಾತ ಅಲೆಪ್ಪಿ ಊರಿನವನು.ಆತ ವಿದೇಶದಲ್ಲಿ ವ್ಯಾಸಂಗ ಮಾಡಿಕೊಂಡು ಬಂದಿದ್ದ. ಕಳೆದ ಎರಡು ವರ್ಷಗಳಿಂದ ನಂಜನಗೂಡು ತಾಲೂಕಿನ ಬಳಿ ತೋಟ ಭೋಗ್ಯಕ್ಕೆ ತೆಗೆದುಕೊಂಡು ಬಾಳೆ ಹಣ್ಣು ವ್ಯಾಪಾರ ಮಾಡುತ್ತಿದ್ದ. ಕಳೆದ ಆರು ತಿಂಗಳಿಂದ ನಂಜನಗೂಡಿನಲ್ಲಿ ಮನೆ ಮಾಡಿದ್ದ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆತನ ಬಳಿ 800 ಎಂಎಲ್ ಹ್ಯಾಶೀಶ್ ಆಯಿಲ್, 8 ಗ್ರಾಂ ಎಂಡಿಎಂಎ ಸಿಕ್ಕಿದೆ. ಮಾದಕ ವಸ್ತು ಸಿಕ್ಕಿದೆ. ಬೆಂಗಳೂರಿನಿಂದ ಮಾದಕ‌ವಸ್ತು ತೆಗೆದುಕೊಂಡು ಬಂದಿದ್ದಾಗಿ ಕೇರಳ ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾನೆ. ಆತ ಕೇರಳದವನು. ಕೇರಳ ರಾಜ್ಯದ ಹಲವರು ನಮ್ಮಲ್ಲಿ ತೋಟ ಮಾಡಿಕೊಂಡಿದ್ದಾರೆ. ಈತ ಸಹ ಅದೇ ರೀತಿ ತೋಟ ಮಾಡಿಕೊಂಡು ಇಂತಹ ಕೆಲಸ ಮಾಡುತ್ತಿದ್ದ. ಈಗಾಗಲೇ ಆತ ಭೋಗ್ಯ ಮಾಡಿಕೊಂಡಿದ್ದ ತೋಟ ಮತ್ತು ಮನೆ ಪರಿಶೀಲನೆ ಮಾಡಿದ್ದೇವೆ. ಏನು ಪತ್ತೆಯಾಗಿಲ್ಲ. ಎಲ್ಲಾ ರೀತಿಯ ತನಿಖೆಯಾಗುತ್ತಿದೆ ಎಂದು ವಿವರಿಸಿದರು.ಕಳೆದ 6 ತಿಂಗಳಿಂದ ಆತ ಯಾರ್ಯಾರ ಸಂಪರ್ಕದಲ್ಲಿದ್ದ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಬಾಳೆಗೊನೆಯಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಮುಂದಿನ ದಿನಗಳಲ್ಲಿ ಆತನನ್ನು ನಾವು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡುತ್ತೇವೆ ಎಂದರು.

215 ಪ್ರಕರಣಗಳು ದಾಖಲು:ಜಿಲ್ಲೆಯಲ್ಲಿ ಈವರೆಗೂ 215 ಮಾದಕ ವಸ್ತು ಸಾಗಾಣಿಕೆ ಮತ್ತು ಸೇವನೆ ಸಂಬಂಧ ಪ್ರಕರಣ ದಾಖಲಾಗಿದೆ. 20 ರಿಂದ 30 ವರ್ಷದೊಳಿಗನವರು ಹೆಚ್ಚು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿದ್ದಾರೆ. ಇವರಲ್ಲಿ ಕಾಲೇಜು ಬಿಟ್ಟವರು, ಕೆಲಸ ಇಲ್ಲದವರು ಹೆಚ್ಚಿದ್ದಾರೆ ಎಂದರು.

ಜಮೀನು ಗುತ್ತಿಗೆ ನೀಡುವ ರೈತರು ಅಕ್ರಮ ಚಟುವಟಿಕೆ ನಡೆದರೇ ತೊಂದರೆ ಆಗುತ್ತದೆ. ಹೀಗಾಗಿ, ಯಾವ ಉದ್ದೇಶಕ್ಕಾಗಿ ಜಮೀನು ಗುತ್ತಿಗೆ ನೀಡಲಾಗಿದೆಯೋ ಅದಕ್ಕೆ ಮಾತ್ರ ಬಳಸುವಂತೆ ನೋಡಿಕೊಳ್ಳಬೇಕು. ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು.- ಮಲ್ಲಿಕಾರ್ಜುನ ಬಾಲದಂಡಿ, ಎಸ್ಪಿ, ಮೈಸೂರು

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕ್ಷುಲ್ಲಕ ಕಾರಣಕ್ಕೆ ಜಾತ್ರೆಯಲ್ಲಿ ಕಲ್ಲು ತೂರಾಟ, ಮೂವರಿಗೆ ಗಂಭೀರ ಗಾಯ
ಹಾಕಿ ಟೀಂ ಮಾಜಿ ಕ್ಯಾಪ್ಟನ್‌ ಮನೆಗೆ ಕನ್ನ ಹಾಕಿ ಒಲಿಂಪಿಕ್‌ ಪದಕ ಕದ್ದ ಇಬ್ಬರ ಸೆರೆ