ಚಿರತೆಗಳ ದಾಳಿಗೆ ಸಿಲುಕಿ 30 ಕುರಿಗಳು ಸಾವನ್ನಪ್ಪಿ, 10 ಕುರಿಗಳು ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯಿಂದ ಲಕ್ಷಾಂತರ ರು. ನಷ್ಟ ಸಂಭವಿಸಿರುವ ಘಟನೆ ನಾಗಮಂಗಲ ತಾಲೂಕಿನ ಕೋಟೆಬೆಟ್ಟ ಗ್ರಾಮದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಚಿರತೆಗಳ ದಾಳಿಗೆ ಸಿಲುಕಿ 30 ಕುರಿಗಳು ಸಾವನ್ನಪ್ಪಿ, 10 ಕುರಿಗಳು ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯಿಂದ ಲಕ್ಷಾಂತರ ರು. ನಷ್ಟ ಸಂಭವಿಸಿರುವ ಘಟನೆ ತಾಲೂಕಿನ ಕೋಟೆಬೆಟ್ಟ ಗ್ರಾಮದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.ಗ್ರಾಮದ ವೆಂಕಟ ಲಕ್ಷ್ಮಮ್ಮ, ಮಂಜಮ್ಮ ಮತ್ತು ಭಾಗ್ಯಮ್ಮ ಅವರಿಗೆ ಸೇರಿದ ಒಟ್ಟು 60 ಕುರಿಗಳನ್ನು ಕೊಟ್ಟಿಗೆಯಲ್ಲಿ ಕೂಡಿ ಹಾಕಲಾಗಿತ್ತು. ಸೋಮವಾರ ರಾತ್ರಿ ಭಾಗ್ಯಮ್ಮ ಅವರಿಗೆ ಸೇರಿ ಕುರಿಗಳ ಮೇಲೆ ದಾಳಿ ನಡೆಸಿರುವ ಚಿರತೆಗಳು 10 ಮರಿ ಮತ್ತು 20 ಕುರಿಗಳನ್ನು ಕಚ್ಚಿ ಸಾಯಿಸಿವೆ. 10ಕ್ಕೂ ಹೆಚ್ಚು ಕುರಿಗಳನ್ನು ಕಚ್ಚಿ ಗಾಯಗೊಳಿಸಿವೆ. ಚಿರತೆ ದಾಳಿಯಿಂದ ಗಾಬರಿಗೊಂಡ ಇನ್ನೂ ಕೆಲ ಕುರಿಗಳು ಕೊಟ್ಟಿಗೆಯಲ್ಲಿ ಓಡಾಡಿ ಉಸಿರುಕಟ್ಟಿ ಜೀವಬಿಟ್ಟಿವೆ.ತಡರಾತ್ರಿ ಸಮಯದಲ್ಲಿ ಕೊಟ್ಟಿಗೆಯಲ್ಲಿ ಕುರಿಗಳ ಚೀರಾಟದ ಶಬ್ದ ಕೇಳಿ ಭಾಗ್ಯಮ್ಮ ಮತ್ತು ರವಿಕುಮಾರ್ ಬಂದು ನೋಡಲಾಗಿ ಚಿರತೆಗಳು ದಾಳಿ ನಡೆಸಿರುವುದು ಗೊತ್ತಾಗಿದೆ. ಕಡುಬಡ ಕುಟುಂಬದ ಭಾಗ್ಯಮ್ಮ ಅವರಿಗೆ ಗ್ರಾಮದಲ್ಲಿ ಕನಿಷ್ಠ ಒಂದು ಗುಂಟೆ ಜಮೀನಿಲ್ಲ. ಕುರಿ ಸಾಕಾಣಿಕೆಯನ್ನೇ ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಚಿರತೆಗಳು ದಾಳಿ ನಡೆಸಿ 30 ಕುರಿಗಳನ್ನು ಬಲಿ ಪಡೆದಿರುವುದು ಬಡ ಕುಟುಂಬಕ್ಕೆ ದೊಡ್ಡ ಆರ್ಥಿಕ ಹೊಡೆತ ಬಿದ್ದಂತಾಗಿದೆ.
ಘಟನೆ ನಡೆದ ಸ್ಥಳಕ್ಕೆ ಅರಣ್ಯ, ಕಂದಾಯ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಭೇಟಿ ಕೊಚ್ಚು ಪರಿಶೀಲನೆ ನಡೆಸಿದರು. ನಂತರ ಪಶು ಇಲಾಖೆ ವೈದ್ಯರು ಆಗಮಿಸಿ ಮೃತಪಟ್ಟಿದ್ದ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುರಿಗಳನ್ನು ಸಾಮೂಹಿಕ ಅಂತ್ಯ ಸಂಸ್ಕಾರ ನೆರೆವೇರಿಸಲಾಯಿತು.ಈ ವೇಳೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮವೇ ಮರುಕ ವ್ಯಕ್ತಪಡಿಸಿತು. ಹಲವು ಮುಖಂಡರು ಹಾಗೂ ಗ್ರಾಮಸ್ಥರು ಘಟನೆ ಸ್ಥಳಕ್ಕೆ ಭೇಟಿ ಕೊಟ್ಟು ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಅರಣ್ಯ ಇಲಾಖೆ ನಿರ್ಲಕ್ಷ್ಯ:ಕೋಟೆಬೆಟ್ಟದ ಆಸುಪಾಸಿನಲ್ಲಿ ಬೆಟ್ಟ ಗುಡ್ಡ ದಟ್ಟ ಮರ ಗಿಡಗಳಿದ್ದು, ಆಗಾಗ್ಗೆ ಎರಡು ಮೂರು ಚಿರತೆಗಳು ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೋಟೆ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾರಕ್ಕೊಂದಾದರೂ ಪ್ರಾಣಿಗಳು ಚಿರತೆ ದಾಳಿಗೆ ಬಲಿಯಾಗುತ್ತಿವೆ. ಇನ್ನು ಮುಂದಾದರೂ ಅಧಿಕಾರಿಗಳು ಬೋನಿಟ್ಟು ಆಡು, ಕುರಿ ಸೇರಿದಂತೆ ಸಾಕು ಪ್ರಾಣಿಗಳನ್ನು ಬಲಿತೆಗೆದುಕೊಳ್ಳುತ್ತಿರುವ ಚಿರತೆಗಳನ್ನು ಸೆರೆಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.ಪರಿಹಾರ ನೀಡಲಿ:
ಚಿರತೆ ದಾಳಿಯಿಂ 30 ಕುರಿಗಳು ಮೃತಪಟ್ಟಿದ್ದು, 10 ಕುರಿಗಳು ಗಂಭೀರವಾಗಿ ಗಾಯಗೊಂಡಿರುವುದರಿಂದ ಭಾಗ್ಯಮ್ಮ ಅವರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ಈ ಬಡ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.