ಮೈಸೂರು :ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ನಿವೇಶನ ಹಂಚಿಕೆ ಅಕ್ರಮ ಸಂಬಂಧ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತಕ್ಕೆ ಮತ್ತೆರಡು ದೂರು ನೀಡಿದ್ದಾರೆ. ಮುಡಾದ ಹಿಂದಿನ ಆಯುಕ್ತರಿಬ್ಬರು ನೂರಾರು ಕೋಟಿ ವಂಚನೆ ಮಾಡಿದ್ದು, ಅವರ ವಿರುದ್ಧ ತನಿಖೆಗೆ ಆಗ್ರಹಿಸಿದ್ದಾರೆ.
ಮುಡಾದ ಹಿಂದಿನ ಆಯುಕ್ತರಾದ ಡಿ.ಬಿ.ನಟೇಶ್ ಮತ್ತು ದಿನೇಶ್ ಕುಮಾರ್ ಅವರ ಅಧಿಕಾರಾವಧಿಯಲ್ಲಿ 50:50ರ ಅನುಪಾತದಲ್ಲಿ 928 ನಿವೇಶನಗಳ ಹಂಚಿಕೆಯಾಗಿದ್ದು, ಈ ವೇಳೆ ಅಕ್ರಮ ನಡೆದಿದೆ. ಈ ಮೂಲಕ ಮುಡಾಗೆ ನೂರಾರು ಕೋಟಿ ರುಪಾಯಿ ವಂಚನೆಯಾಗಿದೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 14 ನಿವೇಶನಗಳ ಉದಾಹರಣೆ ಇಟ್ಟುಕೊಂಡು ಉಳಿದೆಲ್ಲ ಕೇಸ್‌ಗಳ ಮೇಲೂ ಕ್ರಮ ಆಗಬೇಕು. ಡಿ.ಬಿ.ನಟೇಶ್ ಮತ್ತು ದಿನೇಶ್ ಕುಮಾರ್ ಅಧಿಕಾರಾವಧಿಯಲ್ಲಿ ಅತೀ ಹೆಚ್ಚಿನ ಅಕ್ರಮ ನಡೆದಿದೆ. ಮುಡಾದಲ್ಲಿ ಅಕ್ರಮವಾಗಿ ನಿವೇಶನ ಪಡೆದವರ ಜೊತೆ ನಟೇಶ್ ಮತ್ತು ದಿನೇಶ್ ಕುಮಾರ್ ಮೇಲೂ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ.
928 ನಿವೇಶನದಲ್ಲಿ ಬಿಲ್ಡರ್ ಮಂಜುನಾಥ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಹೋದರನ ಮಗ ನವೀನ್ ಬೋಸ್ ಅವರಿಗೂ ಸೆಟಲ್ಮೆಂಟ್ ಡೀಡ್ ಮಾಡಿಕೊಟ್ಟಿದ್ದಾರೆ. ಅವರ ಮೇಲೂ ಕಾನೂನಿನ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತೊಂದು ದೂರಿನಲ್ಲಿ ಕೆಸರೆಯ ಸರ್ವೆ ನಂ.462ರಲ್ಲಿನ 0.37 ಗುಂಟೆ ಮತ್ತು ಸರ್ವೆ ನಂ.464ರಲ್ಲಿನ 3.16 ಎಕರೆಯ ಜಮೀನನನ್ನು ಭೂ ಸ್ವಾಧೀನದಿಂದ ಕೈ ಬಿಡಲಾಗಿದೆ ಎಂದು ಹೇಳುವ ದಾಖಲೆಗಳ ನೈಜತೆ ಬಗ್ಗೆ ವೈಜ್ಞಾನಿಕ ವರದಿ ಪಡೆದು ತನಿಖೆ ನಡೆಸಿ, ಸತ್ಯಾಸತ್ಯತೆ ತಿಳಿದುಕೊಳ್ಳಬೇಕು. ಸುಳ್ಳು ದಾಖಲೆ ಸೃಷ್ಟಿಸಿಕೊಂಡು ವಂಚಿಸಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಿಳಿಸಿದ್ದಾರೆ.
ಲೋಕಾಯುಕ್ತ ತನಿಖೆಗೆ ಸ್ನೇಹಮಯಿ ಬೇಸರ: ಮುಡಾ ಅಕ್ರಮ ಸಂಬಂಧ ಒಂದು ತಿಂಗಳಿಂದ ವಿಚಾರಣೆ ಮಾಡುತ್ತಿರುವ ಲೋಕಾಯುಕ್ತ ಪೊಲೀಸರು ಒಬ್ಬರನ್ನೂ ಬಂಧಿಸಿಲ್ಲ. ಇವರು ಕೇವಲ 2- 3 ಸಾವಿರ ಲಂಚ ಪಡೆದವರನ್ನು ಬಂಧಿಸೋಕೆ ಇರೋದಾ? ಈ ರೀತಿ ವಿಚಾರಣೆಯಿಂದಾಗಿ ಆರೋಪಿಗಳೆಲ್ಲ ಹೊರಗೆ ಬಂದು ಏನೇನೋ ಮಾತಾಡುವಂತೆ ಆಗಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಬೇಸರ ವ್ಯಕ್ತಪಡಿಸಿದರು.