ಕೌಟುಂಬಿಕ ಕಲಹ ಹಿನ್ನೆಲೆ ಉಳಿಯಿಂದ ಚುಚ್ಚಿ ಪತ್ನಿಯ ಹತ್ಯೆಗೈದು ಠಾಣೆಗೆ ಶರಣಾದ ಭೂಪ

KannadaprabhaNewsNetwork | Updated : May 17 2025, 05:15 AM IST
Follow Us

ಸಾರಾಂಶ

ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ನಡೆದ ಜಗಳದ ವೇಳೆ ಮರಗೆಲಸಕ್ಕೆ ಬಳಸುವ ಉಳಿಯಿಂದ ಪತಿಯೇ ಪತ್ನಿಗೆ ಚುಚ್ಚಿ ಹತ್ಯೆ ಮಾಡಿರುವ ಘಟನೆ ಬಾಣಸವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ನಡೆದ ಜಗಳದ ವೇಳೆ ಮರಗೆಲಸಕ್ಕೆ ಬಳಸುವ ಉಳಿಯಿಂದ ಪತಿಯೇ ಪತ್ನಿಗೆ ಚುಚ್ಚಿ ಹತ್ಯೆ ಮಾಡಿರುವ ಘಟನೆ ಬಾಣಸವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಾಣಸವಾಡಿಯ ಬಚ್ಚಪ್ಪ ಲೇಔಟ್‌ನ ಕಲೈವಾಣಿ (47) ಹತ್ಯೆಯಾದ ದುರ್ದೈವಿ. ಶುಕ್ರವಾರ ಮುಂಜಾನೆ ಸುಮಾರು 4 ಗಂಟೆಗೆ ಈ ಘಟನೆ ನಡೆದಿದೆ. ಈ ಸಂಬಂಧ ಆರೋಪಿ ರಮೇಶ್‌(50) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ: ಕಲೈವಾಣಿಯ ಮೊದಲ ಪತಿ ಮತ್ತು ಆರೋಪಿ ರಮೇಶ್‌ನ ಮೊದಲ ಪತ್ನಿ ಮೃತಪಟ್ಟಿದ್ದಾರೆ. ಹೀಗಾಗಿ ಇಬ್ಬರು 10 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ 9 ವರ್ಷದ ಮಗನಿದ್ದಾನೆ. ರಮೇಶ್‌ ವೃತ್ತಿಯಲ್ಲಿ ಮರಗೆಲಸ ಮಾಡಿದರೆ, ಕಲೈವಾಣಿ ಮನೆಗೆಲಸ ಮಾಡುತ್ತಿದ್ದರು.

ಈ ನಡುವೆ ರಮೇಶ್‌ ಆಗಾಗ ತನ್ನ ಮೊದಲ ಪತ್ನಿ ಇಬ್ಬರು ಹೆಣ್ಣು ಮಕ್ಕಳು ಭೇಟಿಯಾಗಿ ಮಾತನಾಡುತ್ತಿದ್ದ. ಇದಕ್ಕೆ ಕಲೈವಾಣಿ ಆಕ್ಷೇಪವಿತ್ತು. ಈ ವಿಚಾರವಾಗಿ ಕಳೆದ ಒಂದು ವರ್ಷದಿಂದ ದಂಪತಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಗುರುವಾರ ರಾತ್ರಿ ಸಹ ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದೆ. ಈ ವೇಳೆ ಕಲೈವಾಣಿ, ರಮೇಶ್‌ನ ಮೊದಲ ಪತ್ನಿಯ ಇಬ್ಬರು ಹೆಣ್ಣು ಮಕ್ಕಳನ್ನು ಕುರಿತು ಅವಾಚ್ಯಶಬ್ದಗಳಿಂದ ನಿಂದಿಸಿದ್ದರು. ಹೀಗಾಗಿ ರಮೇಶ್‌ ಕೋಪಗೊಂಡಿದ್ದ.

ಹತ್ಯೆಗೈದು ಠಾಣೆಗೆ ಬಂದ:

ಶುಕ್ರವಾರ ಮುಂಜಾನೆ ಮತ್ತೆ ದಂಪತಿ ನಡುವೆ ಜಗಳ ಶುರುವಾಗಿದ್ದು, ಈ ವೇಳೆ ರಮೇಶ್‌ ಮರಗೆಲಸಕ್ಕೆ ಬಳಸುವ ಉಳಿಯಿಂದ ಪತ್ನಿ ಕಲೈವಾಣಿಗೆ ಮನಬಂದಂತೆ ಚುಚ್ಚಿ ಹತ್ಯೆ ಮಾಡಿದ್ದಾನೆ. ಬಳಿಕ ಆತನೇ ಬಾಣಸವಾಡಿ ಠಾಣೆಗೆ ನೇರವಾಗಿ ಬಂದು ಪತ್ನಿ ಹತ್ಯೆ ಮಾಡಿರುವ ವಿಚಾರ ತಿಳಿಸಿದ್ದಾನೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Read more Articles on