ಮದ್ಯ ಸೇವಿಸಿ ಬಂದು ಗಲಾಟೆ ಮಾಡುತ್ತಿದ್ದ ಮಗನ ಕಾಟ ಸಹಿಸಲಾರದೆ ಆತನ ಮೇಲೆ ಹಲ್ಲೆ ನಡೆಸಿ ತಂದೆ ಹತ್ಯೆಗೈದಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಬೆಂಗಳೂರು : ಮದ್ಯ ಸೇವಿಸಿ ಬಂದು ಗಲಾಟೆ ಮಾಡುತ್ತಿದ್ದ ಮಗನ ಕಾಟ ಸಹಿಸಲಾರದೆ ಆತನ ಮೇಲೆ ಹಲ್ಲೆ ನಡೆಸಿ ತಂದೆ ಹತ್ಯೆಗೈದಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ನಾಗದೇವನಹಳ್ಳಿಯ ಚಿತ್ರಕೂಟ ಸಮೀಪದ ನಿವಾಸಿ ರಾಜೇಶ್ (25) ಕೊಲೆಯಾದ ದುರ್ದೈವಿ. ಈ ಕೃತ್ಯ ಸಂಬಂಧ ಮೃತನ ತಂದೆ ಲಿಂಗಪ್ಪನನ್ನು ಬಂಧಿಸಿದ್ದಾರೆ. ಕುಡಿದ ಬಂದು ಮನೆಯ ಗಾಜು ಒಡೆದು ರಾತ್ರಿ ಗಲಾಟೆ ಮಾಡುತ್ತಿದ್ದ ಮಗನನ್ನು ಲಿಂಗಪ್ಪ ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ ಈ ಮಾತಿಗೆ ಬಗ್ಗದೆ ಮತ್ತಷ್ಟು ಗಲಾಟೆ ಜೋರು ಮಾಡಿದಾಗ ಮಗನ ಕೈ-ಕಾಲುಗಳಿಗೆ ಹಗ್ಗ ಕಟ್ಟಿ ಸುಮ್ಮನಾಗಿಸಲು ಲಿಂಗಪ್ಪ ಮುಂದಾಗಿದ್ದಾರೆ. ಆ ಹಂತದಲ್ಲಿ ಹಗ್ಗ ಕುತ್ತಿಗೆ ಜೀರಿಕೊಂಡ ಪರಿಣಾಮ ರಾಜೇಶ್ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನವಿಲೆ ಗ್ರಾಮದ ಲಿಂಗಪ್ಪ ಹಲವು ವರ್ಷಗಳಿಂದ ನಾಗದೇವನಹಳ್ಳಿಯಲ್ಲಿ ನೆಲೆಸಿದ್ದು, ಅಡುಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ರಾಜೇಶ್‌ಗೆ ಮದುವೆಯಾಗಿ ಮಗು ಇದ್ದು, ಐದು ವರ್ಷಗಳ ಹಿಂದೆ ಗಂಡನ ಕಾಟ ತಾಳಲಾರದೆ ಪತ್ನಿ ಪ್ರತ್ಯೇಕವಾಗಿದ್ದಾರೆ. ಪ್ರತಿ ದಿನ ಕಂಠಮಟ್ಟ ಮದ್ಯ ಸೇವಿಸಿ ಮನೆಗೆ ಬಂದು ಜಗಳ ಮಾಡುತ್ತಿದ್ದ. ಮಗನಿಗೆ ಲಿಂಗಪ್ಪ ಬುದ್ಧಿವಾದ ಹೇಳಿ ಸಮಾಧಾನಪಡಿಸುತ್ತಿದ್ದರು. ಆದರೆ ರಾಜೇಶ್ ಮಾತ್ರ ಬದಲಾಗಲಿಲ್ಲ ಎನ್ನಲಾಗಿದೆ.
ಎಂದಿನಂತೆ ಶುಕ್ರವಾರ ರಾತ್ರಿ ಸಹ ಕುಡಿದು ಮನೆಗೆ ಬಂದು ರಾಜೇಶ್ ಗಲಾಟೆ ಶುರು ಮಾಡಿದ್ದಾನೆ. ಆಗ ಮಗನಿಗೆ ಬೈದು ಲಿಂಗಪ್ಪ ಬುದ್ಧಿ ಮಾತು ಹೇಳಿದರೂ ಕೇಳದೆ ಗಲಾಟೆ ಜೋರು ಮಾಡಿದ್ದಾನೆ. ಮನೆ ಕಿಟಕಿ ಗಾಜು ಒಡೆದು ಹಾಕಿದ್ದಲ್ಲದೆ ಮಹಡಿಯಲ್ಲಿ ನೆಲೆಸಿದ್ದ ಬಾಡಿಗೆದಾರರ ಮನೆಗೂ ತೆರಳಿ ಮಧ್ಯ ರಾತ್ರಿ ಗಲಾಟೆ ಮಾಡಿದ್ದಾನೆ. ಈ ವರ್ತನೆಯಿಂದ ಸಿಟ್ಟಿಗೆದ್ದ ಲಿಂಗಪ್ಪ ಅವರು, ಮಗನಿಗೆ ಎರಡು ಬಾರಿಸಿದ್ದಾರೆ. ಆಗ ಕೆಳಗೆ ಬಿದ್ದ ಮಗನ ಕೈ-ಕಾಲು ಕಟ್ಟಿ ಸುಮ್ಮನಾಗಿಸಲು ಅವರು ಯತ್ನಿಸಿದ್ದಾರೆ. ಆದರೆ ಈ ಹಂತದಲ್ಲಿ ಕುತ್ತಿಗೆಗೆ ಹಗ್ಗ ಜೀರಿಕೊಂಡ ಪರಿಣಾಮ ರಾಜೇಶ್ ಮೃತಪಟ್ಟಿದ್ದಾನೆ. ಈ ಘಟನೆ ಬಗ್ಗೆ ಪೊಲೀಸರಿಗೆ ಮೃತನ ಸೋದರ ಸಂಬಂಧಿ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಕೃತ್ಯ ಸಂಬಂಧ ಮೃತನ ತಂದೆಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.