ಮದ್ದೂರು : ರಾಜ್ಯ ರಸ್ತೆ ಸಾರಿಗೆ ಬಸ್‌ ಡಿಕ್ಕಿಗೆ ಉರುಳಿ ಬಿದ್ದ ಆಟೋ - 6 ಮಂದಿಗೆ ಗಾಯ

KannadaprabhaNewsNetwork | Updated : Mar 03 2025, 04:34 AM IST

ಸಾರಾಂಶ

ಆಟೋದಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ನಿವಾಸಿಗಳಾದ ಕಲ್ಪನಾ, ಲಕ್ಷ್ಮಮ್ಮ, ತಿಮ್ಮಮ್ಮ, ಮದ್ದೂರು ತಾಲೂಕು ಅಜ್ಜಹಳ್ಳಿಯ ಗೌರಮ್ಮ, ಪೂರ್ಣಿಮಾ ಹಾಗೂ ಸೋಮನಹಳ್ಳಿಯ ಮಹಮ್ಮದ್ ಮೊಹಾಜ್ ಗಾಯಗೊಂಡ ಪ್ರಯಾಣಿಕರು.

 ಮದ್ದೂರು : ಸಾರಿಗೆ ಬಸ್ ಪ್ರಯಾಣಿಕರ ಆಪೇ ಆಟೋಗೆ ಡಿಕ್ಕಿ ಹೊಡೆದು ಆಟೋ ಉರುಳಿ ಬಿದ್ದ ಪರಿಣಾಮ ಮಹಿಳೆಯರು ಸೇರಿದಂತೆ ಆರು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಸೋಮನಹಳ್ಳಿ ಸಮೀಪದ ಕೆಸ್ತೂರು ಕ್ರಾಸ್ ಬಳಿ ಭಾನುವಾರ ಮಧ್ಯಾಹ್ನ ಜರುಗಿದೆ.

ಆಟೋದಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ನಿವಾಸಿಗಳಾದ ಕಲ್ಪನಾ, ಲಕ್ಷ್ಮಮ್ಮ, ತಿಮ್ಮಮ್ಮ, ಮದ್ದೂರು ತಾಲೂಕು ಅಜ್ಜಹಳ್ಳಿಯ ಗೌರಮ್ಮ, ಪೂರ್ಣಿಮಾ ಹಾಗೂ ಸೋಮನಹಳ್ಳಿಯ ಮಹಮ್ಮದ್ ಮೊಹಾಜ್ ಗಾಯಗೊಂಡ ಪ್ರಯಾಣಿಕರು.

ಎಲ್ಲರೂ ಮದ್ದೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಣಿಗಲ್ ಕಡೆಯಿಂದ ವೇಗವಾಗಿ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಬೆಂಗಳೂರು- ಮೈಸೂರು ಹಳೆಯ ಹೆದ್ದಾರಿಯ ಕೆಸ್ತೂರ್ ಕ್ರಾಸ್ ಅಡಿಗಾಸ್ ಹೋಟೆಲ್ ಬಳಿ ಬಸ್ ಚಾಲಕ ಮದ್ದೂರಿಗೆ ತೆರಳಲು ಬಲಕ್ಕೆ ತಿರುಗಿಸುವ ಭರದಲ್ಲಿ ಸೋಮನಹಳ್ಳಿ ಕಡೆಯಿಂದ ಬರುತ್ತಿದ್ದ ಪ್ರಯಾಣಿಕರ ಆಪೇ ಆಟೋಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಈ ಸಂಬಂಧ ಸಂಚಾರಿ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಾನವೀಯತೆ ಮೆರೆದ ಶಾಸಕ ಬಾಲಕೃಷ್ಣ:

ಸಾರಿಗೆ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಪ್ರಯಾಣಿಕರಿದ್ದ ಆಪೇ ಆಟೋ ಉರುಳಿ ಬಿದ್ದಾಗ ಕಾರ್ಯ ನಿಮ್ಮಿತ್ತ ಮದ್ದೂರಿಗೆ ತೆರಳುತ್ತಿದ್ದ ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಅವರು ತಕ್ಷಣ ಉರುಳಿ ಬಿದ್ದಿದ್ದ ಆಟೋವನ್ನು ಸ್ಥಳೀಯರ ನೆರವಿನಿಂದ ಎತ್ತಿ ನಿಲ್ಲಿಸಿದರು. ಅಲ್ಲದೇ, ತಮ್ಮ ಕಾರಿನಲ್ಲಿಯೇ 6 ಮಂದಿ ಗಾಯಾಳುಗಳನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮೂಲಕ ಬಾಲಕೃಷ್ಣ ಮಾನವೀಯತೆ ಮೆರೆದಿದ್ದಾರೆ.

ನಿಯಮಕ್ಕಿಂತ ಹೆಚ್ಚು ಪ್ರಯಾಣ

ಮದ್ದೂರು, ಚನ್ನಪಟ್ಟಣ, ಮಂಡ್ಯ ಮತ್ತು ಕೆ.ಎಂ.ದೊಡ್ಡಿ ಮಾರ್ಗಗಳಲ್ಲಿ ಸಾರಿಗೆ ಇಲಾಖೆ ನಿಯಮಕ್ಕಿಂತ ಹೆಚ್ಚು ಮಂದಿ ಆಟೋಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆ ನಿಯಮ ಉಲ್ಲಂಘನೆ ಆಗುತ್ತಿದ್ದರೂ ಸಹ ಅಧಿಕಾರಿಗಳಾಗಲಿ ಅಥವಾ ಪೊಲೀಸರಾಗಲಿ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸುತ್ತಿರುವುದರಿಂದ ಅಪಘಾತಗಳು ಸಂಭವಿಸಿ ಸಾವು ನೋವು ಉಂಟಾಗುತ್ತಿದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು.

- ಎಚ್.ಸಿ.ಬಾಲಕೃಷ್ಣ, ಮಾಗಡಿ ಶಾಸಕರು

Share this article