ಇತ್ತೀಚಿಗೆ ಭಾರತ ಹಾಕಿ ತಂಡದ ಮಾಜಿ ನಾಯಕ ಎಂ.ಎಂ.ಸೋಮಯ್ಯ ಅವರ ಮನೆಗೆ ಕನ್ನ ಹಾಕಿ ಅಂತಾರಾಷ್ಟ್ರೀಯ ಪದಕಗಳು ಸೇರಿ ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ದುಷ್ಕರ್ಮಿಗಳನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚಿಗೆ ಭಾರತ ಹಾಕಿ ತಂಡದ ಮಾಜಿ ನಾಯಕ ಎಂ.ಎಂ.ಸೋಮಯ್ಯ ಅವರ ಮನೆಗೆ ಕನ್ನ ಹಾಕಿ ಅಂತಾರಾಷ್ಟ್ರೀಯ ಪದಕಗಳು ಸೇರಿ ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ದುಷ್ಕರ್ಮಿಗಳನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.

ಇಟ್ಟುಮಡುವಿನ ಮಾಣಿಕ್ಯ ಅಲಿಯಾಸ್ ಮಣಿಕಂಠ ಹಾಗೂ ಭರತ್ ಬಂಧಿತರಾಗಿದ್ದು, ಆರೋಪಿಗಳಿಂದ ಒಲಿಪಿಂಕ್ ಪದಕ ಸೇರಿ 8 ಅಂತಾರಾಷ್ಟ್ರೀಯ ಪದಕಗಳು, 1 ಒಲಪಿಂಕ್ ಬ್ಯಾಗ್, 1 ಕೊಡಗು ಕತ್ತಿ ಹಾಗೂ ಕ್ಯಾಮರಾ ಜಪ್ತಿ ಮಾಡಲಾಗಿದೆ. ತಪ್ಪಿಸಿಕೊಂಡಿರುವ ಮತ್ತೊಬ್ಬನಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.ಕೆಲ ದಿನಗಳ ಹಿಂದೆ ಎಚ್‌ಎಎಲ್‌ 3ನೇ ಹಂತದ ನ್ಯೂ ತಿಪ್ಪಸಂದ್ರದಲ್ಲಿರುವ ಸೋಮಯ್ಯ ಅವರಿಗೆ ಮನೆಯಲ್ಲಿ ಕಳ್ಳತನ ನಡೆದಿತ್ತು. ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಣಿಕಂಠ ಹಾಗೂ ಭರತ್ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಮಣಿಕಂಠನ ವಿರುದ್ಧ ತಮಿಳುನಾಡು ಹಾಗೂ ಕರ್ನಾಟಕ ವಿವಿಧ ಠಾಣೆಗಳಲ್ಲಿ 33 ಪ್ರಕರಣಗಳಿವೆ. ಅದೇ ರೀತಿ ಭರತ್ ವಿರುದ್ಧ ಕೊಲೆ ಸೇರಿ ಮೂರು ಪ್ರಕರಣಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಅ.25 ರಂದು ತಮ್ಮ ಕುಟುಂಬ ಸಮೇತ ತಮ್ಮೂರಿಗೆ ಸೋಮಯ್ಯ ತೆರಳಿದ್ದ ವೇಳೆ ಮನೆ ಬೀಗ ಮುರಿದು ಇವರು ಚಿನ್ನದ ಪದಕ ಸೇರಿದಂತೆ ಕೈಗೆ ಸಿಕ್ಕಿದ್ದನ್ನು ದೋಚಿದ್ದರು. 3 ದಿನಗಳ ಬಳಿಕ ಮನೆಗೆ ಸೋಮಯ್ಯ ಕುಟುಂಬ ಮರಳಿದಾಗ ಮನೆಗಳ್ಳತನ ಕೃತ್ಯ ಬೆಳಕಿಗೆ ಬಂದಿತ್ತು. ಈ ಬಗ್ಗೆ ಇಂದಿರಾನಗರ ಠಾಣೆಗೆ ಅವರು ದೂರು ನೀಡಿದರು. ದುಷ್ಕರ್ಮಿಗಳ ಪತ್ತೆಗೆ ಎಂಟು ತಂಡಗಳನ್ನು ಪೂರ್ವ ವಿಭಾಗದ ಡಿಸಿಪಿ ವಿಕ್ರಂ ಅಮಟೆ ರಚಿಸಿದರು. ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

----

ಕದ್ದ ಪದಕ ರಾಜಾಜಿನಗರದಲ್ಲಿ ಮಾರಾಟ

ಸೋಮಯ್ಯ ಅವರ ಮನೆಯಲ್ಲಿ ಕಳವು ಮಾಡಿದ್ದ ಅಂತಾರಾಷ್ಟ್ರೀಯ ಮಟ್ಟದ ಪದಕಗಳ ಪೈಕಿ ಒಂದು ಚಿನ್ನ ಹಾಗೂ ಮತ್ತೊಂದು ಬೆಳ್ಳಿ ಪದಕವನ್ನು ರಾಜಾಜಿನಗರದ ಗೋಲ್ಡ್‌ ಕಂಪನಿಗೆ ಆರೋಪಿಗಳು ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.