ಕೋರ್ಟಿಗೆ ಬಂದ ಗರ್ಭಿಣಿಯನ್ನು ಆಸ್ಪತ್ರೆಗೆ ಕಳಿಸಿದ ಜಡ್ಜ್‌

KannadaprabhaNewsNetwork |  
Published : Jul 11, 2024, 01:35 AM ISTUpdated : Jul 11, 2024, 04:45 AM IST
Pregnancy

ಸಾರಾಂಶ

ಪೋಕ್ಸೋ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ಪತಿಯ ಪರ ‘ಸತ್ಯಾಂಶ’ ನುಡಿಯಲು ಬಂದ ತುಂಬು ಗರ್ಭಿಣಿಯನ್ನು ನ್ಯಾಯಾಧೀಶರು ಆಸ್ಪತ್ರೆಗೆ ಕಳುಹಿಸಲು ಸೂಚಿಸಿದರು.

ವೆಂಕಟೇಶ್ ಕಲಿಪಿ

 ಬೆಂಗಳೂರು :  ಅಪ್ರಾಪ್ತೆಯಾಗಿದ್ದ ತನ್ನನ್ನು ವಿವಾಹವಾದ ಕಾರಣ ಅತ್ಯಾಚಾರ, ಅಪಹರಣ ಆರೋಪ ಮತ್ತು ಪೋಕ್ಸೋ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ಪತಿಯ ಪರ ‘ಸತ್ಯಾಂಶ’ ನುಡಿಯಲು ಬಂದ ತುಂಬು ಗರ್ಭಿಣಿಯನ್ನು (ಸಂತ್ರಸ್ತೆ) ಕಂಡು ಆಘಾತ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ನೆಮ್ಮದಿಯಿಂದ ಮಗುವಿಗೆ ಜನ್ಮ ನೀಡಲು ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ ಅಪರೂಪದ ಘಟನೆ ಹೈಕೋರ್ಟ್‌ನಲ್ಲಿ ಇತ್ತೀಚೆಗೆ ನಡೆದಿದೆ.

ನ್ಯಾಯಮೂರ್ತಿಗಳ ಸೂಚನೆಯಂತೆ ಗರ್ಭಿಣಿಯನ್ನು ಪೋಷಕರು ಕೆ.ಸಿ. ಜನರಲ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ನಡುವೆ ಬಂಧನಕ್ಕೆ ಒಳಗಾಗಿರುವ ಸಂತ್ರಸ್ತೆಯ ಪತಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಅಪ್ರಾಪ್ತೆಯನ್ನು ಮದುವೆಯಾಗಿ, ಗರ್ಭಿಣಿ ಮಾಡಿದ ಕಾರಣಕ್ಕೆ ವಿವಿಧ ಆರೋಪದ ಮೇಲೆ ಬಾಲ್ಯ ವಿವಾಹ ತಡೆ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯಡಿ ನಗರದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ರದ್ದುಪಡಿಸುವಂತೆ ಕೋರಿ ಬಂಧಿತ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ ಸಂತ್ರಸ್ತೆ ಸಹ ಹಾಜರಾಗಿದ್ದರು.

ಈ ನಡುವೆ ಪ್ರಕರಣದಲ್ಲಿ ತಾವು ಹೇಳಿದ ಮಾದರಿಯಲ್ಲಿಯೇ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮುಂದೆ ಸ್ವ ಇಚ್ಛೆ ಹೇಳಿಕೆ ನೀಡುವಂತೆ ಸಂತ್ರಸ್ತೆಗೆ (ಅರ್ಜಿದಾರನ ಪತ್ನಿ) ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ಅರ್ಜಿದಾರನ ಪರ ವಕೀಲರು ಆರೋಪಿಸಿದ್ದರು. ಈ ಕುರಿತು ಸತ್ಯಾಂಶ ನುಡಿಯಲು ಸಂತ್ರಸ್ತೆಯನ್ನು ಕೋರ್ಟ್‌ಗೆ ಕರೆ ತರಲಾಗಿತ್ತು.

ಸಂತ್ರಸ್ತೆಯು 9 ತಿಂಗಳ ತುಂಬು ಗರ್ಭೀಣಿಯಾಗಿದ್ದು, ಒಂದೆರಡು ದಿನದಲ್ಲೇ ಹರಿಗೆಯಾಗುವುದಾಗಿ ವೈದ್ಯರು ತಿಳಿಸಿರುವ ವಿಚಾರ ಅರಿತ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಪೊಲೀಸರ ಪರ ಹಾಜರಿದ್ದ ಸರ್ಕಾರಿ ಅಭಿಯೋಜಕಕರಿಗೆ, ಇಲ್ಲದ ಸಮಸ್ಯೆ ಸೃಷ್ಟಿಸಬಾರದು. ನಿಜವಾಗಿಯೂ ಅಪರಾಧ ಕೃತ್ಯ ನಡೆದಿದ್ದರೆ ಕ್ರಮ ಜರುಗಿಸಬೇಕು. ಸುಮ್ಮನೆ ಆರೋಪ ಮಾಡಬಾರದು. ಸ್ವ ಇಚ್ಛೆ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮುಂದೆ ದಾಖಲಿಸಲಿ, ಸಂತ್ರಸ್ತೆ ಏನು ದಾಖಲಿಸಬೇಕೋ, ಅದನ್ನು ಹೇಳುತ್ತಾರೆ. ಆದರೆ, ಸಂತ್ರಸ್ತೆಗೆ ಎರಡು ಮೂರು ದಿನದಲ್ಲಿ ಹೆರಿಗೆಯಾಗುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಹಂತದಲ್ಲಿ ತುಂಬು ಗರ್ಭಿಣಿಗೆ ತೊಂದರೆ ನೀಡಿದರೆ ಹೇಗೆ? ಆಕೆಯನ್ನು ಏಕೆ ಕರೆದುಕೊಂಡು ಬರಲಾಗಿದೆ? ಈ ಓಡಾಟದಿಂದ ಮಗುವಿಗೆ ಏನಾಗಬೇಕು ಎಂದು ಪ್ರಶ್ನಿಸಿದರು.

ನಂತರ ಕೂಡಲೇ ಸಂತ್ರಸ್ತೆಯನ್ನು ಕೆ.ಸಿ. ಜನರಲ್‌ ಆಸ್ಪತ್ರೆಗೆ ದಾಖಲಿಸಬೇಕು. ಹೆರಿಗೆ ನಂತರ ಸಂತ್ರಸ್ತೆಯು ಮ್ಯಾಜಿಸ್ಟ್ರೇಟ್‌ ಮುಂದೆ ಸ್ವ ಇಚ್ಛೆ ಹೇಳಿಕೆ ನೀಡಬೇಕು. ಹೆರಿಗೆ ವರದಿ ಮತ್ತು ಡಿಎನ್‌ಎ ವರದಿಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಮೂರ್ತಿಗಳು ವಿಚಾರಣೆಯ ಮುಂದೂಡಿದರು.

ಪ್ರಕರಣದ ವಿವರ

ಅರ್ಜಿದಾರ ಮತ್ತು ಸಂತ್ರಸ್ತೆ ಒಂದು ವರ್ಷದ ಹಿಂದೆ ಪೋಷಕರು ನಿಶ್ಚಯಿಸಿದಂತೆ ವಿವಾಹವಾಗಿದ್ದರು. ಆ ವೇಳೆ ಸಂತ್ರಸ್ತೆಗೆ 17 ವರ್ಷ 11 ತಿಂಗಳಾಗಿತ್ತು. ಸದ್ಯ 9 ತಿಂಗಳ ತುಂಬು ಗರ್ಭಿಣಿಯಾಗಿರುವ ಸಂತ್ರಸ್ತೆ ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದ್ದರು. 2024ರ ಜೂ.10ರಂದು ಆಕೆಯನ್ನು ತಪಾಸಣೆ ವೇಳೆ ವೈದ್ಯರಿಗೆ ನೀಡಿದ್ದ ಆಧಾರ್‌ ಕಾರ್ಡ್‌ನಲ್ಲಿ ನಮೂದಿಸಿದ್ದ ವಯಸ್ಸಿನ ಪ್ರಕಾರ ಮದುವೆಯಾದಾಗ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದರು ಎಂಬುದು ಮನಗಂಡ ವೈದ್ಯರು, ಪೊಲೀಸರಿಗೆ ಮಾಹಿತಿ ನೀಡಿದ್ದರು.

ಆಸ್ಪತ್ರೆಗೆ ತೆರಳಿದ್ದ ಪೊಲೀಸರು ವೈದ್ಯರ ಮುಂದೆ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡಿದ್ದರು. ನಂತರ ದೂರು ದಾಖಲಿಸಿ ಆಕೆಯ ಪತಿಯನ್ನು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಸಂತ್ರಸ್ತೆಯ ಪತಿ ತನ್ನ ಮೇಲಿನ ಪ್ರಕರಣ ರದ್ದುಪಡಿಸಲು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದು ಇತ್ತೀಚೆಗೆ ವಿಚಾರಣೆಗೆ ಬಂದಿತ್ತು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಖರ್ಚಿಗೆ ಹಣ ನೀಡದ್ದಕ್ಕೆ ಪತ್ನಿಯನ್ನು ಕೊಂದು ಅಪಘಾತದ ಕಥೆ ಕಟ್ಟಿದ ಪತಿರಾಯ
ಕಾರು ಡಿಕ್ಕಿಯಾಗಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸಾವು