ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ವಿವಿಧ ಭಾಗದಲ್ಲಿ ಭಾರೀ ಮಳೆ ಸುರಿದ್ದು, ವಿಜಯನಗರದ ಎಂ.ಸಿ.ಲೇಔಟ್‌ನಲ್ಲಿ ಬೃಹತ್ ಮರ ಬಿದ್ದು ಆಟೋ ಜಖಂಗೊಂಡು ಚಾಲಕನ ಸ್ಥಿತಿ ಗಂಭೀರವಾಗಿದೆ.
ನಗರದಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಶುಕ್ರವಾರವೂ ಮಳೆ ಮುಂದುವರೆದಿದೆ. ಶುಕ್ರವಾರ ಬೆಳಗ್ಗೆ ಸ್ವಲ್ಪ ಬಿಸಿಲ ವಾತಾವರಣ ಕಂಡು ಬಂದಿತಾದರೂ ಮಧ್ಯಾಹ್ನ ನಂತರ ಮೋಡ ಕವಿದು ಮಳೆ ಸುರಿಯಲಾರಂಭಿಸಿತ್ತು.
ಸ್ವಲ್ಪ ಹೊತ್ತು ಧಾರಾಕಾರವಾಗಿ ಸುರಿದ ಮಳೆಯುವ ಬಿಡುವು ನೀಡಿ ಮತ್ತು ರಾತ್ರಿ 7 ಗಂಟೆಯ ಸುಮಾರಿಗೆ ಮತ್ತೆ ಆರಂಭಗೊಂಡಿತ್ತು. ಈ ವೇಳೆ ವಿಜಯನಗರದ ಎಂ.ಸಿ.ಲೇಔಟ್‌ನಲ್ಲಿ ಇಬ್ಬರು ಪ್ರಮಾಣಿಕರನ್ನು ಕೆರೆದುಕೊಂಡು ಹೋಗುತ್ತಿದ್ದ ಆಟೋದ ಮೇಲೆ ಭಾರೀ ಗಾತ್ರದ ಮರ ಏಕಾಏಕಿ ಧರೆಗುರುಳಿದೆ. ಈ ವೇಳೆ ಆಟೋ ಚಾಲಕ ಶಿವರುದ್ರಯ್ಯ ಅವರಿಗೆ ಗಂಭೀರವಾಗಿ ಪೆಟ್ಟಾಗಿದೆ. ಉಳಿದಂತೆ ಇಬ್ಬರು ಪ್ರಮಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದೆ. ತಕ್ಷಣ ಮೂವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಆಟೋ ಚಾಲಕ ಶಿವರುದ್ರಯ್ಯ ಅವರನ್ನು ಹೆಚ್ಚಿನ ಚಿಕಿತ್ಸೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಟುಂಬಸ್ಥರ ಆಕ್ರೋಶ:
ಆಟೋ ಓಡಿಸಿ ಜೀವನ ನಡೆಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡರೂ ಬಿಬಿಎಂಪಿಯ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ವಿಚಾರಿಸಿಲ್ಲ. ಆಸ್ಪತ್ರೆ ವೆಚ್ಚಕ್ಕೂ ಹಣವಿಲ್ಲ ಎಂದು ಶಿವರುದ್ರಯ್ಯ ಅವರ ಪತ್ನಿ ಬಿಬಿಎಂಪಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ರಾಫಿಕ್ ಜಾಂ:
ಉಳಿದಂತೆ ಕಬ್ಬನ್ ಪಾರ್ಕ್ ರಸ್ತೆ, ವಿಧಾನ ಸೌಧ, ಕಾರ್ಪೊರೇಷನ್ ಸರ್ಕಲ್, ಶಾಂತಿನಗರ, ರಿಚ್ಮಂಡ್ ಸರ್ಕಲ್ ಹಾಗೂ ಚಿಕ್ಕಪೇಟೆ ಸೇರಿದಂತೆ ನಗರದ ವಿವಿಧೆಡೆ ಮಳೆಯಾಗಿದೆ. ರಸ್ತೆಗಳಲ್ಲಿ ನೀರು ತುಂಬಿಕೊಂಡು ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.
ವಿದ್ಯಾಪೀಠದಲ್ಲಿ 2.5 ಸೆಂ.ಮೀ. ಮಳೆ
ನಗರದಲ್ಲಿ ಶುಕ್ರವಾರ ಸರಾಸರಿ 7 ಮಿ.ಮೀ ಮಳೆಯಾಗಿದೆ. ವಿದ್ಯಾಪೀಠದಲ್ಲಿ ಅತಿ ಹೆಚ್ಚು 2.5 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಕೊಡಿಗೆಹಳ್ಳಿಯಲ್ಲಿ 2.4, ನಾಯಂಡಹಳ್ಳಿ 2.3, ವಿದ್ಯಾರಣ್ಯಪುರ 2.1, ಯಲಹಂಕ 1.8, ರಾಜರಾಜೇಶ್ವರಿನಗರ 1.7, ವಿ.ನಾಗೇನಹಳ್ಳಿ 1.4, ವಿಶ್ವೇಶ್ವರಪುರ 1.2, ಮಾರುತಿ ಮಂದಿರ 1.1 ಹಾಗೂ ಹೇರೋಹಳ್ಳಿಯಲ್ಲಿ 1 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಕ್ಕಳಿಂದ ಮಳೆ ನೀರು ತೆರವು
ಜಯನಗರದ ಈಸ್ಟ್ ಅಂಡ್ ಮೋರಿಯಲ್ಲಿ ಕಸ ತುಂಬಿಕೊಂಡು ಮಳೆ ನೀರು ರಸ್ತೆಯಲ್ಲಿ ನಿಂತುಕೊಂಡಿದೆ. ಬಿಬಿಎಂಪಿಗೆ ಪೋನ್ ಮಾಡಿ ದೂರು ನೀಡಿದರೂ ಪ್ರಯೋಜವಾಗಿಲ್ಲ. ವರ ಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ರಜೆ ಇರುವುದರಿಂದ ಮಕ್ಕಳು ಮನೆ ಮುಂದೆ ಆಟವಾಡುವುದಕ್ಕೆ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಮಕ್ಕಳೇ ನೀರು ಹರಿದು ಹೋಗುವ ಜಾಗದಲ್ಲಿ ತುಂಬಿಕೊಂಡ ಕಸ ತೆರವು ಮಾಡಿದ್ದಾರೆ. ಕ್ರಮೇಣ ನೀರು ಕಡಿಮೆಯಾಗಿದೆ.