ರಾಜಾಜಿನಗರದ ಒಂದೇ ಕುಟುಂಬದ 7 ಮಂದಿ ನರಮೇಧ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಅಪ್ರಾಪ್ತ ಬಾಲಕಿ ಈಗ ಪ್ರಾಪ್ತ ವಯಸ್ಸಿಗೆ ಕಾಲಿಟ್ಟಿಡುವ ಮೂಲಕ ಕಾನೂನಿನ ಜಿಜ್ಞಾಸೆ ಮೂಡಿದೆ. ತನ್ನ ಕುಟುಂಬದ ಭೀಭತ್ಸ ಹತ್ಯಾಕಾಂಡದಲ್ಲಿ ತನ್ನ ತಂದೆಗೆ ನೆರವಾದ ಆರೋಪಕ್ಕೆ ಬಾಲಕಿ ತುತ್ತಾಗಿದ್ದಾಳೆ. ಹತ್ಯೆ ಕೃತ್ಯ ನಡೆದಾಗ ಆಕೆಗೆ 17 ವರ್ಷ ವಯಸ್ಸಿತ್ತು. ನ.8ಕ್ಕೆ ಆಕೆ 18ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಆದರೆ ಕೃತ್ಯ ನಡೆದ ವೇಳೆ ಆಕೆ ಅಪ್ರಾಪ್ತ ವಯಸ್ಸಿನವಳಾ ಗಿದ್ದರಿಂದ ಕಠಿಣ ಕಾನೂನು ಕ್ರಮದಿಂದ ರಕ್ಷಣೆ ಸಿಗಬಹುದು ಎಂಬ ಮಾತುಗಳು ಕೇಳಿ ಬಂದಿವೆ.

ರುಬ್ಬುಗುಂಡಿನಿಂದ ಹೊಡೆದು ಏಳು ಮಂದಿ ಹತ್ಯೆ ಕೇಸ್‌-ಕೊಲೆ, ಮೃತದೇಹ ಸಾಗಿಸಲು ತಂದೆಗೆ ನೆರವು । ಅಪ್ರಾಪ್ತೆ ಆಗಿದ್ದರಿಂದ ಕಾನೂನು ಕ್ರಮದಿಂದ ರಕ್ಷಣೆ? । ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಾಜಿನಗರದ ಒಂದೇ ಕುಟುಂಬದ 7 ಮಂದಿ ನರಮೇಧ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಅಪ್ರಾಪ್ತ ಬಾಲಕಿ ಈಗ ಪ್ರಾಪ್ತ ವಯಸ್ಸಿಗೆ ಕಾಲಿಟ್ಟಿಡುವ ಮೂಲಕ ಕಾನೂನಿನ ಜಿಜ್ಞಾಸೆ ಮೂಡಿದೆ. ತನ್ನ ಕುಟುಂಬದ ಭೀಭತ್ಸ ಹತ್ಯಾಕಾಂಡದಲ್ಲಿ ತನ್ನ ತಂದೆಗೆ ನೆರವಾದ ಆರೋಪಕ್ಕೆ ಬಾಲಕಿ ತುತ್ತಾಗಿದ್ದಾಳೆ. ಹತ್ಯೆ ಕೃತ್ಯ ನಡೆದಾಗ ಆಕೆಗೆ 17 ವರ್ಷ ವಯಸ್ಸಿತ್ತು. ನ.8ಕ್ಕೆ ಆಕೆ 18ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಆದರೆ ಕೃತ್ಯ ನಡೆದ ವೇಳೆ ಆಕೆ ಅಪ್ರಾಪ್ತ ವಯಸ್ಸಿನವಳಾ ಗಿದ್ದರಿಂದ ಕಠಿಣ ಕಾನೂನು ಕ್ರಮದಿಂದ ರಕ್ಷಣೆ ಸಿಗಬಹುದು ಎಂಬ ಮಾತುಗಳು ಕೇಳಿ ಬಂದಿವೆ.

ಈ ಕಾನೂನು ಜಿಜ್ಞಾಸೆ ಬಗ್ಗೆ ತಜ್ಞರ ಅಭಿಪ್ರಾಯವನ್ನು ಅಧಿಕಾರಿ ಕೋರಿದ್ದಾರೆ. ಕೇವಲ 20 ದಿನಗಳ ಅಂತರವನ್ನು ಪ್ರಾಪ್ತ ವಯಸ್ಸಿನವಳಾಗಿದ್ದು, ಆಕೆಗೆ ತಾನೆಸುಗವ ಕೃತ್ಯದ ಬಗ್ಗೆ ಅರಿವಿತ್ತು ಎಂಬುದು ಖಚಿತವಾಗಿದೆ. ಈ ವಿಚಾರವನ್ನು ಕಾನೂನು ಮೂಲಕ ನಿರೂಪಿಸುವ ಬಗ್ಗೆ ಪೊಲೀಸರು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ತನ್ನ ತಾಯಿ, ಅಜ್ಜಿ ಹಾಗೂ ಸೋದರ ಮಾವಂದಿರ ಕುಟುಂಬಗಳ ಹತ್ಯೆಗೆ ತಂದೆಗೆ ಅಪ್ರಾಪ್ತ ಬಾಲಕಿ ನೆರವಾಗಿದ್ದಳು. ತನ್ನ ಮನೆಗೆ ಮಾಂಸದ ಅಡುಗೆ ತಯಾರಿಕೆಗೆ ಅಜ್ಜಿ ಹಾಗೂ ಸೋದರ ಮಾವಂದಿರ ಕುಟುಂಬಗಳನ್ನು ಆಕೆಯ ಆಹ್ವಾನಿಸಿದ್ದಳು. ಅಲ್ಲದೆ ಹತ್ಯೆ ಬಳಿಕ ಮೃತದೇಹಗಳ ಸಾಗಾಣಿಕೆಗೆ ಸಹ ಸಾಥ್ ಕೊಟ್ಟಿದ್ದಳು ಎಂಬ ಆರೋಪ ಕೇಳಿ ಬಂದಿದೆ. ಈಗಾಗಲೇ ಆಕೆಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಮಹಜರ್ ನಡೆಸಿದ ಪೊಲೀಸರು: 7 ಮಂದಿಯ ನರಮೇಧ ನಡೆದಿದ್ದ ರಾಜಾಜಿನಗರದ ಬಾಷ್ಯಂ ಸರ್ಕಲ್ ಸಮೀಪದ ಆರೋಪಿ ಇಂದುಶೇಖರ್ ಮನೆಯಲ್ಲಿ ಪೊಲೀಸರು ಮಹಜರ್ ನಡೆಸಿದ್ದಾರೆ. ತಂದೆ-ಮಗಳನ್ನು ಕರೆತಂದು ಕೃತ್ಯ ನಡೆದ ಸ್ಥಳದಲ್ಲಿ ಪೊಲೀಸರು ಮಹಜರ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

......ತ್ವರಿತ ಪಥ ನ್ಯಾಯಾಲಯಕ್ಕೆ ಕೋರಿಕೆ

ಒಂದೇ ಕುಟುಂಬದ 7 ಮಂದಿ ನರಮೇಧ ಪ್ರಕರಣದ ಶೀಘ್ರ ವಿಚಾರಣೆ ನಡೆಸಿ ಇತ್ಯರ್ಥಕ್ಕೆ ತ್ವರಿತ ಪಥ ನ್ಯಾಯಾಲಯ ಸ್ಥಾಪಿಸುವಂತೆ ಸರ್ಕಾರಕ್ಕೆ ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಏಳು ಜನರ ಕೊಲೆ ಪ್ರಕರಣದ ಕುರಿತು ಕೌಟುಂಬಿಕ ಕಲಹ, ಹಣಕಾಸು ಹಾಗೂ ಆರ್ಥಿಕ ವಿವಾದ ಸೇರಿದಂತೆ ಎಲ್ಲ ಆಯಾಮದಿಂದ ತನಿಖೆ ನಡೆದಿದೆ ಎಂದರು. ಈ ಪ್ರಕರಣದ ವಿಚಾರಣೆಗೆ ತ್ವರಿತ ಪಥ ನ್ಯಾಯಾಲಯ ಸ್ಥಾಪನೆ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರ (ಎಸ್‌ಪಿಪಿ)ರನ್ನು ನೇಮಿಸುವಂತೆ ಕೋರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅಲ್ಲದೆ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಿ ಪಟ್ಟಿ ಸಲ್ಲಿಸಲಾಗುತ್ತದೆ ಎಂದು ಆಯುಕ್ತರು ಹೇಳಿದರು.