ಬೆಂಗಳೂರು : ಇತ್ತೀಚೆಗೆ ಸುಂಕದಕಟ್ಟೆಯ ಹೊಯ್ಸಳ ನಗರದ ಮನೆಯೊಂದರಲ್ಲಿ ಪತ್ನಿಯನ್ನು ಚಾಕುವಿನಿಂದ 16 ಬಾರಿ ಇರಿದು ಕೊಲೆಗೈದು ಪರಾರಿಯಾಗಿದ್ದ ಎರಡನೇ ಪತಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರದ ಶಾಂತಕುಮಾರ್(40) ಬಂಧಿತ. ಆರೋಪಿಯು ಮೇ 7ರಂದು ರಾತ್ರಿ ಸುಮಾರು 8 ಗಂಟೆಗೆ ಪತ್ನಿ ದಿವ್ಯಾ(30) ಜತೆಗೆ ಜಗಳ ತೆಗೆದು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಪತ್ನಿ ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಚಾರಕ್ಕೆ ಆರೋಪಿ ಕೊಲೆ ಕೃತ್ಯ ಎಸೆಗಿರುವುದು ಗೊತ್ತಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿ ಶಾಂತಕುಮಾರ್‌ನನ್ನು ಆರು ದಿನ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?: ಪಾಂಡವಪುರ ಮೂಲದ ದಿವ್ಯಾಗೆ 8 ವರ್ಷಗಳ ಹಿಂದೆ ಬಿಡದಿಯ ಹೊಸದೊಡ್ಡಿಯ ಯುವಕನ ಜತೆಗೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದರು. ದಾಂಪತ್ಯ ಕಲಹದಿಂದ ದಿವ್ಯಾ ಪತಿಯಿಂದ ಪ್ರತ್ಯೇಕವಾಗಿದ್ದಳು. ಈ ನಡುವೆ ಪಾಂಡವಪುರದಲ್ಲಿ ಜ್ಯೋತಿಷ್ಯ ಹೇಳಿಕೊಂಡು ಜೀವನ ಮಾಡುತ್ತಿದ್ದ ಶಾಂತಕುಮಾರ್‌ನ ಪರಿಯವಾಗಿದೆ. 2018ರಲ್ಲಿ ಆತನೊಂದಿಗೆ ಚಿಕ್ಕಮಗಳೂರಿನಲ್ಲಿ ಎರಡನೇ ಮದುವೆಯಾಗಿದ್ದಳು. ಬಳಿಕ ತನ್ನ ಇಬ್ಬರು ಮಕ್ಕಳೊಂದಿಗೆ ಶಾಂತಕುಮಾರ್ ಜತೆಗೆ ಪಾಂಡವಪುರದಲ್ಲಿ ನೆಲೆಸಿದ್ದಳು.
ಕೆಲಸಕ್ಕಾಗಿ ಬೆಂಗಳೂರಿಗೆ ಬಂದಳು: ಜೀವನ ನಿರ್ವಹಣೆ ಕಷ್ಟವಾದ ಹಿನ್ನೆಲೆಯಲ್ಲಿ ಒಂದು ಮಗುವನ್ನು ಪತಿ ಶಾಂತಕುಮಾರ್ ಬಳಿ ಬಿಟ್ಟು ಮತ್ತೊಂದು ಮಗುವನ್ನು ತನ್ನ ತಾಯಿಯ ಬಳಿ ಬಿಟ್ಟಿದ್ದ ದಿವ್ಯಾ, 2022ರಲ್ಲಿ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದಳು. ಆರಂಭದಲ್ಲಿ ಪೇಯಿಂಗ್ ಗೆಸ್ಟ್(ಪಿಜಿ)ಯಲ್ಲಿ ಉಳಿದುಕೊಂಡು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಇತ್ತೀಚೆಗಷ್ಟೇ ಸುಂಕದಕಟ್ಟೆಯ ಹೊಯ್ಸಳನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದಳು. ಪಿಜಿಯಿಂದ ಬಾಡಿಗೆ ಮನೆಗೆ ವಸ್ತುಗಳನ್ನು ಆಟೋದಲ್ಲಿ ಸಾಗಿಸಿದ್ದಾಗ ಪತ್ನಿ ದಿವ್ಯಾ ಮನವಿ ಮೇರೆಗೆ ಶಾಂತಕುಮಾರ್ ಫೋನ್ ಪೇ ಮುಖಾಂತರ ಆಟೋ ಚಾಲಕನಿಗೆ ಬಾಡಿಗೆ ಪಾವತಿಸಿದ್ದ.
ದಿವ್ಯಾಳಿಂದಲೇ ಕರೆ ಮಾಡಿಸಿದ ಗೆಳೆಯ!
ಕೊಲೆಯಾದ ದಿವ್ಯಾ ಇತ್ತೀಚೆಗೆ ಮೊಬೈಲ್ ಕಳೆದುಕೊಂಡಿದ್ದಳು. ಈ ವಿಚಾರವನ್ನು ಪತಿ ಶಾಂತಕುಮಾರ್‌ಗೆ ಹೇಳಿ ಹೊಸ ಮೊಬೈಲ್, ಸಿಮ್ ಕಾರ್ಡ್ ಕೊಡಿಸುವಂತೆ ಕೇಳಿದ್ದಳು. ಆತ ಹಳೇ ಸಂಖ್ಯೆಯ ಸಿಮ್ ಕಾರ್ಡ್ ಖರೀದಿಸಿ ಹೊಸ ಮೊಬೈಲನ್ನು ತನ್ನ ಬಳಿಯೇ ಇರಿಸಿಕೊಂಡಿದ್ದ. ಈ ವಿಚಾರವನ್ನು ಪತ್ನಿಗೆ ಹೇಳಿರಲಿಲ್ಲ. ಈ ನಡುವೆ ಹಳೇ ಮೊಬೈಲ್ ಸಂಖ್ಯೆಗೆ ಅಪರಿಚಿತ ಯುವಕನೊಬ್ಬ ಕರೆ ಮಾಡಿದ್ದಾಗ ಯಾರೆಂದು ಶಾಂತಕುಮಾರ್ ವಿಚಾರಿಸಿದ್ದಾನೆ. ಆಗ ಆ ಯುವಕ ‘ಇದು ನನ್ನ ಪತ್ನಿಯ ಮೊಬೈಲ್ ನಂಬರ್, ನೀವು ಏಕೆ ಬಳಸುತ್ತಿದ್ದೀರಿ’ ಎಂದಿದ್ದಾನೆ. ಅಷ್ಟೇ ಅಲ್ಲದೆ, ಕೆಲ ಸಮಯ ಬಳಿಕ ಆ ಸಂಖ್ಯೆಗೆ ದಿವ್ಯಾಳಿಂದ ಕರೆ ಮಾಡಿಸಿದ್ದಾನೆ. ಪತ್ನಿ ಧ್ವನಿ ಕೇಳಿ ದಂಗಾದ ಶಾಂತಕುಮಾರ್, ಮರುಮಾತನಾಡದೆ ಕರೆ ಸ್ಥಗಿತಗೊಳಿಸಿದ್ದಾನೆ.
ಊರಿಗೆ ಬಾ ಎಂದರೂ ನಿರ್ಲಕ್ಷ್ಯ:
ಪತ್ನಿ ಪರ ಪುರುಷನ ಜತೆಗೆ ಅಕ್ರಮ ಸಂಬಂಧ ಹೊಂದಿರುವುದು ಗೊತ್ತಾಗಿದೆ. ಬಳಿಕ ದಿವ್ಯಾಳಿಗೆ ಕರೆ ಮಾಡಿ ಈ ವಿಚಾರ ಪ್ರಸ್ತಾಪಿಸಿ, ಬೈದಿದ್ದಾನೆ. ಬುದ್ಧಿವಾದ ಹೇಳಿ ಬೆಂಗಳೂರು ಬಿಟ್ಟು ಊರಿಗೆ ಬರುವಂತೆ ಸೂಚಿಸಿದ್ದಾನೆ. ಆದರೆ, ಆಕೆ ಶಾಂತಕುಮಾರ್ ಮಾತು ನಿರ್ಲಕ್ಷಿಸಿ ಕರೆ ಸ್ಥಗಿತಗೊಳಿಸಿದ್ದಾಳೆ. ಇದರಿಂದ ಕೋಪಗೊಂಡಿದ್ದ ಶಾಂತಕುಮಾರ್ ಪತ್ನಿಯ ಕೊಲೆಗೆ ನಿರ್ಧರಿಸಿದ್ದ. ಆದರೆ, ಆಕೆ ಬೆಂಗಳೂರಿನಲ್ಲಿ ಎಲ್ಲಿ ವಾಸವಿದ್ದಾಳೆ ಎಂಬುದು ಗೊತ್ತಿರಲಿಲ್ಲ.
ಆಟೋ ಚಾಲಕನಿಂದ ಪತ್ನಿಯ ವಿಳಾಸ ಪಡೆದಕೋಪದಿಂದ ಮೇ 7ರಂದು ಬೆಂಗಳೂರಿಗೆ ಬಂದಿದ್ದ ಆರೋಪಿ ಶಾಂತಕುಮಾರ್‌ಗೆ ಕೆಲ ದಿನಗಳ ಹಿಂದೆಯಷ್ಟೇ ಪತ್ನಿಯ ಬಾಡಿಗೆ ಮನೆಗೆ ವಸ್ತುಗಳನ್ನು ಸ್ಥಳಾಂತರಿಸುವಾಗ ಫೋನ್ ಪೇ ಮುಖಾಂತರ ಆಟೋ ಬಾಡಿಗೆ ಪಾವತಿಸಿರುವುದು ನೆನಪಾಗಿದೆ. ಆ ನಂಬರ್‌ಗೆ ಕರೆ ಮಾಡಿದ ಶಾಂತಕುಮಾರ್, ತನ್ನ ಪರಿಚಯ ಹೇಳಿಕೊಂಡು ಪತ್ನಿ ದಿವ್ಯಾಳ ವಿಳಾಸ ಕೇಳಿಕೊಂಡಿದ್ದಾನೆ. ಬಳಿಕ ರಾತ್ರಿ 8 ಗಂಟೆಗೆ ಆ ಮನೆ ಹುಡುಕಿ ಬಂದಿದ್ದಾನೆ.ಜಗಳದ ವೇಳೆ 16 ಬಾರಿ ಇರಿದು ಕೊಂದ
ಈ ವೇಳೆ ಅಕ್ರಮ ಸಂಬಂಧ ವಿಚಾರ ಪ್ರಸ್ತಾಪಿಸಿ ಪತ್ನಿ ದಿವ್ಯಾ ಜತೆಗೆ ಗಲಾಟೆ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಶಾಂತಕುಮಾರ್ ಬೆಳಗ್ಗೆ ಪಾಂಡವಪುರದಿಂದ ಬರುವಾಗಲೇ ಖರೀದಿಸಿ ತಂದಿದ್ದ ಚಾಕು ತೆಗೆದು 16 ಬಾರಿ ದಿವ್ಯಾಳ ಎದೆ, ಹೊಟ್ಟೆ ಸೇರಿದಂತೆ ದೇಹದ ಇತರೆ ಭಾಗಗಳಿಗೆ ಇರಿದು ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ದಿವ್ಯಾ ಸ್ಥಳದಲ್ಲೇ ಮೃತಪಟ್ಟಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿದ್ದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.