ಜಾತಿ ಸಮಿತಿ ನಿರ್ಣಯ ಪ್ರಶ್ನಿಸಿದ್ದಕೊತ್ತೂರು ಮಂಜು ಅರ್ಜಿ ವಜಾ

KannadaprabhaNewsNetwork |  
Published : Dec 21, 2023, 01:15 AM IST

ಸಾರಾಂಶ

ಜಾತಿ ಪರಿಶೀಲನಾ ಸಮಿತಿಯ ಜಾತಿ ನಿರ್ಣಯ ಪ್ರಶ್ನಿಸಿದ್ದ ಕೋಲಾರ ಶಾಸಕನ ಅರ್ಜಿ ವಜಾ

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೋಲಾರ ಜಿಲ್ಲಾಧಿಕಾರಿಗಳ ನೇತೃತ್ವದ ಜಾತಿ ಪರಿಶೀಲನಾ ಸಮಿತಿಯು ತಮ್ಮ ಜಾತಿ ಕುರಿತು ಕೈಗೊಂಡಿದ್ದ ನಿರ್ಣಯ ಪ್ರಶ್ನಿಸಿ ಕೋಲಾರದ ಹಾಲಿ ಕಾಂಗ್ರೆಸ್‌ ಶಾಸಕ ಹಾಗೂ ಮುಳಬಾಗಿಲು ಮೀಸಲು ಕ್ಷೇತ್ರದ ಮಾಜಿ ಶಾಸಕ ಜಿ.ಮಂಜುನಾಥ್ (ಕೊತ್ತೂರು ಮಂಜುನಾಥ್) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಜಿ. ಮಂಜುನಾಥ್ ಅವರು ಒಬಿಸಿ ಪ್ರವರ್ಗ-1ಕ್ಕೆ ಸೇರುವ ಬೈರಾಗಿ ಜಾತಿ ಸೇರಿದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳ ನೇತೃತ್ವದ ಜಾತಿ ಪರಿಶೀಲನಾ ಸಮಿತಿ ನಿರ್ಣಯ ಕೈಗೊಂಡಿತ್ತು. ಇದನ್ನು ಪ್ರಶ್ನಿಸಿ ಶಾಸಕ ಮಂಜುನಾಥ್ ಸಲ್ಲಿಸಿದ್ದ ತಕಾರರು ಅರ್ಜಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಜಿ. ಮಂಜುನಾಥ್ 2013ರಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಜೆಡಿಎಸ್ ಪರಾಜಿತ ಅಭ್ಯರ್ಥಿ ಮುನಿನಂಜಪ್ಪ ಜಾತಿ ಪ್ರಮಾಣದ ಸಿಂಧುತ್ವ ಪ್ರಶ್ನಿಸಿದ್ದರು. ಈ ಪ್ರಕರಣ ತಹಸೀಲ್ದಾರ್‌ ಹಾಗೂ ಜಿಲ್ಲಾಧಿಕಾರಿ, ಸಿವಿಲ್ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ವಿಚಾರಣೆಗೊಳಪಟ್ಟಿತ್ತು. ಅಂತಿಮವಾಗಿ ಹೈಕೋರ್ಟ್ ಮಂಜುನಾಥ್ ಅರ್ಜಿಯನ್ನು ವಜಾಗೊಳಿಸಿತ್ತು. ಇದರ ವಿರುದ್ಧ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ಸುಪ್ರೀಂಕೋರ್ಟ್ ಅರ್ಜಿ ವಜಾಗೊಳಿಸಿ, ಜಾತಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿತ್ತು. ಜಾತಿ ಪರಿಶೀಲನಾ ಸಮಿತಿಯ ನಿರ್ಣಯದ ಬಗ್ಗೆ ಆಕ್ಷೇಪವಿದ್ದರೆ ಮತ್ತೆ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು ಎಂದೂ ಸುಪ್ರೀಂ ಕೋರ್ಟ್ ಹೇಳಿತ್ತು.

ಅದರಂತೆ ಜಿಲ್ಲಾಧಿಕಾರಿಗಳ ಜಾತಿ ಪರಿಶೀಲನಾ ಸಮಿತಿಯು ಮಂಜುನಾಥ್‌ ಅವರ ಜಾತಿ ಪರಿಶೀಲಿಸಿತ್ತು. ಅಂತಿಮವಾಗಿ ಜಿ. ಮಂಜುನಾಥ್ ಅವರು ಬುಡಗ ಜಂಗಮ ಜಾತಿಗೆ ಸೇರಿಲ್ಲ. ಅವರು ಬೈರಾಗಿ ಜಾತಿ ಸೇರಿದವರು. ಆ ಬುಡಗ ಜಂಗಮ ಪರಿಶಿಷ್ಟ ಜಾತಿಯಾದರೆ, ಬೈರಾಗಿ ಒಬಿಸಿ ಪ್ರವರ್ಗ-1ಕ್ಕೆ ಸೇರುತ್ತದೆ ಎಂದು ನಿರ್ಣಯ ಕೈಗೊಂಡಿತ್ತು. ಅದನ್ನು ಮಂಜುನಾಥ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಇದೀಗ ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿದೆ.

ಹೈಕೋರ್ಟ್‌ನ ಈ ಆದೇಶದಿಂದ ಅವರ ಹಾಲಿ ಶಾಸಕ ಸ್ಥಾನಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. 2013ರಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಗೆದ್ದಾಗ ಪಡೆದುಕೊಂಡಿದ್ದ ಸೌಲಭ್ಯಗಳನ್ನು ಪೂರ್ವಾಯನ್ವಯವಾಗುವಂತೆ ಅವರಿಂದ ವಾಪಸ್ ಪಡೆದುಕೊಳ್ಳಬಹುದಾಗಿದೆ.

ಸರ್ಕಾರದ ಪರ ವಕೀಲ ಸಿ. ಜಗದೀಶ ವಾದ ಮಂಡಿಸಿದ್ದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಕುಡಿದು ಕಾರ್‌ ಓಡಿಸಿ ಅಪಘಾತ : ಮಯೂರ್ ವಿರುದ್ಧ ಕೇಸ್‌
ಬಿಲ್ಡರ್‌ ಮನೇಲಿ 18 ಕೋಟಿ ಮೌಲ್ಯದಚಿನ್ನ ಕದ್ದವರ ಪತ್ತೆಗೆ 3 ವಿಶೇಷ ತಂಡ