ಸ್ನೇಹಿತನ ಡ್ರಾಪ್ ವೇಳೆ ಬೈಕ್‌ ಬಿದ್ದು ಸವಾರ ಸಾವು

KannadaprabhaNewsNetwork |  
Published : Jan 30, 2024, 02:04 AM IST
ಅಪಘಾತ | Kannada Prabha

ಸಾರಾಂಶ

ಊಟ ಆದ ಬಳಿಕ ಸ್ನೇಹಿತನನ್ನು ಮನೆಗೆ ಬಿಡಲು ಹೋಗುತ್ತಿದ್ದಾಗ ಬೈಕ್‌ ರಸ್ತೆಗೆ ಬಿದ್ದು ಸವಾರ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆಂಚೇನಹಳ್ಳಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸ್ನೇಹಿತನನ್ನು ಡ್ರಾಪ್‌ ಮಾಡಲು ಹೋಗುವಾಗ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಸವಾರ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ಕೆಂಗೇರಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೈಲಸಂದ್ರ ನಿವಾಸಿ ಮಂಜುನಾಥ(27) ಮೃತ ಸವಾರ. ಈತನ ಸ್ನೇಹಿತ ಹಿಂಬದಿ ಸವಾರ ಚಂದ್ರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ರಾತ್ರಿ 9.15ರ ಸುಮಾರಿಗೆ ಕೆಂಚೇನಹಳ್ಳಿ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ.

ರಾತ್ರಿ ತಮ್ಮ ಸ್ನೇಹಿತ ಚಂದ್ರು ಜತೆಗೆ ಊಟ ಮಾಡಿಕೊಂಡು ಕೆಂಚೇನಹಳ್ಳಿಯ ಆತನ ಮನೆಗೆ ಡ್ರಾಪ್‌ ಮಾಡಲು ದ್ವಿಚಕ್ರ ವಾಹನದಲ್ಲಿ ಹೋಗುವಾಗ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಸವಾರರಿಬ್ಬರೂ ಹೆಲ್ಮೆಟ್‌ ಧರಿಸಿರಲಿಲ್ಲ. ಅಪಘಾತದ ವೇಳೆ ಸವಾರ ಮಂಜುನಾಥನ ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಹಿಂಬದಿ ಸವಾರ ಚಂದ್ರು ಸಣ್ಣ ಪುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಅಪರಿಚತ ವಾಹನ ಬೈಕ್‌ಗೆ ಡಿಕ್ಕಿಯಾಗಿ ಸವಾರ ಸಾವು

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಪರಿಚಿತ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ರಾಜಾಜಿನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಕಾಶನಗರದ ನಿವಾಸಿ ವಿಜಯ್‌(29) ಮೃತ ಸವಾರ. ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ರಾಜಾಜಿನಗರದ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

ಖಾಸಗಿ ಕಂಪನಿ ಉದ್ಯೋಯಾಗಿದ್ದ ವಿಜಯ್‌ ರಾತ್ರಿ ದ್ವಿಚಕ್ರ ವಾಹನದಲ್ಲಿ ಸುಜಾತ ಕಡೆಯಿಂದ ನವರಂಗ್‌ ಕಡೆಗೆ ತೆರಳುತ್ತಿದ್ದರು. ಡಾ.ರಾಜ್‌ಕುಮಾರ್‌ ರಸ್ತೆಯ ಅಭಿಮಾನಿ ಹೋಟೆಲ್‌ ಬಳಿ ಹೋಗುವಾಗ ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದ ವಿಜಯ್‌ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಗಾಯಾಳು ವಿಜಯ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ವಿಜಯ್‌ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!