ನಗರದ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರಿದಿದ್ದು, ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ 34 ಮಂದಿಯನ್ನು ಬಂಧಿಸಿ 12.61 ಕೋಟಿ ರು.ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಹೆಬ್ಬಾಳ, ಕೋರಮಂಗಲ, ಡಿ.ಜೆ.ಹಳ್ಳಿ, ಮಹಾಲಕ್ಷ್ಮೀ, ಯಶವಂತಪುರ, ಆಡುಗೋಡಿ, ಹೆಣ್ಣೂರು, ಗೋವಿಂದಪುರ, ಬೇಗೂರು, ಹೆಬ್ಬಗೋಡಿ ಹಾಗೂ ಬಂಡೇಪಾಳ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ 5.519 ಕೆಜಿ ಎಂಡಿಎಂಎ, 46.486 ಕೆಜಿ ಗಾಂಜಾ, 72.82 ಗ್ರಾಂ ಕೊಕೇನ್‌ ಹಾಗೂ 1.5 ಲೀ.ಹ್ಯಾಶಿಶ್ ಆಯಿಲ್‌ ಸೇರಿ ಒಟ್ಟು 6.30 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಪ್ರಸುತ್ತ ಡ್ರಗ್ಸ್‌ಗಳ ಮಾರುಕಟ್ಟೆ ಮೌಲ್ಯ 12.61 ಕೋಟಿ ರು. ಇದೆ.

-5.519 ಕೆಜಿ ಎಂಡಿಎಂಎ, 46.486 ಕೆಜಿ ಗಾಂಜಾ, 72.82 ಗ್ರಾಂ ಕೊಕೇನ್‌ ಜಪ್ತಿ । 2 ವಿದೇಶಿಯರು, 9 ಹೊರರಾಜ್ಯ ಮಂದಿ, 23 ಸ್ಥಳೀಯರ ಸೆರೆ---ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರಿದಿದ್ದು, ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ 34 ಮಂದಿಯನ್ನು ಬಂಧಿಸಿ 12.61 ಕೋಟಿ ರು.ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಹೆಬ್ಬಾಳ, ಕೋರಮಂಗಲ, ಡಿ.ಜೆ.ಹಳ್ಳಿ, ಮಹಾಲಕ್ಷ್ಮೀ, ಯಶವಂತಪುರ, ಆಡುಗೋಡಿ, ಹೆಣ್ಣೂರು, ಗೋವಿಂದಪುರ, ಬೇಗೂರು, ಹೆಬ್ಬಗೋಡಿ ಹಾಗೂ ಬಂಡೇಪಾಳ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ 5.519 ಕೆಜಿ ಎಂಡಿಎಂಎ, 46.486 ಕೆಜಿ ಗಾಂಜಾ, 72.82 ಗ್ರಾಂ ಕೊಕೇನ್‌ ಹಾಗೂ 1.5 ಲೀ.ಹ್ಯಾಶಿಶ್ ಆಯಿಲ್‌ ಸೇರಿ ಒಟ್ಟು 6.30 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಪ್ರಸುತ್ತ ಡ್ರಗ್ಸ್‌ಗಳ ಮಾರುಕಟ್ಟೆ ಮೌಲ್ಯ 12.61 ಕೋಟಿ ರು. ಇದೆ.

ಬಂಧಿತ 34 ಜನರ ಪೈಕಿ ಇಬ್ಬರು ವಿದೇಶಿಯರು, 9 ಮಂದಿ ಹೊರ ರಾಜ್ಯ ಹಾಗೂ 23 ಸ್ಥಳೀಯರು ಸೇರಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಹೆಚ್ಚಿನ ಹಣ ಸಂಪಾದಿಸಲು ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಕಡಿಮೆ ಬೆಲೆಗೆ ಡ್ರಗ್ಸ್ ತಂದು ನಗರದಲ್ಲಿ ಮಾರಾಟ ಮಾಡಿರುವುದಾಗಿ ಹೇಳಿಕೆ ಕೊಟ್ಟಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಇದರಲ್ಲಿ ಕೋರಮಂಗಲ-1.68 ಕೋಟಿ ರು, ಡಿ.ಜೆ.ಹಳ್ಳಿ-1.66 ಕೋಟಿ ರು, ಮಹಾಲಕ್ಷ್ಮೀ ಲೇಔಟ್‌-1.24 ಕೋಟಿ ರು, ಯಶವಂತಪುರ-73 ಲಕ್ಷ ರು, ಆಡುಗೋಡಿ-27.20 ಲಕ್ಷ ರು, ಹೆಣ್ಣೂರು-21.40 ಲಕ್ಷ ರು, ಗೋವಿಂದಪುರ-17 ಲಕ್ಷ ರು, ಬೇಗೂರು-13.74 ಲಕ್ಷ ರು, ಹೆಬ್ಬಗೋಡಿ-12.56 ಲಕ್ಷ ರು ಹಾಗೂ ಬಂಡೇಪಾಳ್ಯ ಠಾಣೆ ಪೊಲೀಸರು 6 ಲಕ್ಷ ರು ಬೆಲೆಯ ಡ್ರಗ್ಸ್ ಜಪ್ತಿ ಮಾಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

---

ಹೆಬ್ಬಾಳ ಪೊಲೀಸರ ಬಲೆಗೆ ನೈಜೀರಿಯಾ ಪೆಡ್ಲರ್‌

ರಾಜಧಾನಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬ ಹೆಬ್ಬಾಳ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನೈಜೀರಿಯಾ ಮೂಲದ ಒಬಿನ್ನಾ ಗಾಡ್ವಿನ್‌ ಬಂಧಿತನಾಗಿದ್ದು, ಆರೋಪಿಯಿಂದ 6 ಕೋಟಿ ರು.ಮೌಲ್ಯದ 3.065 ಕೆಜಿ ಎಂಡಿಎಂಎ ಜಪ್ತಿ ಮಾಡಿದ್ದಾರೆ. ದೆಹಲಿಯಿಂದ ಬಂದು ಮೈಸೂರಿನಲ್ಲಿ ಆತ ತಲೆಮರೆಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಡಿಸಿಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ ಬೈರ ಹಾಗೂ ಪಿಎಸ್‌ಐ ವಿನೋದ್ ಜಿರಗಾಳೆ ತಂಡ ಬಂಧಿಸಿದೆ. ಕಳೆದ 8 ತಿಂಗಳಿನಿಂದ ಇದುವರೆಗೆ ಈತನ ಸಹಚರಿಂದ 51 ಕೋಟಿ ರು.ಡ್ರಗ್ಸ್ ಜಪ್ತಿಯಾಗಿದೆ.

15 ವರ್ಷಗಳ ಹಿಂದೆ ಬ್ಯುಸಿನೆಸ್ ವೀಸಾದಡಿ ನಗರಕ್ಕೆ ಬಂದಿದ್ದ ಗಾಡ್ವಿನ್, ದೆಹಲಿಯಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ಧ. 3 ಹೋಟೆಲ್‌ಗಳನ್ನು ತೆರೆದು ಉದ್ಯಮ ಶುರು ಮಾಡಿದ್ದ. ಆದರೆ ಸುಲಭವಾಗಿ ಹಣ ಸಂಪಾದಿಸಲು ಗಾಡ್ವಿನ್ ಡ್ರಗ್ಸ್ ದಂಧೆಗಿಳಿದಿದ್ದಾನೆ. ಉತ್ತರ ಪ್ರದೇಶ ಮೂಲದ ಯುವತಿ ಜತೆ ಆತನಿಗೆ ವಿವಾಹವಾಗಿದೆ. ಅಂತಾರಾಷ್ಟ್ರೀಯ ಡ್ರಗ್ಸ್ ದಂಧೆಕೋರರಿಂದ ಕಡಿಮೆ ಬೆಲೆಗೆ ಎಂಡಿಎಂಎ ಖರೀದಿಸಿ ಬಳಿಕ ಅದನ್ನು ಬೆಂಗಳೂರಿಗೆ ಆತ ಸರಬರಾಜು ಮಾಡುತ್ತಿದ್ದ. 7 ತಿಂಗಳ ಹಿಂದೆ ಚೂಡಿದಾರ್‌ ಉಡುಪಿನಲ್ಲಿ ಡ್ರಗ್ಸ್ ಅಡಗಿಸಿ ತಂದಾಗ ಆತನ ಸಹಚರರನ್ನು ಮೊದಲು ಹೆಬ್ಬಾಳ ಪೊಲೀಸರು ಸೆರೆ ಹಿಡಿದಿದ್ದರು. ನಂತರ ಇದೇ ತಂಡದಲ್ಲಿ ಇನ್ನು ಕೆಲವರನ್ನು ಅವರು ಸೆರೆ ಹಿಡಿದಿದ್ದರು.

ಇತ್ತೀಚಿಗೆ ದೆಹಲಿಯಿಂದ ಬಂದು ಮೈಸೂರಿನಲ್ಲಿ ಗಾಡ್ವಿನ್ ಆಶ್ರಯ ಪಡೆಯಲು ಯತ್ನಿಸಿದ್ದ. ಬಾಡಿಗೆ ಮನೆಯನ್ನು ಸಹ ಆತ ಮಾಡಿದ್ದ. ಅಷ್ಟರಲ್ಲಿ ಖಚಿತ ಮಾಹಿತಿ ಪಡೆದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮತ್ತೊಂದು ಕಾರ್ಯಾಚರಣೆಯಲ್ಲಿ ಮತ್ತಿಬ್ಬರು ಗಾಂಜಾ ಪೆಡ್ಲರ್‌ಗಳನ್ನು ಹೆಬ್ಬಾಳ ಪೊಲೀಸರು ಸೆರೆ ಹಿಡಿದಿದ್ದಾರೆ. ಕಲಾಸಿಪಾಳ್ಯದ ಇಮ್ರಾನ್ ಪಾಷ ಹಾಗೂ ಸಹರೂಲ್ ಇಸ್ಲಾಂ ಬಂಧಿತರಾಗಿದ್ದು, ಆರೋಪಿಗಳಿಂದ 16 ಲಕ್ಷ ರು ಬೆಲೆಯ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಒಡಿಶಾದಿಂದ ಕಡಿಮೆ ಬೆಲೆಗೆ ಗಾಂಜಾ ತಂದು ನಗರದಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

---

ಕೆಐಎನಲ್ಲಿ 23.99 ಕೋಟಿ

ರು.ಮೌಲ್ಯದ ಡ್ರಗ್ಸ್ ವಶಕ್ಕೆ

ಅಂತಾರಾಷ್ಟ್ರೀಯ ಡ್ರಗ್ಸ್ ದಂಧೆ ವಿರುದ್ಧ ಕಸ್ಟಮ್ಸ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿದೇಶದಿಂದ ಪೂರೈಕೆ ಆಗುತ್ತಿದ್ದ 23.99 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಿದ್ದಾರೆ. 2 ದಿನಗಳ ಅವಧಿಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, 7 ಮಂದಿ ಬ್ಯಾಂಕಾಂಕ್ ಪ್ರವಾಸಿಗರನ್ನು ಪ್ರತ್ಯೇಕವಾಗಿ ಬಂಧಿಸಿ 23.99 ಕೋಟಿ ರು.ಬೆಲೆಯ ಹೈಡ್ರೋ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ನ.8ರಂದು ಕೆಐಎಗೆ ಬಂದಿಳಿದ ಪ್ರಯಾಣಿಕನಿಂದ 3.15 ಕೋಟಿ ರು.ಮೌಲ್ಯದ 9 ಕೆಜಿ, ಅದೇ ದಿನ ಮತ್ತೊಬ್ಬನಿಂದ 3.12 ಕೋಟಿ ರು.ಮೌಲ್ಯದ 8.9 ಕೆಜಿ ಹಾಗೂ ನ.6ರಂದು ಒಬ್ಬನಿಂದ 5.51 ಕೋಟಿ ರು.ಬೆಲೆಯ 15.750 ಕೆಜಿ, ಮತ್ತೊಬ್ಬನಿಂದ 4.51 ಕೋಟಿ ರು.12.890 ಕೆಜಿ, ಮೂರನೇ ಪೆಡ್ಲರ್‌ನಿಂದ 4.20 ಕೋಟಿ ರು.ಬೆಲೆಯ 12 ಕೆಜಿ ಹಾಗೂ ಕೊನೆಯವನಿಂದ 3.50 ಕೋಟಿ ರು. ಸೇರಿದಂತೆ ಒಟ್ಟು 23.99 ಕೋಟಿ ರು. ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದೆ.