ಮಳವಳ್ಳಿ : ಟೆಂಪೋ ಡಿಕ್ಕಿಯಾಗಿ ಬೈಕ್ ಸವಾರ ಸಾವು, ಹಿಂಬದಿ ಸವಾರನಿಗೆ ತೀವ್ರ ಗಾಯ

KannadaprabhaNewsNetwork | Updated : Nov 08 2024, 08:29 AM IST

ಸಾರಾಂಶ

ಟೆಂಪೋ ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿ, ಹಿಂಬದಿ ಸವಾರ ತೀವ್ರ ಗಾಯಗೊಂಡಿರುವ ಘಟನೆ ತಾಲೂಕಿನ ಮಾರ್ಕಾಲು ಗೇಟ್ ಬಳಿ ನಡೆದಿದೆ.

 ಮಳವಳ್ಳಿ : ಟೆಂಪೋ ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿ, ಹಿಂಬದಿ ಸವಾರ ತೀವ್ರ ಗಾಯಗೊಂಡಿರುವ ಘಟನೆ ತಾಲೂಕಿನ ಮಾರ್ಕಾಲು ಗೇಟ್ ಬಳಿ ನಡೆದಿದೆ.

ಪಟ್ಟಣದ ಗಂಗಾಮತ ಬೀದಿಯ ಉತ್ತೂರಯ್ಯನ ಬಡಾವಣೆ ಟೈಲರ್ ಸುಬ್ಬಯ್ಯ ಪುತ್ರ ವೆಂಕಟೇಶ್ (27) ಮೃತ ಯುವಕ. ಹಿಂಬದಿ ಸವಾರ ಶಿವಕುಮಾರ್ ತೀವ್ರ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಮೃತ ವೆಂಕಟೇಶ್ ಬೈಕ್‌ನಲ್ಲಿ ಸ್ನೇಹಿತನ ಜತೆ ಮಳವಳ್ಳಿಯಿಂದ ಕಿರುಗಾವಲು ಕಡೆಗೆ ಹೋಗುತ್ತಿದ್ದ ವೇಳೆ ಮೈಸೂರು-ಮಳವಳ್ಳಿ ಮುಖ್ಯರಸ್ತೆಯ ಮಾರ್ಕಾಲು ಬಳಿ ಎದುರಿನಿಂದ ಬಂದ ಟೆಂಪೋ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಚಿಕಿತ್ಸೆಗಾಗಿ ಮೈಸೂರಿಗೆ ಕೆರೆದುಕೊಂಡ ಹೋಗುವ ಮಾರ್ಗಮಧ್ಯೆ ವೆಂಕಟೇಶ್ ಸಾವನ್ನಪ್ಪಿದ್ದಾನೆ. ಶಿವಕುಮಾರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಸಬ್‌ಇನ್ಸ್ ಪೆಕ್ಟರ್ ಡಿ.ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವರುಣಾ ಕಾಲುವೆಯಲ್ಲಿ ಕೊಚ್ಚಿಹೋದ ಆಟೋಚಾಲಕ

ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ

ಆಟೋ ಚಾಲಕರೊಬ್ಬರು ತನ್ನ ಸ್ನೇಹಿತನ ಜೊತೆ ಮೊಗರಹಳ್ಳಿ ಬಳಿಯ ವರುಣಾ ಕಾಲುವೆಯಲ್ಲಿ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

ಮೈಸೂರಿನ ಶಾದನಹಳ್ಳಿ ಬಡವಾಣೆಯ ನಿವಾಸಿ ನಾಗೇಂದ್ರ ಪ್ರಸಾದ್ (೨೬) ನಾಲೆಯಲ್ಲಿ ನೀರು ರಭಸವಿದ್ದ ಕಾರಣ ಈಜಲು ಸಾಧ್ಯವಾಗದೆ ನಾಲೆಯ ನೀರಿನಲ್ಲಿ ಕೊಚ್ಚಿ ಹೋಗಿರುವುದಾಗಿ ಸಹೋದರಿ ಚೈತ್ರ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ನಾಲೆಯ ಹಲವೆಡೆ ಹುಡಕಾಟ ನಡೆಸಿದರೂ ಶವ ಪತ್ತೆಯಾಗಲಿಲ್ಲ. ಈ ಕುರಿತು ಕೆಆರ್‌ಎಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮೃತ ನಾಗೇಂದ್ರ ಪ್ರಸಾದ್ ೫.೬ ಅಡಿ ಎತ್ತರ, ಗೋಧಿ ಮೈಬಣ್ಣ, ಎಡಗೈ ಮೇಲೆ ಅಮ್ಮ ಹಾಗೂ ಬಲಗೈ ನಲ್ಲಿ ಸಿ ಹಾಗೂ ಚೇಳಿನ ಹಚ್ಚೆ ಹಾಕಲಾಗಿದೆ. ಈ ಚಹರೆವುಳ್ಳ ವ್ಯಕ್ತಿ ಬಗ್ಗೆ ಮಾಹಿತಿ ಸಿಕ್ಕರೆ ತಕ್ಷಣ ಕೆಆರ್‌ಎಸ್ ಪೊಲೀಸ್ ಠಾಣೆ ಪಿ.ಎಸೈ ಮೊ.ಸಂಖ್ಯೆ ೯೪೮೦೮೦೪೮೫೬ ಸಂಪರ್ಕಿಸಲು ಕೋರಲಾಗಿದೆ.

Share this article