ಪಾಂಡವಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ರೈತನ ಮೇಲೆ ಮೇಲುಕೋಟೆ ಪೊಲೀಸರು ಸ್ವಯಂ ಪ್ರೇರಿತ ಎಫ್ ಐಆರ್ ದಾಖಲು ಮಾಡಿದ್ದಾರೆ. ತಾಲೂಕಿನ ಸುಂಕತೊಣ್ಣುರು ಗ್ರಾಮದ ರೈತ ಮೋಹನ ಲಿಂಗೇಶ್ವರ ಕಾಂಗ್ರೆಸ್ ಸರ್ಕಾರದ ಉಚಿತ ಗೃಹಜ್ಯೋತಿ ಯೋಜನೆಯಿಂದ ಮೋಸವಾಗಿದೆ. ತಮ್ಮ ಮನೆಗೆ ಅತಿಹೆಚ್ಚು ವಿದ್ಯುತ್ ಬಿಲ್ ಬಂದಿದೆ. ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯಿಂದ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದರು. ಅಲ್ಲದೇ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಇವರಿಂದ ಕಾಂಗ್ರೆಸ್ ಪಕ್ಷ ತಲೆತಗ್ಗಿಸುವಂತಾಗಿದೆ. ನಾನು ನಮ್ಮ ತಂದೆ ಕಾಲದಿಂದಲ್ಲೂ ಕಾಂಗ್ರೆಸ್ ಪಕ್ಷದ ಅಪ್ಪಟ ಅಭಿಮಾನಿ. ಆದರೆ, ಈಗ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೊಳ್ಳಲು ಆಗುತ್ತಿಲ್ಲ ಎಂದು ಸಿಎಂ ಹಾಗೂ ಡಿಸಿಎಂ ಬಗ್ಗೆ ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಮೇಲುಕೋಟೆ ಪೊಲೀಸರು ತನಿಖೆ ನಡೆಸಿ ಸ್ವಯಂ ಪ್ರೇರಿತರಾಗಿ ರೈತ ಮೇಲೆ ದೂರು ದಾಖಲಿಸಿಕೊಂಡಿದ್ದಾರೆ. ರೈತ ಮೋಹನ ಲಿಂಗೇಶ್ವರ ವಿರುದ್ಧ 504- 507ರೀತಿಯ ಪ್ರಕರಣ ದಾಖಲಾಗಿದೆ. 30ಕೆಎಂಎನ್ ಡಿ15 ಮೋಹನಲಿಂಗೇಶ್ವರ