ಬೆಂಗಳೂರು : ರಾತ್ರಿ ಕ್ಯಾಬ್ ಚಾಲಕನ ಜತೆಗೆ ಮದ್ಯ ಸೇವಿಸಿ, ಊಟ ಮಾಡಿ ಮಲಗಿದ್ದ ಇಬ್ಬರು ಅಪರಿಚಿತರು ಬೆಳಗಾಗುವುದರೊಳಗೆ ಕ್ಯಾಬ್ ಚಾಲಕನ ಮೊಬೈಲ್, ನಗದು ಹಾಗೂ ಕಾರನ್ನು ಕದ್ದು ಪರಾರಿಯಾಗಿರುವ ಘಟನೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಏ.29ರ ಮುಂಜಾನೆ ಈ ಘಟನೆ ನಡೆದಿದೆ. ಈ ಸಂಬಂಧ ಭದ್ರಾವತಿ ಮೂಲದ ಕ್ಯಾಬ್ ಚಾಲಕ ಪ್ರವೀಣ್ ಕುಮಾರ್(35) ತಡವಾಗಿ ನೀಡಿದ ದೂರಿನ ಮೇರೆಗೆ ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಕ್ಯಾಬ್ ಚಾಲಕ ಪ್ರವೀಣ್ ಕುಮಾರ್ ಉಬರ್ ಅಡಿ ಕಾರು ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಪ್ರತಿ ದಿನ ಕೆಲಸ ಮುಗಿದ ಬಳಿಕ ಮೌರ್ಯ ವೃತ್ತದ ಬಳಿ ಕಾರನ್ನು ನಿಲುಗಡೆ ಮಾಡಿ ಸಮೀಪದ ಗಾಂಧಿ ಪ್ರತಿಮೆ ಎದುರು ವಿಶ್ರಾಂತಿ ಪಡೆಯುತ್ತಿದ್ದರು. ಪ್ರವೀಣ್ ಏ.28ರಂದು ಸಂಜೆ ಸುಮಾರು 5.30ಕ್ಕೆ ಕೆಲಸ ಮುಗಿಸಿ ಮೌರ್ಯ ವೃತ್ತದ ಬಳಿ ಕಾರು ಸ್ವಚ್ಛತೆಯಲ್ಲಿ ನಿರತರಾಗಿದ್ದಾರೆ.
ಮೂವರೂ ಬಾರ್‌ನಲ್ಲಿ ಮದ್ಯ ಸೇವನೆ:
ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಪ್ರವೀಣ್ ಬಳಿಗೆ ಬಂದು ನಾವು ನಿಮ್ಮ ಜಿಲ್ಲೆಯವರು ಎಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ಕಾರು ಸ್ವಚ್ಛತೆಗೆ ಪ್ರವೀಣ್‌ಗೆ ಸಹಾಯ ಮಾಡಿದ್ದಾರೆ. ಸ್ವಚ್ಛತಾ ಕೆಲಸ ಮುಗಿದ ಬಳಿಕ ಮೂವರು ಕ್ಯಾಸಿನೋ ಬಾರ್‌ನಲ್ಲಿ ಮದ್ಯ ಸೇವಿಸಿ ಊಟ ಮಾಡಿದ್ದಾರೆ. ನಂತರ ಮೂವರು ಒಟ್ಟಿಗೆ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ನಿದ್ದೆಗೆ ಜಾರಿದ್ದಾರೆ.
ಮುಂಜಾನೆ ಎಚ್ಚರಗೊಂಡಾಗ ಇಬ್ಬರೂ ನಾಪತ್ತೆ:
ಮಾರನೇ ದಿನ ಮುಂಜಾನೆ ಸುಮಾರು 5.30ಕ್ಕೆ ಕ್ಯಾಬ್ ಚಾಲಕ ಪ್ರವೀಣ್ ಎಚ್ಚರಗೊಂಡಿದ್ದಾರೆ. ಈ ವೇಳೆ ಪಕ್ಕದಲ್ಲಿ ಮಲಗಿದ್ದ ಇಬ್ಬರು ಅಪರಿಚಿತರು ಇಲ್ಲದಿರುವುದು ಕಂಡು ಬಂದಿದೆ. ಬಳಿಕ ತಮ್ಮ ಶರ್ಟ್ ಜೇಬನ್ನು ಪರಿಶೀಲಿಸಿದಾಗ ಮೊಬೈಲ್, 12 ಸಾವಿರ ರು. ನಗದು ಹಾಗೂ ಕಾರಿನ ಕೀ ಇಲ್ಲದಿರುವುದು ಗೊತ್ತಾಗಿದೆ. ಬಳಿಕ ಕಾರು ನಿಲ್ಲಿಸಿದ್ದ ಸ್ಥಳಕ್ಕೆ ತೆರಳಿ ನೋಡಿದಾಗ ಕಾರೂ ಇಲ್ಲದಿರುವುದು ಕಂಡು ಬಂದಿದೆ.
ಹೀಗಾಗಿ ತಮ್ಮ ಜಿಲ್ಲೆಯವರು ಎಂದು ಪರಿಚಯಿಸಿಕೊಂಡು ರಾತ್ರಿ ತನ್ನ ಜತೆಗೆ ಮದ್ಯ ಸೇವಿಸಿ ಊಟ ಮಾಡಿ ಜತೆಯಲ್ಲೇ ಮಲಗಿದ್ದ ಇಬ್ಬರು ಅಪರಿಚಿತರು ಮೊಬೈಲ್, ನಗದು ಹಾಗೂ ಕಾರನ್ನು ಕಳವು ಮಾಡಿದ್ದಾರೆ ಎಂದು ಕ್ಯಾಬ್ ಚಾಲಕ ಪ್ರವೀಣ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.