ಪ್ರೀತಿಸಿ ಮದುವೆಯಾದ ಪತ್ನಿ ವಿವಾಹ ವಿಚ್ಛೇದನಕ್ಕೆ ಹಠ ಹಿಡಿದ ಕಾರಣಕ್ಕೆ ಮನೆ ಮುಂದೆ ಆತ್ಮಹತ್ಯೆ

KannadaprabhaNewsNetwork | Updated : Jan 24 2025, 04:25 AM IST

ಸಾರಾಂಶ

ಪ್ರೀತಿಸಿ ಮದುವೆಯಾದ ಪತ್ನಿ ವಿವಾಹ ವಿಚ್ಛೇದನಕ್ಕೆ ಹಠ ಹಿಡಿದ ಕಾರಣಕ್ಕೆ ಬೇಸರಗೊಂಡು ಮಡದಿ ಮನೆ ಎದುರಿನಲ್ಲೇ ಬೆಂಕಿ ಹಚ್ಚಿಕೊಂಡು ಕ್ಯಾಬ್‌ ಚಾಲನಕೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

 ಬೆಂಗಳೂರು :  ಪ್ರೀತಿಸಿ ಮದುವೆಯಾದ ಪತ್ನಿ ವಿವಾಹ ವಿಚ್ಛೇದನಕ್ಕೆ ಹಠ ಹಿಡಿದ ಕಾರಣಕ್ಕೆ ಬೇಸರಗೊಂಡು ಮಡದಿ ಮನೆ ಎದುರಿನಲ್ಲೇ ಬೆಂಕಿ ಹಚ್ಚಿಕೊಂಡು ಕ್ಯಾಬ್‌ ಚಾಲನಕೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಗರದಲ್ಲಿ ಗುರುವಾರ ನಡೆದಿದೆ.

ನಾಗರಬಾವಿ ಸಮೀಪದ ನಿವಾಸಿ ಮಂಜುನಾಥ್ (39) ಮೃತ ದುರ್ದೈವಿ. ನಾಗರಬಾವಿಯ ಎನ್‌ಜಿಇಎಫ್‌ ಲೇಔಟ್‌ನಲ್ಲಿರುವ ಪತ್ನಿ ನಯನ ಮನೆ ಹೊರಗೆ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

2013ರಲ್ಲಿ ತುಮಕೂರು ಜಿಲ್ಲೆಯ ಕ್ಯಾಬ್ ಚಾಲಕ ಮಂಜುನಾಥ್ ಹಾಗೂ ಪ್ರಸಾದನ ಕಲಾವಿದೆ ನಯನ ರಾಜ್ ಪ್ರೀತಿಸಿ ವಿವಾಹವಾಗಿದ್ದು, ದಂಪತಿಗೆ ವಿದ್ವತ್ ಹೆಸರಿನ ಮಗನಿದ್ದಾನೆ. ಮದುವೆ ನಂತರ ಜ್ಞಾನಭಾರತಿಯ ಎನ್‌ಜಿಇಎಫ್‌ ಲೇಔಟ್‌ನಲ್ಲಿ ದಂಪತಿ ನೆಲೆಸಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಇಬ್ಬರೂ ಪ್ರತ್ಯೇಕವಾಗಿದ್ದರು. ಕಳೆದ ವರ್ಷ ವಿವಾಹ ವಿಚ್ಛೇದನ ಕೋರಿ ನಯನ ಸಲ್ಲಿಸಿದ್ದ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಆದರೆ ವಿಚ್ಛೇದನಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮಂಜುನಾಥ್, ಪತ್ನಿ ಒಲೈಕೆಗೆ ಯತ್ನಿಸಿ ವಿಫಲನಾಗಿದ್ದ ಎಂದು ತಿಳಿದು ಬಂದಿದೆ.

ಪದೇ ಪದೇ ಪತ್ನಿ ಮನೆ ಬಳಿ ತೆರಳಿ “ಇನ್ನು ಮುಂದೆ ನಾನು ನಿನ್ನೊಂದಿಗೆ ಯಾವುದೇ ರೀತಿ ಜಗಳವಾಡುವುದಿಲ್ಲ. ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಮ್ಮ ಮಗನನ್ನು ಕರೆದುಕೊಂಡು ಇಬ್ಬರು ಒಟ್ಟಾಗಿ ಇರೋಣವೆಂದು” ಎಂದು ಕಳಕಳಿಯಾಗಿ ಮನವಿ ಮಾಡುತ್ತಿದ್ದ. ಆದರೆ ಈ ಪ್ರಸ್ತಾವನ್ನು ತಿರಸ್ಕರಿಸಿದ್ದ ನಯನ, ಯಾವುದೇ ಕಾರಣಕ್ಕೆ ಬರುವುದಿಲ್ಲ ಎಂದು ಹಠ ಹಿಡಿದ್ದಳು. ಇದೇ ವಿಷಯವಾಗಿ ಮತ್ತೆ ಗಲಾಟೆಗಳಾಗಿದ್ದವು.

ಗುರುವಾರ ಬೆಳಗ್ಗೆ 8.20ರ ಸುಮಾರಿಗೆ ನಯನ ಮನೆಗೆ ತೆರಳಿದ ಮಂಜುನಾಥ್‌,  ತನ್ನೊಂದಿಗೆ ಬರುವಂತೆ ಕೋರಿದ್ದಾನೆ. ಆದರೆ ಆಕೆ ಮನೆ ಬಾಗಿಲು ಕೂಡ ತೆರೆಯಲಿಲ್ಲ. ಪತ್ನಿಯ ಹಠಮಾರಿತನದ ವರ್ತನೆಯಿಂದ ಕೆರಳಿದ ಮಂಜುನಾಥ್‌, ಅಲ್ಲಿಂದ ತೆರಳಿ ಮತ್ತೆ 11 ಗಂಟೆಗೆ ಪತ್ನಿ ಮನೆ ಬಳಿಗೆ ಹೋಗಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಸೊಸೆ ಕುಟುಂಬದ ವಿರುದ್ಧ ದೂರು:

ತಮ್ಮ ಮಗನ ಸಾವಿಗೆ ಸೊಸೆ ನಯನ ಹಾಗೂ ಆಕೆಯ ಕುಟುಂಬದವರು ಕಾರಣರಾಗಿದ್ದಾರೆ ಎಂದು ಆರೋಪಿಸಿ ಜ್ಞಾನಭಾರತಿ ಠಾಣೆಗೆ ಮೃತ ಮಂಜುನಾಥ್ ತಾಯಿ ನಂಜಮ್ಮ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಮೃತನ ಮಂಜುನಾಥ್ ಪತ್ನಿ ನಯನ, ಅತ್ತೆ ನಿರ್ಮಲ, ಮಾವ ರಾಜು ಹಾಗೂ ನಯನ ಸೋದರಿ ಚಿನ್ನು ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಠಾಣೆ ಕರೆತಂದ ಪೊಲೀಸರು:ಪತಿ ಆತ್ಮಹತ್ಯೆ ಹಿನ್ನಲೆಯಲ್ಲಿ ಮೃತ ಮಂಜುನಾಥ್ ಪತ್ನಿ ನಯನಳನ್ನು ಜ್ಞಾನಭಾರತಿ ಠಾಣೆಗೆ ಪೊಲೀಸರು ಕರೆತಂದು ರಕ್ಷಣೆ ನೀಡಿದ್ದಾರೆ. ಈ ಆತ್ಮಹತ್ಯೆಯಿಂದ ಮೃತ ಮಂಜುನಾಥ್ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಅನಾಹುತ ನಡೆಯಬಹುದು ಎಂದು ಅಂದಾಜಿಸಿ ನಯನಳಿಗೆ ಪೊಲೀಸರು ಭದ್ರತೆ ನೀಡಿದರು ಎನ್ನಲಾಗಿದೆ.

ಪತಿ ಕಿರುಕುಳ ತಾಳದೆ ದೂರವಾಗಿದ್ದೆ: ನಯನ

‘ತಾನು ಪತಿ ಮಂಜುನಾಥ್‌ ದೌರ್ಜನ್ಯ ಸಹಿಸಲಾರದೆ ದೂರನಾಗಿದ್ದೆ. ಸಣ್ಣಪುಟ ವಿಷಯಗಳನ್ನು ಮುಂದಿಟ್ಟು ಆತ ಕಿರುಕುಳ ಕೊಡುತ್ತಿದ್ದ. ನನ್ನ ಬದುಕೇ ಆತನಿಂದ ನಾಶವಾಯಿತು’ ಎಂದು ಪೊಲೀಸರ ಮುಂದೆ ಮೃತ ಮಂಜುನಾಥ್ ಪತ್ನಿ ನಯನ ಕಣ್ಣೀರಿಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ‘ಮದುವೆಯಾಗಿ ಎಂಟು ವರ್ಷಗಳು ಮಂಜುನಾಥ್‌ ಕೊಟ್ಟ ಎಲ್ಲ ಹಿಂಸೆಯನ್ನು ತಾಳ್ಮೆಯಿಂದ ಸಹಿಸಿಕೊಂಡು ಜೀವನ ಸಾಗಿಸಿದ್ದೆ. ಆದರೆ, ಆತ ಬದಲಾಗಲೇ ಇಲ್ಲ. ಕೊನೆಗೆ ಪತಿಯಿಂದ ಮಗನನ್ನು ಕರೆದುಕೊಂಡು ಪ್ರತ್ಯೇಕವಾದೆ. ಇದಾದ ನಂತರವು ಪದೇ ಪದೇ ಮನೆಗೆ ಬಂದು ಆತ ಗಲಾಟೆ ಮಾಡುತ್ತಲೇ ಇದ್ದ. ಈ ಸಂಬಂಧ ಪೊಲೀಸರಿಗೆ ಸಹ ದೂರು ಕೊಟ್ಟಿದ್ದೆ’ ಎಂದು ನಯನ ಹೇಳಿಕೆ ಕೊಟ್ಟಿರುವುದಾಗಿ ಮೂಲಗಳು ಹೇಳಿವೆ.

Share this article