ಕನ್ನಡಪ್ರಭ ವಾರ್ತೆ ಬೆಂಗಳೂರುನಗರದ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಪೊಲೀಸರು ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆವರೆಗೂ ನಗರದಾದ್ಯಂತ ವಿಶೇಷ ಗಸ್ತು ಕಾರ್ಯಾಚರಣೆ ನಡೆಸಿದರು.
ನಗರ ಪೊಲೀಸ್ ಆಯುಕ್ತರೇ ಖುದ್ದು ಫೀಲ್ಡ್‌ಗೆ ಇಳಿದಿದ್ದರು. ಪಿಎಸ್‌ಐ, ಇನ್ಸ್‌ಪೆಕ್ಟರ್‌ಗಳು, ಎಸಿಪಿಗಳು ಹಾಗೂ ಡಿಸಿಪಿಗಳೊಂದಿಗೆ ನಗರದ ವಿವಿಧೆಡೆ ಗಸ್ತು ನಡೆಸಿದರು. ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದ ಪೊಲೀಸರನ್ನು ಭೇಟಿಯಾದ ಸೀಮಂತ್ ಕುಮಾರ್ ಕೆಲ ಸಲಹೆ-ಸೂಚನೆಗಳನ್ನು ನೀಡಿದರು. ರಾತ್ರಿ ಸುಮಾರು 11 ಗಂಟೆಗೆ ವಿಶೇಷ ಗಸ್ತು ಆರಂಭಿಸಿ ಮುಂಜಾನೆ 5 ಗಂಟೆವರೆಗೂ ಗಸ್ತು ನಡೆಸಿದರು.ಮೆಜೆಸ್ಟಿಕ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳು, ಕೆ.ಆರ್.ಮಾರ್ಕೆಟ್, ಟೌನ್ ಹಾಲ್, ಕಾರ್ಪೊರೇಷನ್ ವೃತ್ತ, ಕೆ.ಆರ್.ವೃತ್ತ, ಮೈಸೂರು ಬ್ಯಾಂಕ್ ಸರ್ಕಲ್, ಮೈಸೂರು ರಸ್ತೆಯ ಸ್ಯಾಟಲೆಟ್ ಬಸ್ ನಿಲ್ದಾಣ, ಎಂ.ಜಿ.ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ ಸೇರಿದಂತೆ ನಗರದ ಪ್ರಮುಖ ಸ್ಥಳಗಳು, ವಾಣಿಜ್ಯ ಸಂಕಿರ್ಣಗಳು, ಪ್ರಮುಖ ರಸ್ತೆಗಳು, ವೃತ್ತಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳಿಗೆ ಭೇಟಿ ನೀಡಿದರು. ಸಾರ್ವಜನಿಕರನ್ನು ಮಾತನಾಡಿಸಿ ಸಮಸ್ಯೆಗಳನ್ನು ಆಲಿಸಿದರು.
ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ:ವಾರಾಂತ್ಯದ ಹಿನ್ನೆಲೆಯಲ್ಲಿ ನಗರ ಸಂಚಾರ ಪೊಲೀಸರು ನಗರದ ವಿವಿಧೆಡೆ ನಾಕಾಬಂಧಿ ಹಾಕಿ ವಾಹನಗಳ ತಪಾಸಣೆ ನಡೆಸಿದರು. ವಾಹನ ಚಾಲಕರನ್ನು ತಡೆದು ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸಿದರು. ಸಂಚಾರ ನಿಯಮ ಉಲ್ಲಂಘಿಸಿದ ಚಾಲಕರ ವಿರುದ್ಧ ಮೂಲಾಜಿಲ್ಲದೆ ಪ್ರಕರಣ ದಾಖಲಿಸಿದರು. ಪಾನಮತ್ತ ಚಾಲಕರು ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ದೃಶ್ಯಗಳು ಅಲ್ಲಲ್ಲಿ ಕಂಡು ಬಂದಿತು.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಸೀಮಂತ್ ಕುಮಾರ್ ಸಿಂಗ್, ಅಪರಾಧ ಚಟುವಟಿಕೆಗಳ ನಿಯಂತ್ರಣ ಹಾಗೂ ಸಾರ್ವಜನಿಕರಿಗೆ ಭಯಮುಕ್ತ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ನಗರದಲ್ಲಿ ರಾತ್ರಿ ವಿಶೇಷ ಗಸ್ತು ಕಾರ್ಯಾಚರಣೆ ನಡೆಸಲಾಯಿತು. ಇದರಲ್ಲಿ ಪಿಎಸ್‌ಐ ಮಟ್ಟದ ಅಧಿಕಾರಿಗಳಿಂದ ಹಿಡಿದು ಡಿಸಿಪಿಗಳು, ಜಂಟಿ ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತರು ರಾತ್ರಿ ಇಡೀ ಗಸ್ತು ನಡೆಸಿದ್ದಾರೆ ಎಂದು ಹೇಳಿದರು.