ಮೊಬೈಲ್ ಕದ್ದು ಆನ್‌ಲೈನ್‌ ಪೇಮೆಂಟ್‌ ಆ್ಯಪ್‌ ಮೂಲಕ ಹಣ ದೋಚುತ್ತಿದ್ದವ ಸೆರೆ!

KannadaprabhaNewsNetwork |  
Published : Feb 28, 2024, 02:36 AM ISTUpdated : Feb 28, 2024, 09:31 AM IST
Ramamurthy Nagar 1 | Kannada Prabha

ಸಾರಾಂಶ

ಬಸ್‌ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರಿಂದ ಮೊಬೈಲ್ ಕದ್ದು ಬಳಿಕ ಆ ಮೊಬೈಲ್‌ನಲ್ಲಿರುವ ಆನ್‌ಲೈನ್‌ ಪೇಮೆಂಟ್‌ ಆ್ಯಪ್‌ಗಳ ಮೂಲಕ ಹಣ ದೋಚುತ್ತಿದ್ದ ಖದೀಮನೊಬ್ಬನನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಸ್‌ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರಿಂದ ಮೊಬೈಲ್ ಕದ್ದು ಬಳಿಕ ಆ ಮೊಬೈಲ್‌ನಲ್ಲಿರುವ ಆನ್‌ಲೈನ್‌ ಪೇಮೆಂಟ್‌ ಆ್ಯಪ್‌ಗಳ ಮೂಲಕ ಹಣ ದೋಚುತ್ತಿದ್ದ ಖದೀಮನೊಬ್ಬನನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆವಲಹಳ್ಳಿ ನಿವಾಸಿ ಆರ್‌.ವಿಘ್ನೇಶ್ ಬಂಧಿತನಾಗಿದ್ದು, ಆರೋಪಿಯಿಂದ 8 ಲಕ್ಷ ರು. ಮೌಲ್ಯದ 38 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಕೆ.ಆರ್‌.ಪುರ ಸಮೀಪದ ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಮೊಬೈಲ್ ಕಳ್ಳತನ ಕೃತ್ಯಗಳು ಹೆಚ್ಚಾಗಿದ್ದವು. 

ಈ ಹಿನ್ನೆಲೆಯಲ್ಲಿ ಬಸ್‌ ನಿಲ್ದಾಣದ ಬಳಿ ಮಾರುವೇಷದಲ್ಲಿ ಇನ್ಸ್‌ಪೆಕ್ಟರ್‌ ಎಚ್‌.ಮುತ್ತುರಾಜು ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ಉಮೇಶ್ ಕಾರ್ಯಾಚರಣೆ ನಡೆಸಿ ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ್ದಾಗಲೇ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಬಳಿಕ ವಿಚಾರಣೆಗೊಳಪಡಿಸಿದಾಗ ಆನ್‌ಲೈನ್‌ ಹಣ ವರ್ಗಾವಣೆ ಕೃತ್ಯ ಬಯಲಾಗಿದೆ.

ಇಸ್ಪೀಟ್‌ ಗೀಳಿಗೆ ಕಳ್ಳತನ: ಆಂಧ್ರಪ್ರದೇಶ ಮೂಲದ ವಿಘ್ನೇಶ್‌, ಆವಲಹಳ್ಳಿಯಲ್ಲಿ ತನ್ನ ಪತ್ನಿ ಜತೆ ಆತ ನೆಲೆಸಿದ್ದ. ವಿಪರೀತ ಜೂಜಿನ ಹುಚ್ಚು ಹತ್ತಿಸಿಕೊಂಡಿದ್ದ ಆತ, ಇದಕ್ಕಾಗಿ ಸುಲಭವಾಗಿ ಹಣ ಸಂಪಾದನೆಗೆ ಜೇಬುಗಳ್ಳತನಕ್ಕಿಳಿದಿದ್ದ. 

ಕೆ.ಆರ್‌. ಪುರದ ಟಿನ್ ಫ್ಯಾಕ್ಟರಿ ಬಳಿ ಬಸ್‌ ಹತ್ತುವ ವೇಳೆ ಮಹಿಳೆಯರ ವ್ಯಾನಿಟಿ ಬ್ಯಾಗ್‌ಗಳಿಂದ ಮೊಬೈಲ್ ಎಗರಿಸುತ್ತಿದ್ದನು. ನಂತರ ಆ ಮೊಬೈಲ್‌ನಲ್ಲಿ ಲಿಂಕ್ ಹೊಂದಿದ್ದ ಫೋನ್ ಪೇ, ಗೂಗಲ್ ಪೇ ಹಾಗೂ ಪೇಟಿಎಂ ಆ್ಯಪ್‌ಗಳನ್ನು ಬಳಸಿಕೊಂಡು ತನ್ನ ಸ್ನೇಹಿತನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿಕೊಳ್ಳುತ್ತಿದ್ದ. 

ಅಲ್ಲದೆ ಕೆಲವು ಬಾರಿ ಕದ್ದ ಮೊಬೈಲ್‌ನಲ್ಲಿ ಸಿಮ್‌ಗಳನ್ನು ಬದಲಾಯಿಸುತ್ತಿದ್ದ. ಹೀಗೆ ಸಿಮ್ ಬದಲಾಯಿಸಿದಾಗ ಆ ಮೊಬೈಲ್‌ನಲ್ಲಿ ಪೇಮೆಂಟ್‌ ಆ್ಯಪ್‌ಗಳ ಪಿನ್ ಕೋಡ್‌ಗಳನ್ನು ಹೊಸದಾಗಿ ಆಪ್‌ಡೇಟ್‌ ಮಾಡಿ ಆರೋಪಿ ಹಣ ದೋಚುತ್ತಿದ್ದ. 

ಹೀಗೆ ಕಳವು ಮಾಡಿದ ಹಣವನ್ನು ಆಂಧ್ರಪ್ರದೇಶದ ಚಿತ್ತೂರಿನಲ್ಲಿದ್ದ ತನ್ನೂರಿಗೆ ತೆರಳಿ ಜೂಜಾಡಿ ಆರೋಪಿ ಕಳೆಯುತ್ತಿದ್ದ. ಹಣ ಖಾಲಿಯಾದ ಬಳಿಕ ಮತ್ತೆ ನಗರಕ್ಕೆ ಬಂದು ಮೊಬೈಲ್ ಎಗರಿಸುತ್ತಿದ್ದ. 

ಇತ್ತೀಚಿಗೆ ಟಿನ್ ಪ್ಯಾಕ್ಟರಿ ಬಸ್‌ ನಿಲ್ದಾಣದಲ್ಲಿ ಮೊಬೈಲ್ ಕಳ್ಳತನ ಕಾಟದ ಬಗ್ಗೆ ರಾಮಮೂರ್ತಿನಗರ ಠಾಣೆಯಲ್ಲಿ ದೂರುಗಳು ದಾಖಲಾದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕದ್ದ ಮೊಬೈಲ್‌ ಮಾರುತ್ತಿರಲಿಲ್ಲ! 
ಕೇವಲ ಪಿಯುಸಿ ವರೆಗೆ ಮಾತ್ರ ಓದಿದ್ದ ಈ ಕದೀಮ ತಾನು ಕದ್ದಿರುವ ಮೊಬೈಲ್‌ಗಳನ್ನು ಯಾರಿಗೂ ಮಾರಾಟ ಮಾಡುತ್ತಿರಲಿಲ್ಲ. 

ಮಾರಾಟ ಮಾಡಿದರೆ ಯಾರಿಗಾದರೂ ಗೊತ್ತಾಗಬಹುದು ಎಂಬ ಭಯದಿಂದ ಸ್ವಿಚ್‌ ಆಫ್‌ ಮಾಡಿ ತನ್ನಲ್ಲಿಯೇ ಇಟ್ಟುಕೊಳ್ಳುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದು, ಇದೀಗ ಎಲ್ಲ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಈವರೆಗೆ ನಗರದಲ್ಲಿ ಮೊಬೈಲ್ ಕಳ್ಳತನಗಳು ವರದಿಯಾಗುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ ಕಳವು ಮಾಡಿದ ಮೊಬೈಲ್‌ಗಳಲ್ಲಿದ್ದ ಆನ್‌ಲೈನ್‌ ಪೇಮೆಂಟ್ ಆ್ಯಪ್‌ಗಳನ್ನು ಬಳಸಿಕೊಂಡು ಹಣ ದೋಚುವ ಹೊಸ ಮಾದರಿ ಕೃತ್ಯ ಬೆಳಕಿಗೆ ಬಂದಿದೆ. ಹೀಗಾಗಿ ಮೊಬೈಲ್ ಹಾಗೂ ಆನ್‌ಲೈನ್ ಪೇಮೆಂಟ್ ಆ್ಯಪ್‌ಗಳ ಸುರಕ್ಷತೆಗೆ ಜನರು ಎಚ್ಚರಿಕೆ ವಹಿಸಬೇಕು. - ಬಿ.ದಯಾನಂದ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!