ಬೆಂಗಳೂರು : ತನ್ನ ಪತ್ನಿ ಜತೆ ಸಲುಗೆ ಬೆಳೆಸಿದ್ದನ್ನು ಪ್ರಶ್ನಿಸಿದವನ ಹೊಡೆದು ಹತ್ಯೆ

KannadaprabhaNewsNetwork |  
Published : Dec 01, 2024, 01:30 AM ISTUpdated : Dec 01, 2024, 05:37 AM IST
Chethan | Kannada Prabha

ಸಾರಾಂಶ

ತನ್ನ ಪತ್ನಿ ಜತೆ ಸಲುಗೆ ಬೆಳೆಸಿದ್ದನ್ನು ಪ್ರಶ್ನಿಸಿದವನ ಮೇಲೆ ಕೋಪಗೊಂಡು ಹಲ್ಲೆ ನಡೆಸಿ ಕೊಲೆ ಮಾಡಿದ್ದ ವ್ಯಕ್ತಿ ಸೇರಿ ಇಬ್ಬರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ತನ್ನ ಪತ್ನಿ ಜತೆ ಸಲುಗೆ ಬೆಳೆಸಿದ್ದನ್ನು ಪ್ರಶ್ನಿಸಿದವನ ಮೇಲೆ ಕೋಪಗೊಂಡು ಹಲ್ಲೆ ನಡೆಸಿ ಕೊಲೆ ಮಾಡಿದ್ದ ವ್ಯಕ್ತಿ ಸೇರಿ ಇಬ್ಬರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂದ್ರಹಳ್ಳಿ ಮುಖ್ಯರಸ್ತೆಯ ಸಾಯಿಬಾಬಾನಗರದ ಎಚ್‌.ಎಸ್‌.ಕಾರ್ತಿಕ್ ಹಾಗೂ ಆತನ ಸ್ನೇಹಿತ ಚೇತನ್ ಕುಮಾರ್ ಬಂಧಿತರಾಗಿದ್ದು, ಎರಡು ದಿನಗಳ ಹಿಂದೆ ಆಂದ್ರಹಳ್ಳಿಯ ಅವಿನಾಶ್‌ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವಿನಾಶ್‌ ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದ. ಈ ಪ್ರಕರಣ ಸಂಬಂಧ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಎದುರು ಮನೆ ಪ್ರೇಮ ಪುರಾಣ:

ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಅವಿನಾಶ್‌ಗೆ 9 ತಿಂಗಳ ಮಗುವಿದೆ. ಖಾಸಗಿ ಶಾಲೆಯಲ್ಲಿ ಬಸ್ ಚಾಲಕನಾಗಿದ್ದು, ಕುಟುಂಬದ ಜತೆ ಆಂದ್ರಹಳ್ಳಿ ಸಮೀಪದ ಸಾಯಿಬಾಬಾನಗರದಲ್ಲಿ ವಾಸವಾಗಿದ್ದ. ಈತನ ಎದುರು ಮನೆಯಲ್ಲಿ ಆಟೋ ಚಾಲಕ ಕಾರ್ತಿಕ್ ವಾಸವಾಗಿದ್ದ. ಅವಿನಾಶ್ ಕುಟುಂಬಕ್ಕೆ ಕಾರ್ತಿಕ್ ಪರಿಚಯವಾಗಿದ್ದು, ಕಾಲ ಕಳೆದಂತೆ ಅವಿನಾಶ್‌ ಪತ್ನಿ ಜತೆ ಕಾರ್ತಿಕ್‌ಗೆ ಆಪ್ತತೆ ಮೂಡಿತ್ತು ಎನ್ನಲಾಗಿದೆ.

ಈ ವಿಷಯ ತಿಳಿದು ಅವಿನಾಶ್ ಕೋಪಗೊಂಡಿದ್ದ. ಇದೇ ವಿಷಯವಾಗಿ ಆತ ಪತ್ನಿಗೂ ಬುದ್ಧಿ ಮಾತು ಹೇಳಿದ್ದ. ಈ ನಡುವೆ ₹50 ಸಾವಿರ ಸಾಲವನ್ನು ಅವಿನಾಶ್‌ನಿಂದ ಕಾರ್ತಿಕ್ ಪಡೆದಿದ್ದ. ತನ್ನ ಪತ್ನಿ ಜತೆ ಸಲುಗೆ ವಿಷಯ ತಿಳಿದ ನಂತರ ಹಣ ಮರಳಿಸುವಂತೆ ಅವಿನಾಶ್ ತಾಕೀತು ಮಾಡಿದ್ದ. ಆದರೆ ಈತನ ಮಾತಿಗೆ ಆತ ಕ್ಯಾರೇ ಎಂದಿರಲಿಲ್ಲ. ಅಂತೆಯೇ ಆಂದ್ರಹಳ್ಳಿಯ ಅನುಪಮಾ ಶಾಲೆ ಸಮೀಪ ಗುರುವಾರ ಕಾರ್ತಿಕ್‌ನನ್ನು ಅಡ್ಡಗಟ್ಟಿದ ಅವಿನಾಶ್, ತನ್ನ ಪತ್ನಿ ಸಂಗ ಬಿಡುವಂತೆ ಬೈದಿದ್ದ.ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಕಾರ್ತಿಕ್‌ಗೆ ಆತನ ಸ್ನೇಹಿತ ಚೇತನ್ ಸಾಥ್ ಕೊಟ್ಟಿದ್ದಾನೆ. ಈ ಹಂತದಲ್ಲಿ ಅವಿನಾಶ್‌ಗೆ ಕೈ ಬಳೆಯಿಂದ ಗುದ್ದಿ ಆರೋಪಿಗಳು ತೀವ್ರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಹಲ್ಲೆಗೊಳಗಾಗಿ ಕುಸಿದು ಬಿದ್ದಿದ್ದ ಅವಿನಾಶ್‌ ರಕ್ಷಿಸಿ ಸಮೀಪದ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ಅವಿನಾಶ್ ಮೃತಪಟ್ಟಿದ್ದಾನೆ. ಮೃತನ ಕುಟುಂಬದವರ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!