ಷೇರು ಹೂಡಿಕೆ ನಷ್ಟ: ನದಿಗೆ ಹಾರಿದ ಬೆಂಗಳೂರಿನ ವ್ಯಕ್ತಿ

ಸಾರಾಂಶ

ಷೇರು ಮಾರುಕಟ್ಟೆಯಲ್ಲಿ ನಷ್ಟವಾಯಿತು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಉಪ್ಪಿನಂಗಡಿ: ಷೇರು ಮಾರುಕಟ್ಟೆಯಲ್ಲಿ ನಷ್ಟವಾಯಿತು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಹಾರುವ ವೇಳೆ ಪೊದೆಯಲ್ಲಿ ಸಿಲುಕಿಕೊಂಡ ಕಾರಣ ಇವರನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ ಘಟನೆ ಸೋಮವಾರ ಕಡಬ ಸಮೀಪ ನಡೆದಿದೆ. 

ಆಂಧ್ರ ಪ್ರದೇಶದ ಮಡಕಶಿರ ಮೂಲದ ಬೆಂಗಳೂರಿನ ಮಾರತ್ತಹಳ್ಳಿ ನಿವಾಸಿ ರವಿಕುಮಾರ್‌, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನಷ್ಟ ಅನುಭವಿಸಿ, 2 ಲಕ್ಷ ರು. ಸಾಲ ಮಾಡಿಕೊಂಡಿದ್ದ. ವ್ಯವಹಾರದಲ್ಲಿನ ಸೋಲಿನಿಂದಾಗಿ ಜಿಗುಪ್ಸೆಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ದೇವರ ದರ್ಶನ ಮಾಡಿದ್ದ. 

ಬಳಿಕ ಕಡಬ-ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿ ಸೋಮವಾರ ಮುಂಜಾನೆ 5ರ ಸುಮಾರಿಗೆ ಬ್ಯಾಗನ್ನು ಬಸ್ ನಿಲ್ದಾಣದಲ್ಲೇ ಇರಿಸಿ ನದಿಗೆ ಹಾರಿದ್ದಾನೆ. ಆದರೆ, ಪೊದೆಯೊಂದರಲ್ಲಿ ಸಿಲುಕಿಕೊಂಡು ಒದ್ದಾಡಿ, ರಕ್ಷಣೆಗಾಗಿ ಕೂಗಾಡಿದಾಗ ಸ್ಥಳೀಯರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ, ಪೊಲೀಸರು, ವಿಪತ್ತು ನಿರ್ವಹಣಾ ತಂಡದ ಸದಸ್ಯರು ಕಾರ್ಯಾಚರಣೆ ಮಾಡಿ ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ.

Share this article