ಕನ್ನಡಪ್ರಭ ವಾರ್ತೆ ಪಾಂಡವಪುರ
ರೈತನ ಜಮೀನಿನಲ್ಲಿದ್ದ ಬೋರ್ ವೆಲ್ ಮೋಟಾರ್‌ನ ವಿದ್ಯುತ್ ಬೋರ್ಡ್ ಅನ್ನು ಕಳ್ಳರು ಕಳವು ಮಾಡಿರುವ ಘಟನೆ ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.ಗ್ರಾಮದ ಹೊರವಲಯದ ನುಗ್ಗಹಳ್ಳಿ ಮುಖ್ಯರಸ್ತೆ ಪಕ್ಕದ ರೈತ ಕೊಂತ್ತಪ್ಪರ ಶಂಕರೇಗೌಡ ಅವರು ತಮ್ಮ ಜಮೀನಿಗೆ ಬೋರ್ ವೆಲ್ ಹಾಕಿಸಿ ಮೋಟರ್ ಅಳವಡಿಸಿ ವಿದ್ಯುತ್ ಹಾಕಲಾಗಿತ್ತು. ವಿದ್ಯುತ್ ಬೋರ್ಡ್ ಬಾಕ್ಸ್ ನ ಬೀಗ ಮುರಿದಿರುವ ಕಿಡಿಗೇಡಿಗಳು ಅಲ್ಲಿದ ವಿದ್ಯುತ್ ಬೋರ್ಡ್ ಕಳವು ಮಾಡಿ ಪರಾರಿಯಾಗಿದ್ದಾರೆ.
ರೈತ ಶಂಕರೇಗೌಡರು ಎಂದಿನಂತೆ ಎದ್ದು ಭಾನುವಾರ ಬೆಳಗ್ಗೆ ಜಮೀನಿಗೆ ಹೋದಾಗ ವಿದ್ಯುತ್ ಬೋರ್ಡ್ ಕಳವು ಆಗಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಕ್ರೈಂ ವಿಭಾಗದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಧರ್ಮಪಾಲ್ ಅವರಿಗೆ ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ತೌಷಿಫ್ ಅವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಈ ಹಿಂದೆಯೂ ಸಹ ಚಿಕ್ಕಮರಳಿ ಗ್ರಾಮದ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ವಿದ್ಯುತ್ ಬೋರ್ಡ್ ಹಾಗೂ ಮೋಟರ್ ಗಳ ಕಳವು ಪ್ರಕರಣಗಳು ನಡೆದಿದ್ದು, ಇದರಲ್ಲಿ ಕೆಲವು ಪ್ರಕರಣಗಳನ್ನು ಮಾತ್ರ ಬೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇನ್ನೂ ಹಲವು ಕಳವು ಪ್ರಕರಣಗಳ ಬಾಕಿ ಇದ್ದು, ಅವುಗಳನ್ನು ಕಂಡು ಹಿಡಿಯಬೇಕು. ಜತೆಗೆ ಬೋರ್ ವೆಲ್ ಮೋಟರ್ ಹಾಗೂ ವಿದ್ಯುತ್ ಬೋರ್ಡ್ ಕಳವು ಮಾಡಿ ರೈತ ಸಮುದಾಯಕ್ಕೆ ನಷ್ಟ ಉಂಟು ಮಾಡುತ್ತಿರುವ ಕಳ್ಳರನ್ನು ಪೊಲೀಸರು ಬಂಧಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಸಂಬಂಧ ರೈತ ಶಂಕರೇಗೌಡ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.ಮಹಿಳೆ ನಾಪತ್ತೆ: ದೂರು ದಾಖಲು
ಮದ್ದೂರು: ಪಟ್ಟಣದ ಸಿದ್ಧಾರ್ಥ ನಗರದ ತಮ್ಮ ಪುತ್ರ ಪ್ರತಾಪನ ಪತ್ನಿ ರಮ್ಯಾ (28) ನಾಪತ್ತೆಯಾಗಿದ್ದಾಳೆ ಎಂದು ಅತ್ತೆ ಸುಮಿತ್ರ ಪೊಲೀಸರಿಗೆ ದೂರು ನೀಡಿದ್ದಾರೆ. ಪುತ್ರ ಪ್ರತಾಪನೊಂದಿಗೆ ಆರು ವರ್ಷಗಳ ಹಿಂದೆ ವಿವಾಹವಾಗಿದ್ದ ರಮ್ಯಾ ಕಳೆದ ಅ.29 ರಂದು ಕೆಆರ್‌ಎಸ್‌ನಲ್ಲಿರುವ ತವರು ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. 5.0 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈ ಕಟ್ಟು, ಎಣ್ಣೆ ಕೆಂಪು ಬಣ್ಣ ಮನೆಯಿಂದ ಹೊರಡುವಾಗ ಚೂಡಿದಾರ್ ಧರಿಸಿದ್ದಾಳೆ. ಈಕೆ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.