ಬೆಂಗಳೂರು : ತನ್ನ ಸ್ನೇಹ ಕಡಿತಗೊಂಡಿದ್ದ ಗೆಳತಿಯನ್ನು ಚಾಕುವಿನಿಂದ ಇರಿದು ವಿವಾಹಿತ ವ್ಯಕ್ತಿ ಕೊಂದರೆ, ಅದೇ ಸ್ಥಳದಲ್ಲಿ ತನ್ನ ಕಣ್ಮುಂದೆಯೇ ಮಗಳನ್ನು ಕೊಂದ ಕಿರಾತಕನನ್ನು ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಮೃತಳ ತಾಯಿ ಹತ್ಯೆಗೈದ ಭೀಕರ ಘಟನೆ ಜೆ.ಪಿ.ನಗರ ಸಮೀಪದ ಉದ್ಯಾನದಲ್ಲಿ ಗುರುವಾರ ಮುಸ್ಸಂಜೆ ನಡೆದಿದೆ.
ಶಾಂಕಾಬರಿ ನಗರದ ನಿವಾಸಿ ಅನೂಷಾ (24) ಹಾಗೂ ಗೊರಗುಂಟೆಪಾಳ್ಯದ ಸುರೇಶ್ (42) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತ ಅನೂಷಾ ತಾಯಿ ಗೀತಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೈಮನಸ್ಸು ಬಗೆಹರಿಸಿಕೊಳ್ಳುವ ಸಲುವಾಗಿ ಜೆ.ಪಿ.ನಗರದ ಸಾರಕ್ಕಿ ಸಮೀಪದ ಶಾಕಾಂಬರಿ ನಗರದ ಬಿಬಿಎಂಪಿ ಉದ್ಯಾನಕ್ಕೆ ಸ್ನೇಹಿತೆಯನ್ನು ಭೇಟಿಯಾಗಲು ಸುರೇಶ್ ತೆರಳಿದ್ದ. ಈ ವೇಳೆ ಪರಸ್ಪರ ಮಾತುಕತೆ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಆಗ ಕೆರಳಿದ ಸುರೇಶ್, ಅನೂಷಳಿಗೆ ಚಾಕುವಿನಿಂದ ಇರಿದು ಹತ್ಯೆಗೈಯಲು ಯತ್ನಿಸಿದ್ದಾನೆ. ಅದೇ ವೇಳೆ ಮಗಳನ್ನು ಹಿಂಬಾಲಿಸಿ ಬಂದಿದ್ದ ಮೃತಳ ತಾಯಿ ಗೀತಾ, ಮಗಳ ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಆಕೆಯನ್ನು ದೂರ ತಳ್ಳಿ ಅನೂಷಾಳಿಗೆ ಚಾಕುವಿನಿಂದ ಇರಿದ ಸುರೇಶ್ ತಲೆಗೆ ಹಾಲೋ ಬ್ರಿಕ್ಸ್‌ನಿಂದ ಗೀತಾ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಸುರೇಶ್ ಹಾಗೂ ಗೀತಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ವಿವಾಹಿತ ಎಂದು ಗೊತ್ತಾದ ಮೇಲೆ ದೂರಾದ ಗೆಳತಿ
ಜೆ.ಪಿ.ನಗರದ ಶಾಂಕಾಂಬರಿ ನಗರದಲ್ಲಿ ತನ್ನ ತಾಯಿ ಜತೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಅನೂಷಾ ನೆಲೆಸಿದ್ದಳು. ಕೇರ್ ಟೇಕರ್ ಆಗಿ ತಾಯಿ-ಮಗಳು ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹೀಗೆ ಐದು ವರ್ಷಗಳ ಹಿಂದೆ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಅನೂಷಾಳಿಗೆ ಸುರೇಶ್ ಪರಿಚಯವಾಗಿತ್ತು.
ಇನ್ನು ವಿವಾಹವಾಗಿದ್ದ ಸುರೇಶ್, ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಗೊರಗುಂಟೆಪಾಳ್ಯದಲ್ಲಿ ವಾಸವಾಗಿದ್ದ. ಆದರೆ ಸುರೇಶ್ ವಿವಾಹಿತ ಎಂಬ ಸಂಗತಿ ತಿಳಿದ ಬಳಿಕ ಅನೂಷಾ, ಆತನಿಂದ ದೂರವಾಗಲು ಯತ್ನಿಸಿದ್ದಳು. ಈ ಕಾರಣಕ್ಕೆ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಆಕೆ ಕೆಲಸ ತೊರೆದಿದ್ದಳು. ಆದರೆ ಗೆಳತಿಯನ್ನು ಸುರೇಶ್ ಬಿಡದೆ ಕಾಡುತ್ತಿದ್ದ. ಈ ಅಕ್ರಮ ಸಂಬಂಧ ವಿಚಾರ ತಿಳಿದ ಸುರೇಶ್ ಪತ್ನಿ, ಮನೆಯಲ್ಲಿ ಪತಿ ಮೇಲೆ ಗಲಾಟೆ ಮಾಡಿದ್ದರು. ಅಲ್ಲದೆ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಸುರೇಶ್ ವಿರುದ್ಧ ಅನೂಷಾ ಸಹ ಆರೋಪಿಸಿದ್ದಳು. ಇದೇ ವಿಚಾರವಾಗಿ ಆರ್‌ಎಂಸಿ ಯಾರ್ಡ್ ಠಾಣೆಗೆ ಸಹ ದೂರು ದಾಖಲಾಗಿ ಕೊನೆಗೆ ರಾಜಿ ಸಂಧಾನ ನಡೆದಿತ್ತು. ಆಗ ಅನೂಷಾಳ ಸಹವಾಸಕ್ಕೆ ತಾನು ಹೋಗುವುದಿಲ್ಲವೆಂದು ಸುರೇಶ್ ಮುಚ್ಚಳಿಕೆ ಬರೆದುಕೊಟ್ಟಿದ್ದ. ಹೀಗಿದ್ದರೂ ಗೆಳೆಯನ್ನು ಬಿಟ್ಟಿರಲಿಲ್ಲ ಎಂದು ತಿಳಿದು ಬಂದಿದೆ.ಠಾಣೆಯಲ್ಲಿ ರಾಜಿ, ಪಾರ್ಕ್‌ನಲ್ಲಿ ಮರ್ಡರ್
ಸುರೇಶ್ ಕಿರುಕುಳ ಸಹಿಸಲಾರದೆ ಬೇಸತ್ತ ಅನೂಷಾ, ತನ್ನ ಗೆಳೆಯನ ವಿರುದ್ಧ ಜೆ.ಪಿ.ನಗರ ಪೊಲೀಸ್ ಠಾಣೆಗೆ ಬುಧವಾರ ರಾತ್ರಿ ದೂರು ಕೊಟ್ಟಿದ್ದಳು. ಈ ದೂರಿನ ಮೇರೆಗೆ ಪೊಲೀಸರು, ಸುರೇಶನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಆಗ ತನ್ನ ಪತ್ನಿ ಜತೆ ಠಾಣೆಗೆ ಬಂದಿದ್ದ ಸುರೇಶ್, ತಾನು ಮತ್ತೆ ಅನೂಷಾಳ ತಂಟೆಗೆ ಹೋಗುವುದಿಲ್ಲವೆಂದು ಹೇಳಿ ಮುಚ್ಚಳಿಕೆ ಬರೆದುಕೊಟ್ಟು ಠಾಣೆಯಿಂದ ಹೊರಬಂದಿದ್ದ. ಇದಾದ ಬಳಿಕ ಮತ್ತೆ ಅನೂಷಾಳನ್ನು ಆತ ಹಿಂಬಾಲಿಸಿದ್ದಾನೆ. ಠಾಣೆಯಿಂದ ಮನೆಗೆ ಮರಳುತ್ತಿದ್ದ ಆಕೆಯನ್ನು ಸಂಜೆ 4.30ರ ಸುಮಾರಿಗೆ ಶಾಕಾಂಬರಿ ನಗರದ ಉದ್ಯಾನ ಬಳಿ ಅಡ್ಡಗಟ್ಟಿದ್ದ ಸುರೇಶ್, ಮಾತುಕತೆ ನಡೆಸುವ ಸಲುವಾಗಿ ತಡೆದಿದ್ದಾನೆ.
ಈ ವೇಳೆ ತನ್ನನ್ನು ದೂರ ಮಾಡದಂತೆ ಆತ ಗೊಗರೆದಿದ್ದಾನೆ. ಈ ಪ್ರಸ್ತಾವನ್ನು ಅನೂಷಾ ನಿರಾಕರಿಸಿದ್ದಾಳೆ. ಅಷ್ಟರಲ್ಲಿ ಉದ್ಯಾನ ಬಳಿಗೆ ಸುರೇಶ್ ಬಂದಿರುವ ಸಂಗತಿ ತಿಳಿದು ಅನೂಷಾ ತಾಯಿ ಗೀತಾ ಸಹ ಬಂದಿದ್ದಾರೆ. ಆಗ ಮಾತುಕತೆ ನಡೆದು ಪರಿಸ್ಥಿತಿ ಅತಿರೇಕಕ್ಕೆ ಹೋಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಕೊನೆಗೆ ಸಿಟ್ಟಿಗೆದ್ದು ಅನೂಷಾಳಿಗೆ ಸುರೇಶ್ ಚಾಕುವಿನಿಂದ ಇರಿದಿದ್ದಾನೆ. ಆಗ ಮಗಳ ರಕ್ಷಣೆಗೆ ಧಾವಿಸಿದ ಆಕೆ ತಾಯಿ, ಮಗಳಿಗೆ ಚಾಕು ಇರಿದ ಸುರೇಶ್ ತಲೆಗೆ ಅಲ್ಲೇ ಬಿದ್ದಿದ್ದ ಸಿಮೆಂಟ್ ಇಟ್ಟಿಗೆಯಿಂದ ಹೊಡೆದಿದ್ದಾರೆ. ತಲೆಗೆ ಗಂಭೀರ ಪೆಟ್ಟಾಗಿ ಸುರೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಚೀರಾಟ ಕೇಳಿದ ಜಮಾಯಿಸಿದ ಸಾರ್ವಜನಿಕರು, ತಕ್ಷಣವೇ ಅನೂಷಾಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಆಕೆ ಸಹ ಕೊನೆಯುಸಿರೆಳೆದಿದ್ದಾಳೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಈ ಸಂಬಂಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್ಮೇಲ್
ತನ್ನೊಂದಿಗೆ ಕಳೆದಿದ್ದ ಖಾಸಗಿ ಕ್ಷಣದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸುವುದಾಗಿ ಹೇಳಿ ಅನೂಷಾಳಿಗೆ ಸುರೇಶ್ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಐದು ವರ್ಷಗಳಿಂದ ಅನೂಷಾಳ ಜತೆ ಸುರೇಶ್‌ಗೆ ಅಕ್ರಮ ಸಂಬಂಧವಿತ್ತು. ಈ ವೇಳೆ ಕಳೆದಿದ್ದ ಖಾಸಗಿ ಕ್ಷಣಗಳನ್ನು ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಸುರೇಶ್, ಆ ವಿಡಿಯೋವನ್ನು ತೋರಿಸಿ ಗೆಳತಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ತಾನು ಹೇಳಿದಂತೆ ಕೇಳದೆ ಹೋದರೆ ವಿಡಿಯೋ ಬಹಿರಂಗಪಡಿಸುವುದಾಗಿ ಆತ ಧಮ್ಕಿ ಹಾಕುತ್ತಿದ್ದ ಎಂದು ಮೂಲಗಳು ಹೇಳಿವೆ.